
ಬೆಂಗಳೂರು, ಜನವರಿ 15: ನಮ್ಮ ಮೆಟ್ರೋ (Namma Metro) ಯೆಲ್ಲೋ ಲೈನ್‌ನಲ್ಲಿ ಇಂದಿನಿಂದ ಮತ್ತೊಂದು ಮೆಟ್ರೋ ರೈಲು ವಾಣಿಜ್ಯ ಸಂಚಾರ ಆರಂಭವಾಗುತ್ತಿದೆ. ಆರ್.ವಿ.ರೋಡ್–ಬೊಮ್ಮಸಂದ್ರ ಮಾರ್ಗದಲ್ಲಿ 7ನೇ ಮೆಟ್ರೋ ರೈಲು ಸೇವೆಗೆ ಸೇರ್ಪಡೆಯಾಗಿದ್ದು, ಇದರಿಂದ ಪ್ರಯಾಣಿಕರಿಗೆ ಸಂಚಾರ ಇನ್ನಷ್ಟು ಸುಗಮವಾಗಲಿದೆ. ಬೆಳಗ್ಗೆ 6 ಗಂಟೆಯಿಂದಲೇ ಯೆಲ್ಲೋ ಮಾರ್ಗದಲ್ಲಿ 7ನೇ ಮೆಟ್ರೋ ರೈಲು ಸಂಚಾರ ಆರಂಭವಾಗುತ್ತಿದ್ದು, ರೈಲುಗಳ ಸಂಚಾರದ ನಡುವಿನ ಅಂತರ ಕಡಿಮೆಯಾಗಿದೆ. ಈವರೆಗೆ ಈ ಮಾರ್ಗದಲ್ಲಿ ಪ್ರತಿ 13 ನಿಮಿಷಕ್ಕೊಮ್ಮೆ ಒಂದು ಮೆಟ್ರೋ ರೈಲು ಸಂಚರಿಸುತ್ತಿತ್ತು. ಇದೀಗ 7ನೇ ರೈಲು ಸೇರ್ಪಡೆಯೊಂದಿಗೆ ಸೋಮವಾರದಿಂದ ಶನಿವಾರದವರೆಗೆ ಪ್ರತಿ 10 ನಿಮಿಷಕ್ಕೊಮ್ಮೆ ಒಂದು ರೈಲು ಸಂಚಾರ ನಡೆಸಲಿದೆ ಎಂದು ಬಿಎಂಆರ್ಸಿಎಲ್ (BMRCL) ತಿಳಿಸಿದೆ.
ಭಾನುವಾರಗಳಂದು ಈ ಹಿಂದೆ 15 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸುತ್ತಿದ್ದರೆ, ಈಗ ಹೊಸ ರೈಲು ಸೇರ್ಪಡೆಯಿಂದ 14 ನಿಮಿಷಕ್ಕೊಮ್ಮೆ ಸೇವೆ ಲಭ್ಯವಾಗಲಿದೆ. ಆದರೆ ಮೊದಲ ಹಾಗೂ ಕೊನೆಯ ಮೆಟ್ರೋ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.
ಯೆಲ್ಲೋ ಲೈನ್‌ಗೆ 2025ರ ಆಗಸ್ಟ್ 10ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಇದೀಗ ಮತ್ತೊಂದು ರೈಲು ಸೇರ್ಪಡೆಯೊಂದಿಗೆ ಪ್ರಯಾಣಿಕರ ಒತ್ತಡ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ಯೆಲ್ಲೋ ಲೈನ್‌ನಲ್ಲಿ ಸಂಚಾರ ಮಾಡುವುದಕ್ಕೆ 7ನೇ ಚಾಲಕರಹಿತ ರೈಲು ಡಿಸೆಂಬರ್ನಲ್ಲೇ ಬೆಂಗಳೂರಿಗೆ ಆಗಮಿಸಿತ್ತು. ನಂತರ ಟೆಸ್ಟಿಂಗ್ ಕಾರ್ಯಗಳು ನಡೆದಿದ್ದವು.
ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು
ಬೆಂಗಳೂರು ಮೆಟ್ರೋ ಹಳದಿ ಮಾರ್ಗವು 19.15 ಕಿಮೀ ಇದ್ದು, ಇದು ಸಂಪೂರ್ಣ ಎಲಿವೇಟೆಡ್ ಕಾರಿಡಾರ್ ಆಗಿದೆ. ರಾಷ್ಟ್ರೀಯ ವಿದ್ಯಾಲಯ (ಆರ್‌ವಿ) ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ ಮತ್ತು ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ.