ಬೆಂಗಳೂರು: ಬೆಂಗಳೂರಿನ ಮೂಡಲ ಪಾಳ್ಯದಲ್ಲಿ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ಸ್ಥಳದಲ್ಲಿ ಗ್ಯಾಸ್ ಲೀಕ್ ಆಗಿದೆ. ಮೂಲಪಾಳ್ಯ ಸರ್ಕಲ್ ನ ಮನೆಯೊಂದರಲ್ಲಿ ಗ್ಯಾಸ್ ರೀ ಫಿಲ್ಲಿಂಗ್ ನಡೆಯುತ್ತಿದ್ದ ವೇಳೆ ಸಿಲಿಂಡರ್ ಲೀಕ್ ಅಗಿ ಹೊತ್ತಿಕೊಂಡ ಬೆಂಕಿಯಿಂದ ಇಬ್ಬರಿಗೆ ಗಾಯಗಳಾಗಿವೆ. ಭಾರತ್ ಭವಾನಿ ಗ್ಯಾಸ್ ಏಜೆನ್ಸಿಯಲ್ಲಿ ಘಟನೆ ನಡೆದಿದ್ದು, ಇಲ್ಲಿ ಅಕ್ರಮವಾಗಿ ಸಣ್ಣ ಸಿಲಿಂಡರ್ ಗಳಿಗೆ ರೀಫಿಲ್ಲಿಂಗ್ ಮಾಡಲಾಗ್ತಿತ್ತು ಎಂದು ತಿಳಿದುಬಂದಿದೆ. ಹತ್ತಾರು ಸಿಲಿಂಡರ್ ಗಳು ಒಂದೆ ಕಡೆ ಇದ್ದವು. ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಸಿದ್ದಾರೆ. ಏಕಾಏಕಿ ಸಿಲಿಂಡರ್ ಲೀಕ್ ಅಗಿದ್ದರ ಪರಿಣಾಮ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಗೋವಿಂದರಾಜನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ನಿರ್ಮಾಣ ಹಂತದ ಪ್ರೆಸ್ಟಿಜ್ ಫಾಲ್‌ಕಾನ್ ಸಿಟಿ ಮಾಲ್ ನಲ್ಲಿ ಬೆಂಕಿ
ಮತ್ತೊಂದು ಘಟನೆಯಲ್ಲಿ ಕೋಣನಕುಂಟೆ ಕ್ರಾಸ್ ಮೆಟ್ರೋ ಸ್ಟೇಷನ್ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇಲ್ಲಿ ಪ್ರೆಸ್ಟಿಜ್ ಫಾಲ್‌ಕಾನ್ ಸಿಟಿ ಮಾಲ್ ನಿರ್ಮಾಣ ಆಗ್ತಿತ್ತು. ಕಾರ್ಮಿಕರು ಕಟ್ಟಡದ ಒಳಗೆ ಕೆಲಸ ಮಾಡ್ತಿದ್ದರು. ಕಳೆದೊಂದು ಗಂಟೆಯಿಂದ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟವಾದ ಹೊಗೆಯಿಂದ ರಸ್ತೆಯೂ ಕಾಣದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ದಟ್ಟ ಹೊಗೆ ಕಂಡು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಘಟನೆಯಲ್ಲಿ ಯಾವುದೆ ಜೀವ ಹಾನಿ ಸಂಭವಿಸಿರುವ ಮಾಹಿತಿ ಇಲ್ಲ.
ಮಂಡ್ಯ ಕಿರುಗಾವಲು: ಮನೆಯಲ್ಲಿ ಗ್ಯಾಸ್ ಸ್ಫೋಟ, ಹೊತ್ತಿ ಉರಿದ ಮನೆ, ಒಬ್ಬರ ಸ್ಥಿತಿ ಗಂಭೀರ
ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೊನಗನಹಳ್ಳಿಯಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸ್ಫೋಟ ಸಂಭವಿಸಿದ್ದು, ಮನೆ ಹೊತ್ತಿ ಉರಿದಿದೆ. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಗ್ಯಾಸ್ ಸೋರಿಕೆಯಾಗಿ ಮನೆ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ. ಗ್ರಾಮದ ಶಿವಣ್ಣ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ 1 ಲಕ್ಷ ನಗದು ಸೇರಿ ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ ಪಾದಾರ್ಥಗಳು ನಾಶವಾಗಿವೆ. ಕಿರುಗಾವಲು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 12:50 pm, Sat, 8 January 22