ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿಸಲಾದ ಸರ್ಕಾರಿ ಆಸ್ಪತ್ರೆಯಲ್ಲಿಲ್ಲ ಚಿಕಿತ್ಸೆ ಭಾಗ್ಯ; ಹಿಂದಿನ ಸರ್ಕಾರದ ವಿರುದ್ಧ ಗೋವಿಂದರಾಜನಗರ ಜನರ ಆಕ್ರೋಶ
ಆಸ್ಪತ್ರೆ ಉದ್ಘಾಟನೆಯಾಗಿ ಮೂರು ತಿಂಗಳಾದ್ರೂ ಆಸ್ಪತ್ರೆಯಲ್ಲಿ ಜನರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಹೆಸರಿಗಷ್ಟೇ ಆಸ್ಪತ್ರೆ ಉದ್ಘಾಟನೆಯಾಗಿದೆ. ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು, ಆ.05: ಬಡವರಿಗೆ ಉಪಯೋಗ ಆಗಲಿ ಎಂದು ಗೋವಿಂದರಾಜನಗರದಲ್ಲಿ(Govindaraja Nagar) ಸರ್ಕಾರಿ ಆಸ್ಪತ್ರೆ(Government Hospital) ಕಟ್ಟಿಸಿ ಆತುರದಲ್ಲಿ ಉದ್ಘಾಟನೆ ಮಾಡಿದರು. ಆದರೆ ಆಸ್ಪತ್ರೆ ಉದ್ಘಾಟನೆಯಾಗಿ ಮೂರು ತಿಂಗಳಾದ್ರೂ ಆಸ್ಪತ್ರೆಯಲ್ಲಿ ಜನರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಹೆಸರಿಗಷ್ಟೇ ಆಸ್ಪತ್ರೆ ಉದ್ಘಾಟನೆಯಾಗಿದೆ. ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಯಾವುದೇ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲ ಎಂಬಂತೆ ವಿಶಾಲವಾದ ಜಾಗದಲ್ಲಿ ನಿರ್ಮಾವಾಗಿರುವ ಎರಡು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಉದ್ಘಾನೆಯಾದ್ರೂ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ಗೋವಿಂದರಾಜನಗರ ಪಂತರಪಾಳ್ಯದಲ್ಲಿರುವ ಪುನೀತ್ ರಾಜ್‍ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಇನ್ನೊಂದು ಅಗ್ರಹಾರ ದಾಸರಹಳ್ಳಿ ವಾರ್ಡ್ ನ ಎಂ.ಸಿ ಲೇಔಟ್ ನಲ್ಲಿರುವ ಆದಿಚುಂಚನಗಿರಿ ಬಾಲಗಂಗಾಧರ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಜಿ ಸಚಿವ ಸೋಮಣ್ಣರ ಕನಸಿನ ಕೂಸುಗಳು. ಬಡವರಿಗೆ ಉಪಯೋಗವಾಗಲಿ ಅಂತ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಲಾಗಿದೆ. ಚುನಾವಣೆಗೂ ಮುನ್ನ ಉದ್ಘಾಟನೆಯೂ ಆಗಿದೆ. ಆದರೆ ಲೋಕಾರ್ಪಣೆಯಾಗಿ ನಾಲ್ಕೈದು ತಿಂಗಳಾದ್ರು ಇನ್ನೂ ಜನರಿಗೆ ಲಭ್ಯವಾಗ್ತಿಲ್ಲ.
