ಬೆಂಗಳೂರು: 7ನೇ ವೇತನ ಜಾರಿ ಮಾಡಬೇಕು, ಹೊಸ ಪಿಂಚಣಿ ಸ್ಕೀಮ್ ರದ್ದು ಮಾಡಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಸರ್ಕಾರಿ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಸರ್ಕಾರ ವಿರುದ್ಧ ಸಮರ ಸಾರಿದ್ದಾರೆ. ಹೀಗಾಗಿ ಆಡಳಿತದ ಕೇಂದ್ರ ಸ್ಥಾನವಾಗಿರೋ ವಿಧಾನಸೌಧದ ಕಚೇರಿಗಳು, ಎಂಎಸ್ ಬಿಲ್ಡಿಂಗ್‌ನ ಕಚೇರಿಗಳು, ಪ್ರಮುಖ ಇಲಾಖೆಗಳ ಕಚೇರಿಗಳು ಬಂದ್ ಆಗಿವೆ ಇಡೀ ರಾಜ್ಯದಲ್ಲಿ ಬಂದ್ ಎಫೆಕ್ಟ್ ಭಾರೀ ಮಟ್ಟದಲ್ಲಿ ತಟ್ಟಲು ಶುರುವಾಗಿದೆ. ಮತ್ತೊಂದೆಡೆ ಮುಷ್ಕರಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಆದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಸಿಎಂ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ನಮ್ಮ ನಿರ್ಣಯವನ್ನ ಸಿಎಂಗೆ ಹೇಳಿದ್ದೇವೆ. ಸರ್ಕಾರದ ನಿಲುವಿನ ಮೇಲೆ ನಮ್ಮ ನಿರ್ಧಾರವಾಗಲಿದೆ. ಇನ್ನು 2 ಗಂಟೆಯೊಳಗೆ ಸರ್ಕಾರ ತಮ್ಮ ನಿರ್ಧಾರ ತಿಳಿಸಲಿದೆ. ಸರ್ಕಾರದ ಮಟ್ಟದಲ್ಲೂ ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಸಕಾರಾತ್ಮಕವಾಗಿ ಸ್ಪಂದನೆ ಸಿಗದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತೇವೆ. ನಾನು ಸರ್ಕಾರಿ ನೌಕರರ ಪರವಾಗಿ ನಿಲ್ಲುತ್ತೇನೆ ಎಂದು ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದರು.
ಇದನ್ನೂ ಓದಿ: ಸರ್ಕಾರಿ ನೌಕರರ ಮುಷ್ಕರ: ಒಪಿಡಿ ಬಂದ್, ಚಿಕಿತ್ಸೆ ಸಿಗದೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಗರ್ಭಿಣಿ ನರಳಾಟ
ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಮುಂದುವರಿಯುತ್ತದೆ. ಇಂದು ಯಾವುದೇ ನಿರ್ಧಾರ ಬಂದರೂ ಕೂಡ ಮುಷ್ಕರ ಇರುತ್ತದೆ. ಮುಷ್ಕರಕ್ಕೆ ಕರೆ ನೀಡಿದ ಕಾರಣ ಯಾರೂ ಕಚೇರಿಗಳಿಗೆ ಹಾಜರಾಗಿಲ್ಲ ಎಂದು BBMP ಅಧಿಕಾರಿಗಳು, ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ತಿಳಿಸಿದ್ದಾರೆ.
ಇನ್ನು ಮತ್ತೊಂದೆಡೆ ಸರ್ಕಾರಿ ನೌಕರರ ಮುಷ್ಕರಕ್ಕೆ ಪೊಲೀಸರ ಪರ್ಮಿಷನ್ ಇಲ್ಲ. ಎಲ್ಲೆಡೆ ಅಲರ್ಟ್ ಆಗಿದ್ದಾರೆ. ಇಂದಿನಿಂದ ನಡೆಯುವ ಸರ್ಕಾರಿ ನೌಕರರ ಮುಷ್ಕರಕ್ಕೆ ಪೊಲೀಸರು ಅನುಮತಿ ನೀಡಿಲ್ಲ. ಸರ್ಕಾರಿ ನೌಕರರ ಸಂಘ ಕೂಡ ಈವರೆಗೆ ಪೊಲೀಸರ ಅನುಮತಿ ಕೇಳಿಲ್ಲ. ಸರ್ಕಾರಿ ನೌಕಕರಿಗೆ ಶಕ್ತಿಸೌಧ ಸೇರಿ ಸುತ್ತಮುತ್ತ ಪ್ರತಿಭಟನೆಗೆ ಅವಕಾಶ ಇಲ್ಲ. ಒಂದು ವೇಳೆ ಸರ್ಕಾರಿ ನೌಕರರು ವಿಧಾನಸೌದ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್ ಸುತ್ತಮುತ್ತ ಪ್ರತಿಭಟನೆ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಕಚೇರಿಗಳ ಬಳಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಶಕ್ತಿಸೌಧ ಸುತ್ತಮುತ್ತ ನಿಗಾ ಇಡಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:07 am, Wed, 1 March 23