
ಬೆಂಗಳೂರು, ಫೆಬ್ರವರಿ 14: ಬೆಂಗಳೂರು ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಭಾರೀ ಚಿನ್ನ ಕಳ್ಳತನದ (Gold robbery) ಘಟನೆ ನಡೆದಿದ್ದು, ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ನಿಂದಲೇ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಬ್ಯಾಂಕ್‌ನಲ್ಲಿ ಅಡ ಇಟ್ಟಿದ್ದ ಗ್ರಾಹಕರ ಚಿನ್ನಾಭರಣವನ್ನು ಕದ್ದು ಬೆಟ್ಟಿಂಗ್ ಗೇಮ್ ಆಡುವ ಚಟಕ್ಕಿಳಿದಿದ್ದ ಈತ, ಸುಮಾರು 4 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಜೇಬಿಗಿಳಿಸಿಕೊಂಡಿದ್ದಾನೆಂದು ಆರೋಪಿಸಲಾಗಿದೆ.
ಕಿರಣ್ ಕುಮಾರ್ ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಿದ್ದು, ಲಾಕರ್ ಕೀ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹತ್ತಿರ ಇದ್ದ ಕಾರಣ, ಮ್ಯಾನೇಜರ್ ಅವರ ಅನುಪಸ್ಥಿತಿಯಲ್ಲಿ ಸ್ವಲ್ಪಸ್ವಲ್ಪ ಚಿನ್ನ ಕದಿಯುತ್ತಿದ್ದ . ಜನವರಿ 2ರಂದು ಗ್ರಾಹಕರು ತಮ್ಮ ಅಡವಿಟ್ಟ ಚಿನ್ನ ಪಡೆಯಲು ಬಂದಾಗ ಲಾಕರ್ ಪರಿಶೀಲನೆ ನಡೆಸಿದ ವೇಳೆ ಕೆಲವು ಚಿನ್ನಾಭರಣಗಳ ನಾಪತ್ತೆ ಪತ್ತೆಯಾಗಿತ್ತು. ಬಳಿಕ ಇತರೆ ಪ್ಯಾಕೇಟ್ ಪರಿಶೀಲಿಸಿದ ಮ್ಯಾನೇಜರ್ 21 ಪ್ಯಾಕೇಟ್‌ಗಳಲ್ಲಿ ಕೆಲವು ಹಾಗೂ 3 ಪ್ಯಾಕೇಟ್‌ಗಳಲ್ಲಿ ಸಂಪೂರ್ಣ ಚಿನ್ನ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಈ ವೇಳೆ ಸುಮಾರು 4 ಕೋಟಿ ರೂ. ಮೌಲ್ಯದ 2,783 ಗ್ರಾಂ ಚಿನ್ನ ಕಾಣೆಯಾಗಿದೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಇದನ್ನೂ ಓದಿ ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಐವರು ಆರೋಪಿಗಳ ಬಂಧನ; 2 ಲಕ್ಷ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ಸೀಜ್
ಆಂತರಿಕ ವಿಚಾರಣೆ ವೇಳೆ ಕೃತ್ಯ ತಪ್ಪೊಪ್ಪಿಕೊಂಡಿದ್ದ ಕಿರಣ್, ಕದ್ದ ಚಿನ್ನವನ್ನು ಬೇರೆ ಬೇರೆ ಅಂಗಡಿಯಲ್ಲಿ ಗಿರವಿ ಹಾಕಿ ಬಂದ ಹಣವನ್ನು ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ಬಳಸಿದ್ದನು ಎನ್ನಲಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಗಿರಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ತನಿಖೆ ನಂತರ ಕಿರಣ್ ಕುಮಾರ್ ಬಂಧಿತರಾಗಿದ್ದಾರೆ. ಈಗಾಗಲೇ 700 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಉಳಿದ ಚಿನ್ನ ಮತ್ತು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:23 am, Sat, 14 February 26