Bengaluru: ಆರೇಳು ವರ್ಷದಲ್ಲಿ ಗುಂಡಿ ಮುಚ್ಚಲು ಬಿಬಿಎಂಪಿ ಖರ್ಚು ಮಾಡಿದ್ದು 25 ಸಾವಿರ ಕೋಟಿ, ಆದರೂ ರಸ್ತೆಗಳು ಗುಂಡಿಮಯ
ಬಿಬಿಎಂಪಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದರೂ ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳಿಗೆ ಮುಕ್ತಿ ಸಿಕ್ಕಿಲ್ಲ. 2015-16 ರಿಂದ 2022 ರವರೆಗೆ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ 25 ಸಾವಿರ ಕೋಟಿ ಖರ್ಚು ಮಾಡಿದೆ.
ಬೆಂಗಳೂರು: ನಗರದ ರಸ್ತೆಗಳು ಹೊಂಡಮಯವಾಗಿದ್ದು, ಅನೇಕ ಸಾವು-ನೋವುಗಳು ಸಂಭವಿಸಿವೆ. ಈ ನಿಟ್ಟಿನಲ್ಲಿ ಗುಂಡಿಗಳನ್ನು ಮುಚ್ಚಲು ಮುಂದಾದ ಬಿಬಿಎಂಪಿ (BBMP), 2015-16 ರಿಂದ 2022 ರವರೆಗೆ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ 25 ಸಾವಿರ ಕೋಟಿ ಖರ್ಚು ಮಾಡಿರುವುದು ತಿಳಿದುಬಂದಿದೆ. ಆದರೆ ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳಿಗೆ (Potholes In Bengaluru Road) ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ವರ್ಷ ಪೂರ್ತಿಯಾಗಿ ಕಾಮಗಾರಿಗಳನ್ನೇ ನಡೆಸುವ ಬಿಬಿಎಂಪಿ, ಶಾಶ್ವತಪರಿಹಾರ ಕಂಡುಹಿಡಿಯುವಲ್ಲಿ ವಿಫಲವಾಗಿದೆ. ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ 2015-16ನೇ ಸಾಲಿನಿಂದ 2022ರ ಮಾರ್ಚ್‌ವರೆಗೆ ರಸ್ತೆ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು ಬಿಡುಗಡೆಯಾಗಿರುವ ಎಲ್ಲ ವಿಧದ ಅನುದಾನಗಳ ವಿವರ ಟಿವಿ9 ಬಿಚ್ಚಿಡುತ್ತಿದೆ.
ಬೊಮ್ಮನಹಳ್ಳಿ ಕ್ಷೇತ್ರಕ್ಕೆ 1,673,68,54,382 ಕೋಟಿ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ 2,337,54,38,933 ಕೋಟಿ, ಮಲ್ಲೇಶ್ವರಂ ಕ್ಷೇತ್ರಕ್ಕೆ 1,089,77,54,550 ಕೋಟಿ, ಪದ್ಮನಾಭನಗರಕ್ಕೆ 1,217,59,73,975 ಕೋಟಿ, ರಾಜರಾಜೇಶ್ವರಿನಗರ 2,334,30,04,600 ಕೋಟಿ, ಯಶವಂತಪುರಕ್ಕೆ 2,346,52,34,761 ಕೋಟಿ, ಕೆಆರ್ ಪುರ 2,268,95,93,772 ಕೋಟಿ, ಮಹಾಲಕ್ಷ್ಮಿ ಬಡಾವಣೆ 1,997,63,18,176 ಕೋಟಿ, ಮಹದೇವಪುರ 1,186,76,81,668 ಕೋಟಿ, ಸಿ.ವಿ.ರಾಮನ್ ನಗರಕ್ಕೆ 1,089,97,09,211 ಕೋಟಿ, ಚಿಕ್ಕಪೇಟೆ ಕ್ಷೇತ್ರಕ್ಕೆ 918,97,22,509 ಕೋಟಿ, ಯಲಹಂಕ ಕ್ಷೇತ್ರಕ್ಕೆ 1,251,81,72,540 ಕೋಟಿ, ಹೀಗೆ 28 ಕ್ಷೇತ್ರಗಳಲ್ಲಿ ಒಟ್ಟು 19,723,64,59,041 ಕೋಟಿ ಖರ್ಚು ಮಾಡಲಾಗಿದೆ.
