ಇಡಿ ಅಧಿಕಾರಿಗಳು ಫಿಲ್ಡ್​​ಗೆ ಇಳಿದು ಹುಡುಕಿದ್ರು ಸಿಗದ ಬಿಬಿಎಂಪಿ ಕೊರೆದ 9,588 ಕೊಳವೆ ಬಾವಿಗಳು

2016 ರಿಂದ 2018ವರೆಗೂ ನಡೆದ ಬೃಹತ್ ಭ್ರಷ್ಟಾಚಾರದ ಬೆನ್ನು ಬಿದ್ದಿದೆ ಜಾರಿ ನಿರ್ದೇಶನಾಲಯ. ಬಿಬಿಎಂಪಿಯಿಂದ ಕೊರೆದಿರುವ ಸಾವಿರಾರರು ಕೊಳೆವೆ ಬಾವಿಗಳು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳ ಕಣ್ಣಿಗೆ ಬೀಳುತ್ತಿಲ್ಲ.

ಇಡಿ ಅಧಿಕಾರಿಗಳು ಫಿಲ್ಡ್​​ಗೆ ಇಳಿದು ಹುಡುಕಿದ್ರು ಸಿಗದ ಬಿಬಿಎಂಪಿ ಕೊರೆದ 9,588 ಕೊಳವೆ ಬಾವಿಗಳು
ಬಿಬಿಎಂಪಿ ಮತ್ತು ಜಾರಿ ನಿರ್ದೇಶನಾಲಯ
Follow us
TV9 Web
| Updated By: Rakesh Nayak Manchi

Updated on:Jan 06, 2023 | 8:56 AM

ಬೆಂಗಳೂರು: ನಗರದಲ್ಲಿ ಕೊಳವೆ ಬಾವಿ (Borewells) ಹಾಗೂ ಶುದ್ಧಕುಡಿಯುವ ನೀರಿನ ಘಟಕ (Drinking water plants) ಸ್ಥಾಪನೆ ವಿಚಾರದಲ್ಲಿ ನಡೆದ ಮಹಾ ಭ್ರಷ್ಟಾಚಾರದ (Corruption) ಬೆನ್ನು ಬಿದ್ದ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವಂತಾಗಿದೆ. ಬಿಬಿಎಂಪಿ (BBMP) ವತಿಯಿಂದ ಕೊರೆಯಲಾದ ಸಾವಿರಾರು ಕೊಳವೆ ಬಾವಿಗಳೇ ಅಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿಲ್ಲ. ಸ್ಥಳ ಪರಿಶೀಲನೆ ವೇಳೆಯೂ 9,588 ಕೊಳವೆ ಬಾವಿಗಳ ಪೈಕಿ 5 ಸಾವಿರ ಕೊಳವೆ ಬಾವಿಗಳ ಲೆಕ್ಕ ಸಿಗುತ್ತಿಲ್ಲ. ನೂರಾರು ಕೋಟಿ ಖರ್ಚು ಮಾಡಿ ಕೊರೆಸಿದ ಕೊಳವೆ ಬಾವಿಗಳೇ ನಾಪತ್ತೆಯಾಗಿದೆ. ಹಾಗಿದ್ದರೆ ಬಿಬಿಎಂಪಿಯಿಂದ ಕೊರೆದಿರುವ ಕೊಳವೆ ಬಾವಿಗಳು ಎಲ್ಲಿವೆ?

2016, 2017-2018 ರಲ್ಲಿ ಕೊಳವೆ ಬಾವಿ, R.O ಘಟಕಗಳ ಸ್ಥಾಪನೆ ಹೆಸರಲ್ಲಿ ನಡೆದ ಒಟ್ಟು 969 ಕೋಟಿ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಮನಿ ಲಾಂಡ್ರಿ ಆ್ಯಕ್ಟ್ ಅಡಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಆರ್ ರಮೇಶ್ ನೀಡಿದ ದೂರಿನ್ವಯ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಬಿಬಿಎಂಪಿ ಗೋವಿಂದರಾಜನಗರ ಉಪ ವಿಭಾಗದ ಇಬ್ಬರು ಅಧಿಕಾರಿಗಳಿಗೆ ತಲಾ 4 ವರ್ಷ ಜೈಲು

ಬೆಂಗಳೂರಿನ 198 ವಾರ್ಡ್​​​ಗಳಲ್ಲಿ ಕೊಳವೆ ಬಾವಿ ಕೊರೆಸಲು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 969 ಕೋಟಿ ಖರ್ಚು ಮಾಡಲಾಗಿದೆ. 2016 ರಿಂದ 2018ವರೆಗೂ ನಡೆದಿರುವ ಕಾಮಗಾರಿ ಇದಾಗಿದ್ದು, 9,588 ಕೊಳವೆ ಬಾವಿ ಕೊರೆಸಲಾಗಿದೆ. 976 ಆರ್​ಒ ಘಟಕಗಳನ್ನ ಸ್ಥಾಪನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಕೊಳವೆ ಬಾವಿ ಹಾಗೂ ಆರ್​​ಒ ಘಟಕ ಸ್ಥಾಪನೆ ಹೆಸರಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ 2019ರ ಮೇ 14ರಂದು ರಮೇಶ್ ಅವರು ಎಸಿಬಿಗೆ ದೂರು ನೀಡಿದ್ದರು.

