DL Testing Rules: ಡಿಎಲ್ ಟೆಸ್ಟ್ಗೆ ಹೊಸ ರೂಲ್ಸ್, ಈ 24 ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಆಯುಕ್ತರ ಆದೇಶ
ಸಾರಿಗೆ ಆಯುಕ್ತರು 24 ಹೊಸ ರೂಲ್ಸ್ಗಳು ಜಾರಿ ಮಾಡಿ ಆದೇಶಿಸಿದ್ದಾರೆ. ಪರೀಕ್ಷೆಯ ವೇಳೆ ಬೇರೆ ವಾಹನ ಓವರ್ಟೆಕ್ ಮಾಡುವುದು ಕಡ್ಡಾಯವಾಗಿದೆ. ಓವರ್ ಟೇಕ್ ಮಾಡುವಾಗ ಅವಘಡವಾದ್ರೆ ಯಾರು ಹೊಣೆ?
ಬೆಂಗಳೂರು: ಡಿಎಲ್ ಪರೀಕ್ಷೆ (DL Testing Rules) ವೇಳೆ ಪರೀಕ್ಷೆಯ ವೇಳೆ ಬೇರೆ ವಾಹನ ಓವರ್ಟೆಕ್ ಮಾಡುವುದು ಕಡ್ಡಾಯ ಸೇರಿದಂತೆ ಒಟ್ಟು 24 ಹೊಸ ನಿಯಮಗಳನ್ನು ಜಾರಿ ಮಾಡಿ ರಸ್ತೆ ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಆಯುಕ್ತರು ಆದೇಶಿಸಿದ್ದಾರೆ. ಸಾರಿಗೆ ಇಲಾಖೆಯ ಆಘಾತಕಾರಿ ಆದೇಶಕ್ಕೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ಹೆಚ್ಚುತ್ತಿರುವ ರಸ್ತೆ ಅಪಘಾತ ತಡೆಯುವ ಉದ್ದೇಶದಿಂದ ಕೇಂದ್ರ ಮೋಟಾರು ವಾಹನ 1989 ನಿಯಮ 15ರ ಅಡಿ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಅಭ್ಯರ್ಥಿಗಳ ನೈಪುಣ್ಯತೆ ಹೆಚ್ಚಿಸಲು 24 ಕ್ರಮಗಳನ್ನ ಜಾರಿ ಮಾಡಲಾಗಿದೆ. ಈ ನಿಯಮದ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಮಾತ್ರ ಡಿಎಲ್ ಲಭ್ಯವಾಗಲಿದೆ.
ಡಿಎಲ್ ಪರೀಕ್ಷೆಯ ಹೊಸ ನಿಯಮಗಳು
- ಗಮನ ವಿಚಲಿತವಾಗದೆ ಏಕಾಗ್ರತೆಯಲ್ಲಿ ಚಾಲನೆ ಮಾಡಬೇಕು
- ಚಾಲನಾ ಪರೀಕ್ಷಾ ಪಥ, ಲಭ್ಯವಿರುವ ಸ್ಥಳದಲ್ಲಿ ಟೆಸ್ಟ್ ಮಾಡಬಹುದು
- ಡಿಎಲ್ ಟೆಸ್ಟ್ ವೇಳೆ ಟಾಪ್ ಗೇರ್ವರೆಗೆ ವಾಹನವನ್ನ ಓಡಿಸಬೇಕು
- ಟೆಸ್ಟ್ ವೇಳೆ ಅಭ್ಯರ್ಥಿಗಳು ಟಾಪ್ ಗೇರ್ಗಳನ್ನ ಸಹ ಬಳಸಬೇಕು
- ಸ್ವಯಂ ಚಾಲಿತ, ಟ್ರ್ಯಾಕ್ಗಳಲ್ಲಿ ಟಾಪ್ ಗೇರ್ಗಳನ್ನ ಬಳಸಬಹುದು
- 30-40 ಕಿ.ಮೀ ವೇಗದಲ್ಲಿ ಹೋದಾಗ ಟಾಪ್ ಗೇರ್ನಲ್ಲಿ ಹಾಕಬೇಕು
- ಪರೀಕ್ಷೆಯ ವೇಳೆ ಬೇರೆ ವಾಹನವನ್ನ ಓವರ್ಟೆಕ್ ಮಾಡಬೇಕು
- ಹಿಂಬದಿಯ ಕನ್ನಡಿಯನ್ನು ಸರಿ ಹೊಂದಿಸಿ
- ಎಂಜಿನ್ ಪ್ರಾರಂಭಿಸುವ ಮೊದಲು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ
- ಒಂದು ಕೋನದಲ್ಲಿ ಸುರಕ್ಷಿತವಾಗಿ ಮತ್ತು ಸರಾಗವಾಗಿ ನೇರವಾಗಿ ಮುಂದಕ್ಕೆ ಚಲಿಸಿ, ಅದೇ ಸಮಯದಲ್ಲಿ ಟಾಪ್ ಗೇರ್ ತಲುಪುವವರೆಗೆ ಎಲ್ಲಾ ಗೇರ್‌ಗಳನ್ನು ಬಳಸಬೇಕು.
