Hijab Row: ಉಡುಪಿಯಲ್ಲಿ ತಲೆ ಎತ್ತಿದ್ದ ಹಿಜಾಬ್ ವಿವಾದ: ತಕ್ಷಣ ಉಪನಿರ್ದೇಶಕರಿಗೆ ಪ್ರಿನ್ಸಿಪಾಲ್ ಕಳಿಸಿದ್ದ ವಾಟ್ಸಾಪ್ ಸಂದೇಶ ಹೀಗಿದೆ
Karnataka Hijab Row: ಕರ್ನಾಟಕ ರಾಜ್ಯದಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಕಾರಣವಾದ ಹಿಜಾಬ್, ಕೇಸರಿ ಶಾಲು ಕಾಳಗ ಮೊದಲ ಬಾರಿಗೆ ತಲೆ ಎತ್ತಿದ್ದು ಉಡುಪಿಯಲ್ಲಿ. ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಮೊದಲ ಬಾರಿಗೆ ಹಿಜಾಬ್ ವಿವಾದ ಸೃಷ್ಟಿಯಾಗಿತ್ತು.
ಉಡುಪಿ: ಶಾಂತಿ ಸೌಹಾರ್ಧತೆಗೆ ಹೆಸರಾಗಿದ್ದ, ಭಾವೈಕ್ಯತೆಯ ಭೂಮಿಯಾಗಿದ್ದ ಕರುನಾಡು ಅಕ್ಷರಶಃ ಧರ್ಮಯುದ್ಧದಂತಾಗಿದೆ. ಹಿಜಾಬ್ (Hijab) ಮತ್ತು ಕೇಸರಿ ಶಾಲಿನ(kesari shawl) ನಡುವಿನ ಸಂಘರ್ಷ ಹಿಂಸಾರೂಪಕ್ಕೆ ತಿರುಗಿದ್ದು, ಕೋಮು ದ್ವೇಷ ಕೆರಳಿಸುವಂಥ ದೊಡ್ಡ ಬೆಂಕಿಯನ್ನೇ ಹೊತ್ತಿಸಿವೆ. ವಿದ್ಯಾದೇಗುಲಗಳೇ, ಕಾಲೇಜುಗಳೇ ರಣರಂಗವಾಗಿ ಬದಲಾಗಿವೆ. ಹಾಗಾದ್ರೆ ಕಳೆದ ಹತ್ತು ಹದಿನೈದು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಸಮವಸ್ತ್ರ ಸಂಘರ್ಷ ಶುರುವಾಗಿದ್ದು ಹೇಗೆ? ಇದು ಮೊದಲು ಮೊಳಗೆ ಹೊಡೆದದ್ದು ಎಲ್ಲಿ? ಎಂಬುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಕಾರಣವಾದ ಹಿಜಾಬ್, ಕೇಸರಿ ಶಾಲು ಕಾಳಗ ಮೊದಲ ಬಾರಿಗೆ ತಲೆ ಎತ್ತಿದ್ದು ಉಡುಪಿಯಲ್ಲಿ. ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಮೊದಲ ಬಾರಿಗೆ ಹಿಜಾಬ್ ವಿವಾದ ಸೃಷ್ಟಿಯಾಗಿತ್ತು. ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಿ ಬರುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ವಿರೋಧ ವ್ಯಕ್ತವಾದ ಕೂಡಲೇ ಕಾಲೇಜಿನ ಪ್ರಾಂಶುಪಾಲರು ಸ್ಥಳೀಯ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ (ಪದವಿಪೂರ್ವ ಶಿಕ್ಷಣ) ವಾಟ್ಸಾಪ್ ಸಂದೇಶ ಕಳಿಸಿದ್ದರು. ಕಾಲೇಜಿನ ಪ್ರಾಂಶುಪಾಲರು ಹಿಜಾಬ್ ಗೊಂದಲದ ಬಗ್ಗೆ ಸ್ಪಷ್ಟನೆ ನೀಡುವಂತೆ ಡಿಡಿಗೆ ಸಂದೇಶ ಕಳಿಸಿದ್ದರು. ಅಲ್ಲಿವರೆಗೂ ಪ್ರಿನ್ಸಿಪಲ್ ವಿದ್ಯಾರ್ಥಿನಿಯರನ್ನ ಕಾಲೇಜಿನಿಂದ ಹೊರಗೆ ಹಾಕಿದ್ದರು. ಸ್ಪಷ್ಟನೆ ಸಿಗುವವರೆಗೆ ವಿದ್ಯಾರ್ಥಿನಿಯರಿಗೆ ಕಾಲೇಜಿನೊಳಗೆ ಬರುವುದಕ್ಕೆ ಅನುಮತಿ ನೀಡಿರಲಿಲ್ಲ. ಬಳಿಕ ಪ್ರಿನ್ಸಿಪಾಲ್ ಕೇಳಿದ್ದ ಪ್ರಶ್ನೆಗೆ ಡಿಡಿಯಿಂದ ಸ್ಪಷ್ಟನೆ ಸಿಕ್ತು.