50 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಆಸ್ಪತ್ರೆಯಲ್ಲಿಲ್ಲ ಚಿಕಿತ್ಸೆ ಭಾಗ್ಯ
ಗೋವಿಂದರಾಜನಗರ ಪಂತರಪಾಳ್ಯದಲ್ಲಿ ಬರೋಬ್ಬರಿ 50 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ, ಅದಕ್ಕೆ ಪುನೀತ್ ರಾಜ್‍ಕುಮಾರ್ ಹೆಸರಿಡಲಾಗಿತ್ತು. ಆಗಿನ ಸಿಎಂ ಆಗಿದ್ದ ಬೊಮ್ಮಾಯಿ ಮಾರ್ಚ್ 23ರಂದು ಅದ್ಧೂರಿಯಾಗಿ ಉದ್ಘಾಟನೆ ಕೂಡ ಮಾಡಿದ್ದರು. ಗೋವಿಂದರಾಜನಗರ ಕ್ಷೇತ್ರದ ಜನ ಬಡವರಿಗೆ ಹೈಟೆಕ್ ಆಸ್ಪತ್ರೆ ಸಿಗ್ತು ಅಂತ ಖುಷಿಯಲ್ಲಿದ್ದರು. ಆದ್ರೆ ಲೋಕಾರ್ಪಣೆಯಾಗಿ 4 ತಿಂಗಳು ಕಳೆದರೂ ಇನ್ನೂ ಜನರಿಗೆ ಸೇವೆ ಸಿಗ್ತಿಲ್ಲ. ಇದು ಜನರ ನಿರಾಸೆಗೆ ಕಾರಣವಾಗಿದೆ.
ಇದನ್ನೂ ಓದಿ: ಗದಗ: ಹಣಕಾಸಿನ ವಿಚಾರಕ್ಕೆ ಕುಟುಂಬಗಳ ನಡುವೆ ಮಾರಕಾಸ್ತ್ರಗಳಿಂದ ಹೊಡೆದಾಟ, ಏಳು ಜನರಿಗೆ ಗಾಯ
ಇನ್ನು, 2019-20 ನೇ ಸಾಲಿನಲ್ಲಿ ಬಿಬಿಎಂಪಿಯ 18 ಕೋಟಿ ರೂಪಾಯಿ ಮತ್ತು 2022-23 ನೇ ಸಾಲಿನ ಅಮೃತ ನಗರೋತ್ಥಾನ ಯೋಜನೆಯ ಅನುದಾನದಲ್ಲಿ 32 ಕೋಟಿಗಳು ರೂಪಾಯಿ ಸೇರಿಸಿ ಒಟ್ಟು 50 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಉದ್ಘಾಟನೆ ವೇಳೆ ನಾಳೆಯಿಂದ ಜನರಿಗೆ ಲಭ್ಯವಾಗುತ್ತೆ ಅಂದಿದ್ರು. ಆದರೀಗ ಕಾಮಗಾರಿ ಆಗಿಲ್ಲ ಅಂತ ಇನ್ನೂ ತೆರೆದಿಲ್ಲ. ಇದರಿಂದ ಸುತ್ತಮುತ್ತಲ ಚಿಕಿತ್ಸೆಗಾಗಿ ರೋಗಿಗಳು ದೂರದ ಆಸ್ಪತ್ರೆಗೆ ಅಲೆಯುವಂತಾಗಿದೆ ಅಂತ ಜನರು ಆಕ್ರೋಶ ಹೊರ ಹಾಕಿದ್ದಾರೆ.
300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯರ ಕೊರತೆ
ಇನ್ನೊಂದು ಗೋವಿಂದರಾಜನಗರ ಕ್ಷೇತ್ರ ಅಗ್ರಹಾರ ದಾಸರಹಳ್ಳಿ ವಾರ್ಡ್ ನ ಎಂ.ಸಿ ಲೇಔಟ್ ನಲ್ಲಿರುವ ಆಸ್ಪತ್ರೆ. ಈ ಹೈಟೆಕ್ ಅಸ್ಪತ್ರೆಗೆ ಅದಿಚುಂಚನಗಿರಿ ಪೀಠಾಧಿಪತಿ ಬಾಲಗಂಗಾಧರ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಂತ ಹೆಸರಿಡಲಾಗಿತ್ತು. ಫೆ.16ರಂದು ಅದಿಚುಂಚನಗಿರಿ ಶ್ರೀಗಳೇ ಉದ್ಘಾಟನೆ ಮಾಡಿದ್ರು. ಆದ್ರೆ ಈಗ ಜನರಲ್ ಚಿಕಿತ್ಸೆ ಬಿಟ್ಟಾರೆ ಬೇರೆನೂ ಸಿಗ್ತಿಲ್ಲ. 