
ಬೆಂಗಳೂರು, ಜನವರಿ 19: ಜಿಬಿಎ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ರಾಜ್ಯ ಚುನಾವಣಾ ಆಯುಕ್ತರಾದ ಜಿ.ಎಸ್. ಸಂಗ್ರೇಶಿ ಸೇರಿದಂತೆ ಎಲ್ಲಾ ನಗರ ಪಾಲಿಕೆಗಳ ಆಯುಕ್ತರು ಭಾಗವಹಿಸಿದ್ದರು.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನಾಳೆಯಿಂದ ಆಕ್ಷೇಪಣೆ (ಅಬ್ಜೆಕ್ಷನ್) ಸಲ್ಲಿಸಲು ಅವಕಾಶ ನೀಡಲಾಗಿದ್ದು, ಫೆಬ್ರವರಿ 6ರವರೆಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಿರುವುದು, ಹೆಸರು ಬಿಟ್ಟು ಹೋಗಿರುವುದು, ಲಿಂಗ, ವಯಸ್ಸು ಅಥವಾ ವಿಳಾಸದ ತಪ್ಪುಗಳಿದ್ದರೆ ಅವನ್ನು ಈ ಅವಧಿಯಲ್ಲಿ ಸರಿಪಡಿಸಿಕೊಳ್ಳಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.
ನಾಳೆಯಿಂದಲೇ ಬೂತ್ ಲೆವೆಲ್ ಅಧಿಕಾರಿಗಳು (ಬಿಎಲ್‌ಓಗಳು) ಮನೆಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದು, ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯವನ್ನು ಕೈಗೊಳ್ಳಲಿದ್ದಾರೆ. ಇದರಿಂದ ಪಾರದರ್ಶಕ ಹಾಗೂ ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಉದ್ದೇಶವಿದೆ ಎಂದು ತಿಳಿಸಲಾಗಿದೆ.
ಪ್ರಕಟಿಸಲಾದ ಅಂಕಿಅಂಶಗಳ ಪ್ರಕಾರ, ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಒಟ್ಟು 88,91,411 ಮತದಾರರು ಇದ್ದಾರೆ. ಇದರಲ್ಲಿ 45,69,193 ಪುರುಷ ಮತದಾರರು, 43,20,583 ಮಹಿಳಾ ಮತದಾರರು ಹಾಗೂ 1,635 ಇತರೆ ವರ್ಗದ ಮತದಾರರು ಸೇರಿದ್ದಾರೆ.
ಕರಡು ಮತದಾರರ ಪಟ್ಟಿ ಪರಿಶೀಲನೆ ಹಾಗೂ ಅಂತಿಮ ಪಟ್ಟಿಯ ಪ್ರಕಟಣೆ ಬಳಿಕ, ಮೇ 25ರ ನಂತರ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ಮೂಲಗಳು ತಿಳಿಸಿವೆ.
ಒಟ್ಟು ವಾರ್ಡ್-369, ಮತಗಟ್ಟೆಗಳು-8044, ಮತದಾರರು-88,91,411, ಒಟ್ಟು ಮತಗಟ್ಟೆಗಳ ಸಂಖ್ಯೆ 8044
ವರದಿ: ಅರುಣ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.