Go First: ನಾವು ತಗೊಂಡಿದ್ದು ಫ್ಲೈಟ್ ಟಿಕೆಟ್, ಸ್ವಲ್ಪನಾದ್ರೂ ಮರ್ಯಾದೆ ಬೇಡ್ವಾ: ಪ್ರಯಾಣಿಕರನ್ನು ಬಿಟ್ಟು ಹಾರಿದ ಗೋ ಫಸ್ಟ್ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ
Bengaluru Airport: ಬೆಂಗಳೂರು-ದೆಹಲಿ ಮಾರ್ಗದ ವಿಮಾನವು ಪ್ರಯಾಣಿಕರು ಹತ್ತುವ ಮೊದಲೇ ಹಾರಾಟ ಅರಂಭಿಸಿತು
ಬೆಂಗಳೂರು: ದೆಹಲಿಗೆ ಹೊರಟಿದ್ದ ‘ಗೋ ಫಸ್ಟ್’ (Go First) ಕಂಪನಿಯ ವಿಮಾನವು ಪ್ರಯಾಣಿಕರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ (KIAL) ಬಿಟ್ಟು ಹಾರಿದೆ. ಈ ಸಂಗತಿಯು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ‘ಈ ಕಂಪನಿಯ ಸಿಬ್ಬಂದಿ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ? ಕೊನೆಯ ಕ್ಷಣದ ತಪಾಸಣೆ ಎಂಬುದು ಇರುವುದಿಲ್ಲವೇ? ತೂಕಡಿಸುತ್ತಾ ವಿಮಾನ ಹಾರಿಸುತ್ತಾರಾ’ ಎಂದೆಲ್ಲಾ ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋ ಫಸ್ಟ್ ಈವರೆಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪ್ರಯಾಣಿಕರಿಗೆ ಆಗಿರುವ ತೊಂದರೆಗೆ ವಿಷಾದ ವ್ಯಕ್ತಪಡಿಸಿದೆ.
ಸಕಾಲಕ್ಕೆ ವಿಮಾನ ನಿಲ್ದಾಣ ತಲುಪಿದ್ದೆವು. ಗೋ ಫಸ್ಟ್ ಕಂಪನಿಯ G8-116 ವಿಮಾನದಲ್ಲಿ ದೆಹಲಿಗೆ ತೆರಳಲು ಟಿಕೆಟ್ ಕಾಯ್ದಿರಿಸಿದ್ದೆವು. ಬಸ್ಸುಗಳಲ್ಲಿ ನಮ್ಮನ್ನು ವಿಮಾನ ನಿಂತಿದ್ದ ಸ್ಥಳಕ್ಕೆ ಕರೆದೊಯ್ಯಲಾಯಿತು. ಮೊದಲ ಬಸ್ಸಿನಲ್ಲಿದ್ದ ಪ್ರಯಾಣಿಕರು ವಿಮಾನ ಹತ್ತಿದ ತಕ್ಷಣವೇ ವಿಮಾನವೂ ಹಾರಾಟ ಆರಂಭಿಸಿತು. ಇದು ಸೋಮವಾರ ಮುಂಜಾನೆ 6.40ಕ್ಕೆ ದೆಹಲಿಯತ್ತ ಹೊರಟಿತು ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ.
‘ಬೆಂಗಳೂರು-ದೆಹಲಿ ಮಾರ್ಗದ ವಿಮಾನವು ಪ್ರಯಾಣಿಕರು ಹತ್ತುವ ಮೊದಲೇ ಹಾರಾಟ ಅರಂಭಿಸಿತು! ಒಂದು ಬಸ್ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನದ ಸಮೀಪವೇ ಬಂದಿದ್ದರು. ಕನಿಷ್ಠ ತಪಾಸಣೆಗಳೂ ಇಲ್ಲದೆ ಇವರು ಕೆಲಸ ಮಾಡುತ್ತಿದ್ದಾರಾ’ ಎಂದು ಸತೀಶ್ ಕುಮಾರ್ ಎನ್ನುವ ಪ್ರಯಾಣಿಕರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
Flight G8 116 (BLR – DEL) flew leaving passengers on ground! More than 50 passengers on 1 bus was left on ground & flight took off with just passengers of 1 bus on boarded. Is @GoFirstairways @JM_Scindia @PMOIndia operating in sleep? No Basic checks. pic.twitter.com/QSPoCisIfc
— Satish Kumar (@Satishk98130718) January 9, 2023
ಟ್ವಿಟರ್ನಲ್ಲಿ ಅನುಭವ ಹಂಚಿಕೊಂಡಿರುವ ಶ್ರೇಯಾ ಸಿನ್ಹಾ ಹೆಸರಿನ ಮತ್ತೊಬ್ಬ ಪ್ರಯಾಣಿಕರು, ‘ನಾನು ಹತ್ತಬೇಕಿದ್ದ ವಿಮಾನವು 6.:30ಕ್ಕೆ ಹಾರಾಟ ಆರಂಭಿಸಿತು. ನಾನು ಮತ್ತು ಇತರ ಪ್ರಯಾಣಿಕರು 5:35ಕ್ಕೆ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸಂಸ್ಥೆಯ ಬಸ್ ಹತ್ತಿದ್ದೆವು. ಬಸ್ ಚಾಲಕನ ಮೇಲೆ ಒತ್ತಡ ಹೇರಿ ಬಸ್ ನಿಲ್ಲಿಸಲಾಯಿತು. ವಿಮಾನವು ನಾವು ಹತ್ತುವ ಮೊದಲೇ ಹಾರಿಬಿಟ್ಟಿತ್ತು. ಇದು ನಿರ್ಲಕ್ಷ್ಯದ ಪರಮಾವಧಿ’ ಎಂದು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಗೋ ಫಸ್ಟ್ ಕಂಪನಿಯಿಂದ ವಿವರಣೆ ಕೇಳಲಾಗಿದೆ. ತಪ್ಪಾಗಿರುವುದು ದೃಢಪಟ್ಟರೆ ನಿಯಮಗಳ ಪ್ರಕಾರ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (Directorate General of Civil Aviation – DGCA) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Moscow-Goa flight: ಬಾಂಬ್ ಬೆದರಿಕೆ ಕರೆ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಿದ ಮಾಸ್ಕೋ-ಗೋವಾ ಅಂತಾರಾಷ್ಟ್ರೀಯ ವಿಮಾನ
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 am, Tue, 10 January 23