- ಟ್ರಾಫಿಕ್ ಸಿಕ್ಕಾಗ ಟಾಪ್ ಗೇರ್‌ನಿಂದ ತ್ವರಿತವಾಗಿ ಕಡಿಮೆ ಗೇರ್‌ಗಳಿಗೆ ಬದಲಾಯಿಸಬೇಕು
- ಇಳಿಜಾರು ಚಾಲನೆ ಮಾಡುವಾಗ ಗೇರ್ ಕಡಿಮೆ ಮಾಡಬೇಕು
- ಹ್ಯಾಂಡ್ ಬ್ರೇಕ್ ಮತ್ತು ಫುಟ್ ಬ್ರೇಕ್ ಅನ್ನು ಸರಿಯಾಗಿ ಬಳಸುವುದರ ಮೂಲಕ ಕಡಿದಾದ ಮೇಲ್ಮುಖವಾದ ಇಳಿಜಾರಿನಲ್ಲಿ ವಾಹನವನ್ನು ನಿಲ್ಲಿಸಿ ಮತ್ತು ಮರು ಸ್ಟಾರ್ಟ್ ಮಾಡಿ, ಸಿಗ್ನಲ್ ಮಾಡುವ ಮೊದಲು ಕನ್ನಡಿಯನ್ನು ವೀಕ್ಷಿಸಿ ಹಿಂಭಾಗವನ್ನು ಗಮನಿಸಿ, ನಂತರ ಬಲ ಮತ್ತು ಎಡಕ್ಕೆ ಸರಿಯಾಗಿ ತಿರುಗಿಸಬೇಕು.
- ಓವರ್‌ಟೇಕ್ ಮಾಡುವುದು, ಓವರ್‌ಟೇಕ್ ಮಾಡಲು ಅನುಮತಿಸುವುದು, ಸೂಕ್ತವಾದ ಸಂಕೇತಗಳನ್ನು ನೀಡುವುದು ಸೂಕ್ತ ಸಮಯದಲ್ಲಿ ಸೂಕ್ತ ಸಂಚಾರ ಸಂಕೇತಗಳನ್ನು ನೀಡಬೇಕು. ಕೈಯಿಂದ ಅಥವಾ ವಾಹನಕ್ಕೆ ಅಳವಡಿಸಲಾದ ಇಂಡಿಕೇಟರ್ ಅಥವಾ ಲೈಟ್ ಮೂಲಕ ಸೂಚಿಸಬೇಕು.
- ಸರಿಯಾದ ಸಂಕೇತಗಳೊಂದಿಗೆ ಮತ್ತು ಸರಿಯಾದ ಕಾಳಜಿಯೊಂದಿಗೆ ಲೇನ್ಗಳನ್ನು ಬದಲಾಯಿಸಬೇಕು.
- ತುರ್ತು ಪರಿಸ್ಥಿತಿಯಲ್ಲಿ ಅಥವಾ ಇನ್ಯಾವುದೇ ಪರಿಸ್ಥಿತಿ ಎದುರಾದಾಗ ವಾಹನ ನಿಲ್ಲಿಸಬೇಕು ಮತ್ತು ನಂತರ ಸೂಕ್ತವಾದ ಸಂಕೇತಗಳನ್ನು ನೀಡುವ ಮೂಲಕ ಸುರಕ್ಷಿತವಾಗಿ ಸೂಕ್ತ ಸ್ಥಳದಲ್ಲಿ ನಿಲ್ಲಿಸಬೇಕು.
- ಹಿಮ್ಮುಖ ಚಾಲನೆ ಸಂದರ್ಭದಲ್ಲಿ (ರಿವರ್ಸ್ ತೆಗೆಯುವುದು) ಸರಿಯಾಗಿ ಮತ್ತು ನಿರ್ದಿಷ್ಟವಾಗಿ ಎಡ ಅಥವಾ ಬಲಕ್ಕೆ ತೆಗೆಯಬೇಕು. ಸಂಚಾರ ಚಿಹ್ನೆಗಳು, ಟ್ರಾಫಿಕ್ ದೀಪಗಳು, ಸಂಚಾರ ನಿಯಂತ್ರಕರು, ಪೊಲೀಸರು ನೀಡಿದ ಸಂಕೇತಗಳ ಮೇಲೆ ಸರಿಯಾದ ಮತ್ತು ತ್ವರಿತ ಕ್ರಮವನ್ನು ತೆಗೆದುಕೊಳ್ಳಿ ಮತ್ತು ಇತರ ರಸ್ತೆ ಬಳಕೆದಾರರು ನೀಡುವ ಚಿಹ್ನೆಗಳ ಮೇಲೆ ಗಮನವಿರಬೇಕು
- ರಸ್ತೆಗಳನ್ನು ದಾಟುವ ವ್ಯಕ್ತಿಗಳಿಗೆ ಆದ್ಯತೆ ನೀಡಬೇಕು, ಟ್ರಾಫಿಕ್ ದೀಪಗಳು ಅಥವಾ ಟ್ರಾಫಿಕ್ ಪೋಲಿಸರಿಂದ ನಿಯಂತ್ರಿಸಲ್ಪಡದ ಪಾದಚಾರಿ ದಾಟುವಿಕೆಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿ.