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದ್ದು, ಎಲ್ಲಾ ಹೈಟೆಕ್ ಸೌಲಭ್ಯವಿದೆ. ನೆಲಮಹಡಿ ಸೇರಿದಂತೆ ನಾಲ್ಕು ಅಂತಸ್ತಿನ ಆಸ್ಪತ್ರೆ ಇದಾಗಿದ್ದು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ದೊಡ್ಡ ಆಸ್ಪತ್ರೆಯಂತೆ. ಆದ್ರೀಗ ಲೋಕಾಪರ್ಣೆಯಾಗಿ 5 ತಿಂಗಳಾದ್ರು ಜನರಿಗೆ ಈ ಅಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸೆ ಸಿಗ್ತಿಲ್ಲ. ಎಲ್ಲ ಉಪಕರಣ ಬಂದಿದ್ರು ತಜ್ಞ ವೈದ್ಯರು ಸಿಕ್ತಿಲ್ಲವಂತೆ. ಸದ್ಯಕ್ಕೆ ಈಗ ಓಪಿಡಿಯಲ್ಲಿ ಮಾತ್ರ ಮೂವರು ವೈದ್ಯರು ಚಿಕಿತ್ಸೆ ನೀಡ್ತಿದ್ದಾರೆ. ಕೋಟಿ ಕೋಟಿ ಖರ್ಚು ಮಾಡಿದ್ರು ಜನರಿಗೆ ಉಪಯೋಗಕ್ಕೆ ಸಿಗ್ತಿಲ್ಲ ಅಂತ ಜನ ಬೇಸರ ವ್ಯಕ್ತಪಡಿಸ್ತಿದ್ದಾರೆ.
ಇನ್ನು ಈ ಕುರಿತಾಗಿ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರವರನ್ನ ಪ್ರಶ್ನಿಸಿದ್ದಕ್ಕೆ ಆಸ್ಪತ್ರೆಯ ಕೆಲಸಗಳು ನಡೆಯುತ್ತಿವೆ. ಅದಾದ ಬಳಿಕ ಚಿಕಿತ್ಸೆಗೆ ಅವಕಾಶ ನೀಡಲಾಗುತ್ತೆ. ಸಧ್ಯ ಗೋವಿಂದ್ ರಾಜ್ ನಗರದ ಬಾಲಗಂಗಾಧರ ಸ್ವಾಮೀಜಿ ಮಲ್ಟಿ ಆಸ್ಪತ್ರೆಯಲ್ಲಿ ಒಪಿಡಿಗೆ ಅವಾಕಾಶ ಕಲ್ಪಿಸಿದ್ದು, ಪುನೀತ್ ರಾಜ್ ಕುಮಾರ್ ಆಸ್ಪತ್ರೆಯಲ್ಲಿ ಇನ್ನು ಕೆಲಸ ನಡೆಯುತ್ತಿದೆ. ಇನ್ನು ಎರಡು ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.
ಒಟ್ಟಾರೆ ಚುನಾವಣೆ ವೇಳೆ ಜನರ ಮನಗೆಲ್ಲಲ್ಲು ತರಾತುರಿಯಲ್ಲಿ ಗೋವಿಂದರಾಜನಗರ ಕ್ಷೇತ್ರದಲ್ಲಿ ಎರಡು ಹೈಟೆಕ್ ಆಸ್ಪತ್ರೆ ಉದ್ಘಾಟನೆ ಮಾಡಲಾಯಿತ್ತು. ಕೆಲಸ ಬಾಕಿ ಇದ್ದರೂ ಲೋಕಾರ್ಪಣೆ ಮಾಡಿದ್ದ ಅಂದಿನ ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಕೆಲಸ ಆಗದೇ ಯಾಕೆ ಉದ್ಘಾಟನೆ ಮಾಡಿದ್ರಿ ಅಂತ ಪ್ರಶ್ನಿಸುತ್ತಿದ್ದಾರೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಶೀಘ್ರದಲ್ಲೇ ಎಲ್ಲರಿಗೂ ಚಿಕಿತ್ಸೆ ಸಿಗುವಂತೆ ಮಾಡಲಿ ಅಂತಿದ್ದಾರೆ ಜನರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