ಬಿಎಂಟಿಸಿ ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕಂಡಕ್ಟರ್ ಜತೆಗಿನ ಕಿರಿಕ್​ಗೆ ಬೀಳಲಿದೆ ಬ್ರೇಕ್

| Updated By: Ganapathi Sharma

Updated on: Dec 12, 2024 | 7:40 AM

ಶಕ್ತಿ ಯೋಜನೆ ಆರಂಭವಾದ ಮೇಲೆ ಬಿಎಂಟಿಸಿ ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವೆ ಸಾಕಷ್ಟು ಕಿರಿಕ್ ಆಗುತ್ತಿತ್ತು. ಅದಕ್ಕೆ ಕಾರಣ, ಆಧಾರ್ ಕಾರ್ಡ್​​ನಲ್ಲಿ ಬೇರೆ ಭಾಷೆಯಲ್ಲಿ ವಿಳಾಸ ಇದೆ ಎಂಬುದು. ಅದಕ್ಕೀಗ ಬಿಎಂಟಿಸಿ ಬ್ರೇಕ್ ಹಾಕಿದ್ದು, ಆಧಾರ್ ಕಾರ್ಡ್ ಯಾವ ಭಾಷೆಯಲ್ಲಿದ್ದರೂ ಪರವಾಗಿಲ್ಲ, ವಿಳಾಸ ಕರ್ನಾಟಕದಾಗಿದ್ದರೆ ಸಾಕು ಎಂದು ಆದೇಶ ಹೊರಡಿಸಿದೆ.

ಬಿಎಂಟಿಸಿ ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕಂಡಕ್ಟರ್ ಜತೆಗಿನ ಕಿರಿಕ್​ಗೆ ಬೀಳಲಿದೆ ಬ್ರೇಕ್
ಬಿಎಂಟಿಸಿ ಬಸ್​
Follow us on

ಬೆಂಗಳೂರು, ಡಿಸೆಂಬರ್ 12: ಈ ಹಿಂದೆ ಆಧಾರ್ ‌ಕಾರ್ಡ್​​ನಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಬಿಟ್ಟು ಬೇರೆ ಭಾಷೆ ಪ್ರಿಂಟ್ ಆಗಿದ್ದರೆ, ಅಂತಹ ಮಹಿಳೆಯರಿಗೆ ಬಿಎಂಟಿಸಿ ಕಂಡಕ್ಟರ್​ಗಳು ಶಕ್ತಿ ಯೋಜನೆಯ ಟಿಕೆಟ್ ನೀಡುತ್ತಿರಲಿಲ್ಲ. ಇದರಿಂದ ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವೆ ಸಾಕಷ್ಟು ಜಗಳಗಳಾಗುತ್ತಿದ್ದವು. ಇದನ್ನು ತಪ್ಪಿಸಲು ಬಿಎಂಟಿಸಿ ಮುಂದಾಗಿದ್ದು, ಇನ್ಮುಂದೆ ಆಧಾರ್ ಕಾರ್ಡ್​​ನಲ್ಲಿ ಕರ್ನಾಟಕದ ವಿಳಾಸ ಇದ್ದರೆ ಸಾಕು, ಶಕ್ತಿ ಯೋಜನೆ ಟಿಕೆಟ್ ನೀಡಬಹುದು ಸೂಚನೆ ನೀಡಿದೆ. ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದವರು, ಬಿಎಂಟಿಸಿ ಬಸ್​ನಲ್ಲಿ ಉಚಿತವಾಗಿ ಸಂಚಾರ ಮಾಡಬಹುದು. ಆಧಾರ್ ಕಾರ್ಡ್‌ ಕನ್ನಡದಲ್ಲಿ ವಿಳಾಸ ಇಲ್ಲಾಂದರೂ ಪರವಾಗಿಲ್ಲ, ಕರ್ನಾಟಕದ ವಿಳಾಸವಿದ್ದರೆ ಸಾಕು ಎಂದು ಬಿಎಂಟಿಸಿ ಆದೇಶ ಹೊರಡಿಸಿದೆ.

ಈ ಹಿಂದೆ ಆಧಾರ್ ಕಾರ್ಡ್​​ನಲ್ಲಿ ಕನ್ನಡದಲ್ಲಿ ವಿಳಾಸವಿರಬೇಕೆಂದು ಬಿಎಂಟಿಸಿಯ ಕಂಡಕ್ಟರ್​ಗಳು ಕಿರಿಕ್ ಮಾಡುತ್ತಿದ್ದರು. ದೇಶದ ನಾಗರೀಕರು ಆಧಾರ್ ಕಾರ್ಡನ್ನು ದೇಶದಾದ್ಯಂತ ಯಾವುದೇ ರಾಜ್ಯದಲ್ಲಿ ಪಡೆಯಲು ಅವಕಾಶವಿದ್ದು, ಯಾವ ರಾಜ್ಯದಲ್ಲಿ ಆಧಾರ್ ಕಾರ್ಡ್ ಅನ್ನು ಪಡೆಯುತ್ತಾರೋ ಆ ರಾಜ್ಯದ ಅಧಿಕೃತ ಭಾಷೆ ಮತ್ತು ಅಂಗ್ಲ ಭಾಷೆಯಲ್ಲಿ (ದ್ವಿಭಾಷೆ) ಆಧಾರ್ ಕಾರ್ಡ್ ಮುದ್ರಣವಾಗುತ್ತದೆ. ಆದ್ದರಿಂದ ಕನ್ನಡ ಹೊರತುಪಡಿಸಿ ಅನ್ಯಭಾಷೆಯಲ್ಲಿ ಮುದ್ರಿತ (ದ್ವಿಭಾಷೆ) ಆಧಾರ್ ಕಾರ್ಡ್ ಗಳಲ್ಲಿನ ಆಂಗ್ಲ ಭಾಷೆಯಲ್ಲಿರುವ ವಿಳಾಸವನ್ನು ಪರಿಶೀಲಿಸಿ ವಿಳಾಸವು ಕರ್ನಾಟಕ ರಾಜ್ಯದಾಗಿದ್ದಲ್ಲಿ, ಆ ಆಧಾರ್ ಕಾರ್ಡ್ ಅನ್ನು ಮಾನ್ಯ ಮಾಡಿ ಶಕ್ತಿಯೋಜನೆ ಅಡಿಯಲ್ಲಿ ಉಚಿತ ಟಿಕೆಟ್ ನೀಡಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಚಾಲಕ ರಹಿತ ನಮ್ಮ ಮೆಟ್ರೋ ಆರಂಭಕ್ಕೂ ಮುನ್ನವೇ ಬಂತು ನೂರಾರು ಕೋಟಿ ರೂ. ಆದಾಯ..!

ಒಟ್ಟಿನಲ್ಲಿ ಬಿಎಂಟಿಸಿ ಬಸ್​ನಲ್ಲಿ ಉಚಿತವಾಗಿ ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡಬೇಕೆಂದರೆ, ಆಧಾರ್ ಕಾರ್ಡ್ ಕನ್ನಡದಲ್ಲೇ ಇರಬೇಕೆಂದು ಕಿರಿಕ್ ಮಾಡುತ್ತಿದ್ದ ಕಂಡಕ್ಟರ್​ಗಳಿಗೆ ಬಿಎಂಟಿಸಿಯ ಹೊಸ ಆದೇಶ ಬ್ರೇಕ್ ಹಾಕಿರುವುದಂತೂ ನಿಜ. ಬಿಎಂಟಿಸಿ ಆದೇಶದಿಂದ ಮಹಿಳಾ ಪ್ರಯಾಣಿಕರು ಸಂತಸಗೊಂಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