ಅಂಕೋಲಾ ವಿಮಾನ ನಿಲ್ದಾಣ: ಭೂಮಿ ಕಳೆದುಕೊಂಡ ರೈತರಿಗೆ 5 ಗುಂಟೆ ಜಾಗ ನೀಡಲು ಸರ್ಕಾರ ತೀರ್ಮಾನ
ಅಂಕೋಲಾ ವಿಮಾನ ನಿಲ್ದಾಣ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆ ವೇಳೆ ಭೂಮಿ ಕಳೆದುಕೊಂಡವರ ಬೇಡಿಕೆ ಈಡೇರಿಸಲು ಸಿಎಂ ಸಿದ್ದರಾಮಯ್ಯನವರು ಸಭೆಯಲ್ಲಿ ತಿರ್ಮಾನ ತೆಗೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡ ರೈತರಿಗೆ 5 ಗುಂಟೆ ಜಾಗ ನೀಡಲು ಸಭೆಯಲ್ಲಿ ಸಹಮತ ಸಿಕ್ಕಿದೆ.
ಬೆಂಗಳೂರು, ಅ.21: ಅಂಕೋಲಾ ವಿಮಾನ ನಿಲ್ದಾಣ (Ankola Airport) ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆ ಹಾಗೂ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಶನಿವಾರ ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ಇನ್ನು ಅಂಕೋಲಾ ವಿಮಾನ ನಿಲ್ದಾಣ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆ ವೇಳೆ ಭೂಮಿ ಕಳೆದುಕೊಂಡವರ ಬೇಡಿಕೆ ಈಡೇರಿಸಲು ಸಭೆಯಲ್ಲಿ ತಿರ್ಮಾನ ತೆಗೆದುಕೊಳ್ಳಲಾಗಿದೆ. ಭೂಮಿ ಕಳೆದುಕೊಂಡ ರೈತರಿಗೆ 5 ಗುಂಟೆ ಜಾಗ ನೀಡಲು ಸಭೆಯಲ್ಲಿ ಸಹಮತ ಸಿಕ್ಕಿದೆ.
ಸಭೆ ಬಳಿಕ ಉತ್ತರಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯೆ ನೀಡಿದ್ದು, ಶೀಘ್ರದಲ್ಲೇ ಭೂಮಿ ಕಳೆದುಕೊಂಡವರ ಬೇಡಿಕೆ ಈಡೇರಿಸಲು ತಿರ್ಮಾನ ತೆಗೆದುಕೊಳ್ಳಲಾಗಿದೆ. ಭೂಮಿ ಕಳೆದು ಕೊಂಡ ರೈತರಿಗೆ 5 ಗುಂಟೆ ಜಾಗ ನೀಡಲು ಸಹಮತ ಸಿಕ್ಕಿದೆ. ಪರಿಹಾರದ ಮೊತ್ತದಲ್ಲಿ ತಾರತಮ್ಯ ಆಗದಂತೆ ಒಂದೇ ರೀತಿಯ ಪರಿಹಾರ ಕೊಡಲು ನಿರ್ಧಾರ ಮಾಡಿದ್ದೇವೆ. ಯೋಜನೆಗಾಗಿ ಮನೆ ಕಳೆದು ಕೊಳ್ಳುವವರ ಮನೆಯನ್ನು ವೈಜ್ಞಾನಿಕವಾಗಿ ಸರ್ವೆ ಮಾಡಿ ಪರಿಹಾರ ಕೊಡಲು ನಿರ್ಣಯ ತೆಗೆದುಕೊಂಡಿದ್ದೇವೆ. ರಾಜ್ಯ ಸರ್ಕಾರ ಸ್ಥಳೀಯರಿಗೆ ಉದ್ಯೋಗ ಕೊಡುವ ಭರವಸೆ ನೀಡಿದೆ. ಮುಖ್ಯಮಂತ್ರಿಗಳ ಸಭೆಯಲ್ಲಿ ಸಕಾರಾತ್ಮಕ ತಿರ್ಮಾನ ಹೊರಬಿದ್ದಿದೆ. ರೈತರಿಗೆ ಅನ್ಯಾಯ ಆಗದಂತೆ ಕೆಲವು ನಿರ್ಣಯ ಮಾಡಿದ್ದೇವೆ. ಪರಿಹಾರ ನೀಡುವಲ್ಲಿ, ಸರ್ವೆ ಕಾರ್ಯದಲ್ಲಿನ ಲೋಪ ಸರಿ ಮಾಡ್ತೇವೆ. ಯೋಜನೆ ಕಾಮಗಾರಿ ಶೀಘ್ರದಲ್ಲೇ ಆರಂಭ ಆಗಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ: ವಿದ್ಯುತ್ ಕೃತಕ ಅಭಾವ ಸೃಷ್ಟಿಸಿರುವ ಕಾಂಗ್ರೆಸ್ ಸರ್ಕಾರ: ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಇನ್ನು ಸಭೆಗೆ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್, ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ, ಕಾರವಾರ ಶಾಸಕ ಸತೀಶ್ ಸೈಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಜಿಯಾವುಲ್ಲಾ, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ಮೂಲಸೌಕರ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