- ಎಡ ಭಾಗದಲ್ಲಿ ವಾಹನ ಚಾಲನೆ ಮಾಡಬೇಕು
- ವಿಭಿನ್ನ ರಸ್ತೆ ಮತ್ತು ಸಂಚಾರ ಪರಿಸ್ಥಿತಿಗಳಿಗೆ ಅನುಗುಣವಾಗಿ ವೇಗವನ್ನು ನಿಯಂತ್ರಿಸಿ
- ಆತ್ಮವಿಶ್ವಾದಲ್ಲಿ ಸ್ಟೇರಿಂಗ್ ಮತ್ತು ನಯವಾದ ಗೇರ್ ಬದಲಾಯಿಸುವ ಮತ್ತು ಅಗತ್ಯವಿದ್ದಾಗ ಬ್ರೇಕ್ ಹಾಕುವ ಮೂಲಕ ವಾಹನದ ಸಾಮಾನ್ಯ ನಿಯಂತ್ರಣವನ್ನು ಪ್ರದರ್ಶಿಸಿ
- ನೇರವಾಗಿ ಚಾಲನೆ ಮಾಡುವಾಗ, ಬಲಕ್ಕೆ ತಿರುಗುವಾಗ, ಎಡಕ್ಕೆ ತಿರುಗುವಾಗ ಮತ್ತು ಜಂಕ್ಷನ್‌ನಲ್ಲಿ ಸರಿಯಾದ ಬದಿಯನ್ನು ಬಳಸಿ ಎಕ್ಸಲೇಟರ್, ಕ್ಲಚ್, ಗೇರ್, ಬ್ರೇಕ್, ಸ್ಟೀರಿಂಗ್ ಮತ್ತು ಹಾರ್ನ್ ಸರಿಯಾಗಿ ಬಳಸಿಕೊಳ್ಳಿ
- ಸಂಚರಿಸುವಾಗ ಪಾದಚಾರಿಗಳು, ಇತರ ವಾಹನಗಳ ಚಾಲಕರು ಮತ್ತು ಸೈಕ್ಲಿಸ್ಟ್‌ಗಳ ಸುರಕ್ಷತೆಯನ್ನೂ ಗಮನಿಸಿ
- ಅಡ್ಡ ರಸ್ತೆಗಳಲ್ಲಿ ಮತ್ತು ರಸ್ತೆ ಜಂಕ್ಷನ್‌ಗಳಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ: (ವೇಗದ ಹೊಂದಾಣಿಕೆ ಮಾಡಿಕೊಳ್ಳಬೇಕು, ಹಿಂಬದಿಯ ಕನ್ನಡಿಯನ್ನು ಸರಿಯಾಗಿ ಬಳಕೆ ಮಾಡಬೇಕು, ಬಲಕ್ಕೆ ಅಥವಾ ಎಡಕ್ಕೆ ತಿರುಗುವ ಮೊದಲು ಮತ್ತು ನಂತರ ವಾಹನದ ಸ್ಥಾನ ಗಮನಿಸಬೇಕು, ಬಲಗೈ ಮೂಲಕ ಸಿಗ್ನಲ್ ಮಾಡಿವುದು, ದಾಟುವ ಮುನ್ನ ಬಲ, ಎಡ ಮತ್ತು ಬಲಕ್ಕೆ ಮತ್ತೆ ನೋಡಬೇಕು)
ಡಿಎಲ್ ಟೆಸ್ಟಿಂಗ್ ರೂಲ್ಸ್ ಆದೇಶಕ್ಕೆ ಆಕ್ಷೇಪ
ಜಾರಿಗೆ ತಂದ 24 ನಿಯಮ ಪಾಲಿಸುವಷ್ಟು ವ್ಯವಸ್ಥೆ ನಮ್ಮಲ್ಲಿಲ್ಲ. ಜ್ಞಾನ ಭಾರತಿ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಾತ್ರ ಟ್ರ್ಯಾಕ್ ಇದೆ. ಹತ್ತಾರು ವರ್ಷ ಅನುಭವವಿರುವವರು ಸಹ ಪಾಸ್ ಆಗುವುದು ಕಷ್ಟ. ದ್ವಿಚಕ್ರ ವಾಹನ ಪರೀಕ್ಷೆ ವೇಳೆ ನಿಯಮ ಪಾಲನೆ ಮಾಡಬಹುದು. ಆದರೆ ನಾಲ್ಕು ಚಕ್ರದ ವಾಹನಗಳ ಪರೀಕ್ಷೆ ವೇಳೆ ನಿಯಮ ಪಾಲಿಸಲಾಗುವುದಿಲ್ಲ. ಟೆಸ್ಟ್ ಟ್ರ್ಯಾಕ್ನಲ್ಲಿ ಟಾಪ್ ಗೇರ್ನಲ್ಲಿ ಹೋಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಮತ್ತು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
