ಶಾಲೆಗಳ ಅಭಿವೃದ್ಧಿಗಾಗಿ ಆ್ಯಪ್ ರೂಪಿಸಲು ಚಿಂತನೆ: ಶಿಕ್ಷಣ ಸಚಿವ ಬಿಸಿ ನಾಗೇಶ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 09, 2022 | 3:01 PM

BC Nagesh: ಶಾಲೆ ಅಭಿವೃದ್ಧಿಗಾಗಿ ಮುಂದೆ ಬರುವವರಿಗೆ ನೆರವಾಗಲೆಂದೇ ವಿಶೇಷ ಆ್ಯಪ್ ರೂಪಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಶಾಲೆಗಳ ಅಭಿವೃದ್ಧಿಗಾಗಿ ಆ್ಯಪ್ ರೂಪಿಸಲು ಚಿಂತನೆ: ಶಿಕ್ಷಣ ಸಚಿವ ಬಿಸಿ ನಾಗೇಶ್
ಶಿಕ್ಷಣ ಸಚಿವ ಬಿ ಸಿ ನಾಗೇಶ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಕೆಲ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ಹಲವು ಸಂಸ್ಥೆಗಳು ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಮಕ್ಕಳಿಗೆ ಬೇಕಾದ ರೀತಿಯಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರೇತರ ಸಂಸ್ಥೆಗಳು ಶ್ರಮಿಸುತ್ತಿವೆ. ಹೀಗಾಗಿ ಶಾಲೆ ಅಭಿವೃದ್ಧಿಗಾಗಿ ಮುಂದೆ ಬರುವವರಿಗೆ ನೆರವಾಗಲೆಂದೇ ವಿಶೇಷ ಆ್ಯಪ್ ರೂಪಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಶಾಲೆಗಳಿಗೆ ದೇಣಿಗೆ ನೀಡಲು ಅಥವಾ ಶಾಲೆಗಳ ಅಭಿವೃದ್ಧಿಗೆ ಕಾಮಗಾರಿ ನಿರ್ವಹಿಸಲು ಆ್ಯಪ್ ಮೂಲಕ ನೋಂದಣಿ ಮಾಡಬಹುದಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಹೇಳಿದರು. ಶಾಲೆ ಅಭಿವೃದ್ಧಿ ಪಡಿಸಲು ಮುಂದೆ ಬರುವವರಿಗೆ ಒಂದು ಪ್ಲಾಟ್​ಫಾರ್ಮ್​ ರೀತಿಯಲ್ಲಿ ಕೆಲಸ ಮಾಡುವ ಆ್ಯಪ್ ರೂಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇಂಥದ್ದೊಂದು ಆ್ಯಪ್ ರೂಪಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಲೆಂದೇ ಹಲವು ಸರ್ಕಾರೇತರ ಸಂಸ್ಥೆಗಳು ಸಭೆಯಲ್ಲಿ ಪಾಲ್ಗೊಂಡಿದ್ದವು. ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಮಕ್ಕಳ ಕಲಿಕಾ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಪದವಿ ಪೂರ್ವ ಕಾಲೇಜು ಇಲಾಖೆಯ ನಿರ್ದೇಶಕರ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳಿಗೂ, ಪಿಯು ನಿರ್ದೇಶಕರ ವರ್ಗಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದರು. ಪಿಯು ನಿರ್ದೇಶಕರು ಯಾವುದೇ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿಲ್ಲ. ಇಲಾಖೆಯಲ್ಲಿಯೇ ಸಾಕಷ್ಟು ಕೆಲಸಗಳನ್ನು ಮಾಡುವ ಆಶಯ ಹೊಂದಿದ್ದರು. ಹಿಜಾಬ್​-ಕೇಸರಿಶಾಲು ವಿವಾದಕ್ಕೂ ಪಿಯು ನಿರ್ದೇಶಕರ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ ಎಂದರು.

ಹಿಜಾಬ್ ವಿರೋಧಿಸಿ ರಾಜ್ಯದ 42 ಕಡೆ ಮಾತ್ರ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ವರದಿಯಾಗಿವೆ. 5000ಕ್ಕೂ ಹೆಚ್ಚು ಶಾಲೆಗಳು ನಿನ್ನೆ (ಫೆ 8) ಸುಗಮವಾಗಿ ನಡೆದಿವೆ. ಪ್ರೌಢಶಾಲೆ-ಪಿಯು ಕಾಲೇಜು ಒಂದೇ ಕಡೆ ಇರುವ ಕೇಂದ್ರಗಳಲ್ಲಿ ಮಾತ್ರ ಇಂಥ ಘಟನೆಗಳು ನಡೆದಿವೆ. ಹಿಜಾಬ್ ವಿವಾದದ ಹಿಂದೆ ಇದ್ದವರಿಗೆ ಇದೀಗ ಮುಖಭಂಗವಾಗುತ್ತಿದೆ. ರಾಜ್ಯ ವಿವಿಧೆಡೆ ನಡೆದ ಅಹಿತಕರ ಘಟನೆಗಳಲ್ಲಿ ಪಾಲ್ಗೊಂಡವರನ್ನು ಬಂಧಿಸಲಾಗಿದೆ. ಮಾಧ್ಯಮಗಳಲ್ಲಿ ಬಂದಿರುವ ವರದಿ ಆಧರಿಸಿ ಪ್ರಚೋದನೆ ನೀಡಿರುವವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ಆರ್​ಟಿ ನಗರ ನಿವಾಸದಲ್ಲಿ ಭೇಟಿಯಾದರು. ರಾಜ್ಯದಲ್ಲಿ ಇತ್ತೀಚೆಗೆ ವರದಿಯಾಗುತ್ತಿರುವ ಹಿಜಾಬ್-ಕೇಸರಿಶಾಲು ವಿವಾದ ಕುರಿತು ಶಿಕ್ಷಣ ಸಚಿವರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ಮಾಹಿತಿ ಪಡೆದುಕೊಂಡರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Hijab Row: ಕೋರ್ಟ್ ಆದೇಶ ನೋಡಿಕೊಂಡು ಮುಂದಿನ ತೀರ್ಮಾನ ಮಾಡುತ್ತೇವೆ -ಶಿಕ್ಷಣ ಸಚಿವ ಬಿ ಸಿ ನಾಗೇಶ್

ಇದನ್ನೂ ಓದಿ: Hijab Row: ಉಡುಪಿಯಲ್ಲಿ ತಲೆ ಎತ್ತಿದ್ದ ಹಿಜಾಬ್ ವಿವಾದ: ತಕ್ಷಣ ಉಪನಿರ್ದೇಶಕರಿಗೆ ಪ್ರಿನ್ಸಿಪಾಲ್ ಕಳಿಸಿದ್ದ ವಾಟ್ಸಾಪ್ ಸಂದೇಶ ಹೀಗಿದೆ