ಬೆಂಗಳೂರಿನ ಟ್ರಾಫಿಕ್ ನಿರ್ವಹಣೆಗೆ ಯಾವುದೇ ರೀತಿಯ ಯೋಜನೆಯನ್ನು ತಂದರೂ ಟ್ರಾಫಿಕ್ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸರು ಗೂಗಲ್‌ನೊಂದಿಗೆ ಕೈಜೋಡಿಸಿದ್ದಾರೆ. ಇನ್ನುಮುಂದೆ ವಾಹನ ಸವಾರರಿಗೆ ಗೂಗಲ್ ಮ್ಯಾಪ್ ಮೂಲಕವೇ ಸ್ಪೀಡ್ ಲಿಮಿಟ್ ತಿಳಿಯಲಿದೆ.
ಹಾಗೆಯೇ ವಾಹನ ಸಂಚಾರ ದಟ್ಟಣೆಯಿರುವ ರಸ್ತೆಗಳು, ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧವಿರುವ ರಸ್ತೆಗಳ ಮಾಹಿತಿಯೂ ಇದರಲ್ಲಿ ಸಿಗಲಿದೆ. ವಾಹನ ಸಂಚಾರ ದಟ್ಟಣೆ ಇರುವುದರ ಕುರಿತು ಮುಂಚಿತವಾಗಿಯೇ ವಾಹನ ಸವಾರರಿಗೆ ತಿಳಿಸಲಿದೆ. ಇದರಿಂದ ವಾಹನ ಸವಾರರು ಬೇರೆ ರಸ್ತೆಗಳ ಮೂಲಕ ಸಂಚರಿಸಬಹುದು.
ಇದು ದಟ್ಟಣೆ, ಕಾಯುವ ಸಮಯ, ಇಂಧನ ಬಳಕೆ, ರಸ್ತೆಗಳ ಬಗ್ಗೆ ಮಾಹಿತಿ ನೀಡಲಿದೆ. ಯೋಜನೆಯ ಭಾಗವಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು ನೂರಾರು ಯೋಜನೆಗಳನ್ನು ಗೂಗಲ್‌ನೊಂದಿಗೆ ಹಂಚಿಕೊಂಡಿದ್ದಾರೆ. ಈ ಪಾಲುದಾರಿಕೆ ಉತ್ತಮವಾಗಿದ್ದು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಗೂಗಲ್ ಸಂಸ್ಥೆಯೊಂದಿಗಿನ ಈ ಒಪ್ಪಂದವು ಆಧುನಿಕ ತಂತ್ರಜ್ಞಾನದ ನೆರವಿನಿಂದ ವಾಹನ ಸಂಚಾರ ನಿರ್ವಹಣೆ ಜತೆಗೆ ವಾಹನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇವೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.
Bengaluru Traffic Police collaboration with Google to improve traffic management in Bengaluru.@CPBlr https://t.co/BhVnOtb6bG
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) July 27, 2022
ಪೈಲಟ್ ಯೋಜನೆಯು ಮೊದಲ ಬಾರಿಗೆ ಪ್ರಯಾಣಿಕರಿಗಾಗಿ ಗೂಗಲ್ ನಕ್ಷೆಗಳಲ್ಲಿ ವೇಗದ ಮಿತಿಗಳನ್ನು ಪರಿಚಯಿಸುತ್ತದೆ. ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಮೊದಲು ಭಾರತದಲ್ಲಿ 2011 ರಲ್ಲಿ ಪ್ರಾರಂಭಿಸಲಾಯಿತು. ಈ ಗೂಗಲ್ ನಕ್ಷೆಗಳ ವೈಶಿಷ್ಟ್ಯವು ಬಳಕೆದಾರರಿಗೆ 360-ಡಿಗ್ರಿ ವಿಹಂಗಮ ರಸ್ತೆ-ಮಟ್ಟದ ಚಿತ್ರಗಳ ಮೂಲಕ ಪ್ರದೇಶವನ್ನು ಅನ್ವೇಷಿಸಲು ದಾರಿ ಮಾಡಿಕೊಡುತ್ತದೆ.
ಗೂಗಲ್ ಸ್ಟ್ರೀಟ್ ವ್ಯೂ ಜಾರಿಯಾದ ಬೆನ್ನಲ್ಲೇ ತಂತ್ರಜ್ಞಾನದ ಸಹಾಯದಿಂದ ನಗರದಲ್ಲಿ ವಾಹನ ಸಂಚಾರ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು, ಗೂಗಲ್ ಸಂಸ್ಥೆಯೊಂದಿಗೆ ಈ ಒಪ್ಪಂದ ಮಾಡಿಕೊಂಡಿದ್ದಾರೆ.
ಗೂಗಲ್ ಯಾವ ಸಮಯದಲ್ಲಿ ಯಾವ ರಸ್ತೆಯಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುತ್ತದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಲು ಸಹಾಯ ಮಾಡಲಿದೆ . ಅಷ್ಟೇ ಅಲ್ಲದೆ, ಆ ರಸ್ತೆಯಲ್ಲಿ ದಟ್ಟಣೆ ತಗ್ಗಿಸಲು ಹಾಗೂ ಸಂಚಾರ ನಿರ್ವಹಿಸಲು ಸಹಕಾರಿಯಾಗಲಿದೆ.