30-40 ಕಿ.ಮೀ ವೇಗವಾಗಿ ಹೋಗುವ ಟ್ರ್ಯಾಕ್ ನಗರದಲ್ಲಿಲ್ಲ. ಕಲಿಯುತ್ತಿರುವವರು ಓವರ್ ಟೇಕ್ ಮಾಡುವಾಗ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಒಂದೊಮ್ಮೆ ಅವಘಡ ಸಂಭವಿಸಿದರೆ ಡಿಎಲ್ ಇಲ್ಲದಿರುವ ಕಾರಣ ವಿಮೆ ಸಿಗುವುದಿಲ್ಲ. ಸ್ಟಾರ್ಟ್, ರಿವರ್ಸ್ ಹಾಗೂ ಗೇರ್ ನಿಯಮ ಪಾಲಿಸಬಹುದು. ಆದರೆ ಜಾರಿಯಾದ 24 ಅಂಶಗಳನ್ನ ಪಾಲಿಸುವುದು ತುಂಬ ಕಷ್ಟ. ಹೀಗಾಗಿ ನಿತ್ಯ 3 ರಿಂದ 4 ಮಂದಿ ಮಾತ್ರ ಟೆಸ್ಟ್ಗೆ ಬರುತ್ತಿದ್ದಾರೆ ಎಂದು ಹೇಳುತ್ತಾರೆ.
ಡಿಎಲ್ ಪರೀಕ್ಷೆ ಹೊಸ ರೂಲ್ಸ್ ಬಗ್ಗೆ ಅಧಿಕಾರಿಗಳು ಹೇಳುವುದೇನು?
ಅಭ್ಯರ್ಥಿ ವಾಹನ ಸ್ಟಾರ್ಟ್ ಮಾಡಿದಕೂಡಲೇ ವಾಹನ ಬಿಡಲು ಬರತ್ತದೆಯೋ ಅಥವಾ ಇಲ್ಲವೋ ಎಂದು ಗೊತ್ತಾಗಲಿದೆ. ವಿವೇಚನೆಯ ಆಧಾರದ ಮೇಲೆ ಉತ್ತೀರ್ಣ ಮಾಡಬಹುದು. ಹೊಸ ನಿಯಯದಂತೆ ದಿನಕ್ಕೆ 4 ಮಂದಿಯನ್ನ ಪರೀಕ್ಷಿಸಬಹುದು. ಒಬ್ಬ ಅಭ್ಯರ್ಥಿಯ ಟೆಸ್ಟ್ಗೆ ಸುಮಾರು ಒಂದು ಗಂಟೆಬೇಕು. ಕಚೇರಿ ಕೆಲಸ ಬಿಟ್ಟು ನಾಲ್ವರಿಗೆ ಮಾತ್ರ ಟೆಸ್ಟ್ ಕೊಡಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ಆರ್ಟಿಒ ಕಚೇರಿಗೆ ನಿತ್ಯ 60 ರಿಂದ 100 ಅರ್ಜಿ ಬರುತ್ತದೆ. ದಿನಕ್ಕೆ ನಾಲ್ಕರಂತೆ 100 ಅರ್ಜಿ ವಿಲೇವಾರಿಗೆ 24 ದಿನ ಅಗತ್ಯವಾಗಿ ಬೇಕಾಗುತ್ತದೆ. ಇಷ್ಟು ವಿಳಂಬವಾದರೆ ರಾಜ್ಯದಾದ್ಯಂತ ಸಾವಿರಾರು ಅರ್ಜಿ ಉಳಿಕೆಯಾಗಬಹುದು. ಹೀಗಾಗಿ ಹಿಂದೆ ಇದ್ದ ವ್ಯವಸ್ಥೆ ಮುಂದುವರೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನೂ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 am, Tue, 10 January 23