ಭ್ರಷ್ಟಾಚಾರ ಸಂಬಂಧ 2016-2018ವರೆಗೂ ಆಯುಕ್ತರಾಗಿದ್ದವರ ವಿರುದ್ಧ, 5 ಜಂಟಿ ಆಯುಕ್ತರು, 5 ಮುಖ್ಯ ಅಭಿಯಂತರರು ಸೇರಿದಂತೆ 40 ಅಧಿಕ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಸದ್ಯ ಎಸಿಬಿ ರದ್ದು ಆದ ಕಾರಣ ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣಗಳು ಇಡಿಗೆ ವರ್ಗಾವಣೆಯಾಗಿವೆ. ಇದರಲ್ಲಿ ಈ ಮಹಾ ಭ್ರಷ್ಟಾಚಾರವೂ ಒಂದಾಗಿದೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಹಣ ಪತ್ತೆ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಇದು ಸಾಕ್ಷಿ- ಸಿದ್ದರಾಮಯ್ಯ ವಾಗ್ದಾಳಿ

ದೊಡ್ಡ ಮೊತ್ತದ ಕೇಸ್ ಆಗಿರುವ ಕಾರಣ ಮನಿ ಲಾಂಡ್ರಿ ಆ್ಯಕ್ಟ್​​ನಲ್ಲಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಎಲ್ಲೆಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ ಎಂಬುದನ್ನು ಲೆಕ್ಕ ಹಾಕುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಇಡಿ ನೋಟೀಸ್ ಜಾರಿ ಮಾಡಲಾಗಿದ್ದು, ಇಡಿ‌ ನೋಟೀಸ್ ಬಂದ ಹಿನ್ನಲೆ ಎಲ್ಲೆಲ್ಲಿ ಕೊಳವೆ ಬಾವಿ ಹಾಕಲಾಗಿದೆ, ಆರ್​​ಒ‌ ಪ್ಲಾಂಟ್​​ಗಳು ಎಲ್ಲೆಲ್ಲ ಇದೆ ಎಂದು ಬಿಬಿಎಂಪಿ ಮಾಹಿತಿ ನೀಡಿತ್ತು. ಈ ಮಾಹಿತಿ ಆಧರಿಸಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

ಕೊಳವೆ ಬಾವಿಗಳನ್ನ ಕೊರೆಸದೆ ಬಿಲ್ ಮಾಡಿರುವ ಆರೋಪ

ಕೊಳವೆ ಬಾವಿ ಕೊರೆಯದೆ ಬಿಲ್ ಮಾಡಿರುವ ಆರೋಪ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ. ಒಂದು ಮೀಟರ್ ಕೊಳವೆ ಬಾವಿ ಕೊರೆಯಲು 300 ರೂಪಾಯಿ ಖರ್ಚು ಮಾಡಲಾಗಿದ್ದು, ಒಂದು ಕೊಳವೆ ಬಾವಿಗೆ ಸಾವಿರಾರು ಅಡಿ ಆಳ ಕೊರೆಯಲಾಗಿದೆ ಎಂದು ಲಕ್ಷಾಂತರ ರೂಪಾಯಿ ಬಿಲ್ ಮಾಡಲಾಗಿದೆ. ಹೀಗೆ 5 ಸಾವಿರ ಕೊಳವೆ ಬಾವಿಗಳನ್ನ ಕೊರೆಸದೆ ಬಿಲ್ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹೆಸರಲ್ಲೂ ಗೋಲ್ ಮಾಲ್ ನಡೆದಿದ್ದು, ಕೆಲವೇ ಮೀಟರ್ ಆಳ ಕೊಳವೆ ಬಾವಿ ಕೊರೆಸಿ ನೂರಾರು ಮೀಟರ್ ಕೊರೆಯಲಾಗಿದೆ ಎಂದು ಬಿಲ್ ಮಾಡಲಾಗಿದೆ. ಹಳೆಯ ಕೊಳವೆ ಬಾವಿ ತೋರಿಸಿ ಹೊಸ ಬಿಲ್ ಸಿದ್ಧಪಡಿಸಿ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 am, Fri, 6 January 23