ಇದನ್ನೂ ಓದಿ: ಇಡಿ ಅಧಿಕಾರಿಗಳು ಫಿಲ್ಡ್ಗೆ ಇಳಿದು ಹುಡುಕಿದ್ರು ಸಿಗದ ಬಿಬಿಎಂಪಿ ಕೊರೆದ 9,588 ಕೊಳವೆ ಬಾವಿಗಳು
ಜುಲೈನಲ್ಲಿ ಅಮೃತ ನಗರೋತ್ಥಾನ ಯೋಜನೆಯಲ್ಲಿ ಅನುಮೋದನೆಯಾಗಿರುವ 6 ಸಾವಿರ ಕೋಟಿ ರೂಪಾಯಿಯಲ್ಲಿ ಅರ್ಧದಷ್ಟನ್ನು ರಸ್ತೆಗಾಗಿಯೇ ವ್ಯಯ ಮಾಡಲಾಗಿದೆ. ಇದಲ್ಲದೆ, ಕಳೆದ ಬಾರಿಯ ಬಿಬಿಎಂಪಿ ಬಜೆಟ್‌ನ ದುಡ್ಡು ರಸ್ತೆಗೆ ವ್ಯಯ ಮಾಡಲಾಗಿದೆ. ಆ ಮೂಲಕ ಒಟ್ಟು ರಸ್ತೆಗೆ ಅಂತಾ 25 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಹಾಗಿದ್ದರೆ 25 ಸಾವಿರ ಕೋಟಿ ಖರ್ಚು ಮಾಡಿದ್ದು ಎಲ್ಲಿ?
ಅಸಲಿಗೆ ಬೆಂಗಳೂರಿನಲ್ಲಿ ಇರುವುದು ಕೇವಲ 13 ಸಾವಿರ ಕಿ.ಮೀ ರಸ್ತೆ. 13 ಸಾವಿರ ಕಿ.ಮೀ. ರಸ್ತೆ ಪೈಕಿ ಇದರಲ್ಲಿ ವಾರ್ಡ್ ರಸ್ತೆಗಳ ಉದ್ದ 11 ಸಾವಿರ ಕಿ.ಮೀ. ಇದಕ್ಕಾಗಿ 25 ಸಾವಿರಕ್ಕೂ ಹೆಚ್ಚು ಹಣ ವ್ಯಯ ಮಾಡಲಾಗಿದೆ. ಸಾವಿರಾರು ಕೋಟಿ ಖರ್ಚು ಮಾಡಿದರೂ ನಗರದಲ್ಲಿ ಗುಂಡಿ ಇಲ್ಲದ, ಪಾದಚಾರಿ ಮಾರ್ಗ ಸೇರಿ ಇತರೆ ಸಮಸ್ಯೆ ಇಲ್ಲದ ಒಂದು ರಸ್ತೆಗೂ ಹುಡುಕಾಡಬೇಕು.
ಮಾರ್ಚ್ ತಿಂಗಳಲ್ಲಿ ಬಿಬಿಎಂಪಿ ಹಾಗೂ ಸರ್ಕಾರದ ಬಜೆಟ್ ಮಂಡನೆ ಸಾಧ್ಯತೆ ಇದೆ. ಈಬಾರಿ ಬಜೆಟ್ನಲ್ಲೂ ರಸ್ತೆ ನಿರ್ಮಾಣಕ್ಕೆ ಸಾವಿರಾರು ಕೋಟಿ ಮೀಸಲಿಡಲು ತೀರ್ಮಾನ ಮಾಡಲಾಗಿದೆ. 25 ಸಾವಿರ ಕೋಟಿ ಖರ್ಚು ಮಾಡಿದ್ದರೂ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳೇ ಕಾಣಿಸಿಕೊಳ್ಳುತ್ತಿವೆ. ಮುಂದಿನ ಬಜೆಟ್ನಲ್ಲೂ ಸಾವಿರಾರು ಕೋಟಿ ಮೀಸಲಿಡುತ್ತಿದೆ. ಹಾಗಿದ್ದರೆ ರಸ್ತೆ ನಿರ್ಮಾಣದ ಹೆಸರಲ್ಲಿ ಸಾವಿರಾರು ಕೋಟಿ ಗುಳಂ ಮಾಡಲಾಗುತ್ತಿದ್ಯಾ? ಬಿಬಿಎಂಪಿಗೆ ರಸ್ತೆ ನಿರ್ಮಾಣದ ಯೋಜನೆ ಚಿನ್ನದ ಮೊಟ್ಟೆ ಇಡುವ ಯೋಜನೆಯಾದಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 am, Tue, 10 January 23