ಸ್ಥಳೀಯ ಶಾಸಕರ ಮಧ್ಯಪ್ರವೇಶ ಪದವಿ ಪೂರ್ವ ಶಿಕ್ಷಣ ಇಲಾಖೆಯ 2021-22 ರ ದಾಖಲಾತಿ ಮಾರ್ಸೂಚಿಯ ಅಧ್ಯಾಯ VI ರ ಪ್ರಕಾರ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಾಗಿರುವುದಿಲ್ಲ. ಕೂಡಲೇ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಸೇರಿಸಿಕೊಳ್ಳಿ. ಇಲ್ಲದೆ ಹೋದರೆ ಮುಂದೆ ಆಗುವುದಕ್ಕೆ ನೀವೇ ಹೊಣೆ ಎಂದು ಕಾಲೇಜು ಪ್ರಾಂಶುಪಾಲರಿಗೆ ಉಪನಿರ್ದೇಶಕ ಸಂದೇಶ ರವಾನಿಸಿದ್ದರು. ಇಲ್ಲಿಗೆ ಸಮಸ್ಯೆ ಮುಗಿದಿದ್ದರೆ ಎಲ್ಲವೂ ಎಂದಿನಂತೆ ಇರುತ್ತಿತ್ತು. ಆದ್ರೆ ಇದಾದ ನಂತರ ಸ್ಥಳೀಯ ಶಾಸಕರು ಮಧ್ಯಪ್ರವೇಶಿಸಿದ್ದರು. ಹಿಜಾಬ್ ಧರಿಸಿದರೆ ತರಗತಿಗೆ ಪ್ರವೇಶವಿಲ್ಲವೆಂದು ಜನಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದರು. ಹೀಗಾಗಿ ಪ್ರಿನ್ಸಿಪಾಲ್ ಸಭೆಯ ತೀರ್ಮಾನದ ಬಗ್ಗೆ ಡಿಡಿಗೆ ಮಾಹಿತಿ ರವಾನಿಸಿದ್ದರು. ಇದಾದ ಬಳಿಕ ರಾಜ್ಯಾದ್ಯಂತ ಹಿಜಾಬ್ ವಿವಾದ ತಲೆ ಎತ್ತಿತ್ತು.
ಹಿಜಾಬ್ ತೊಡಲು ಅವಕಾಶ ಇರಲಿಲ್ಲ ಎಂಬುದಕ್ಕೆ ಸಾಕ್ಷ್ಯ ಕೊಟ್ಟ ಕಾಲೇಜು ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಹೋರಾಟಕ್ಕೆ ಸಂಬಂಧಿಸಿ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿವೆ. ಕಾಲೇಜಿನ 2009-10 ಸಾಲಿನ ವಾರ್ಷಿಕ ಸಂಚಿಕೆಯಲ್ಲಿ ಮಹತ್ವದ ಸಾಕ್ಷ್ಯಗಳಿವೆ. ಕಾಲೇಜಿನಲ್ಲಿ ಈ ಹಿಂದೆಯೂ ಹಿಜಾಬ್ ತೊಡಲು ಅವಕಾಶ ಇರಲಿಲ್ಲ. ವಿದ್ಯಾರ್ಥಿನೀಯರು ಸಮಾನ ವಸ್ತ್ರಸಂಹಿತೆಯಲ್ಲಿದ್ದರು. ಕಾಲೇಜಿನ ಬೆಳಗ್ಗಿನ ಶಾಲಾ ಅಸೆಂಬ್ಲಿ ಫೋಟೋಗಳು ಅಭ್ಯವಾಗಿವೆ. ಅದರಲ್ಲಿ ಯಾರೂ ಕೂಡ ಹಿಜಾಬ್ ಧರಿಸಿಲ್ಲ. ಆದ್ರೆ ಹಿಂದೆಯಿಂದಲೂ ಹಿಜಾಬ್ ಅವಕಾಶ ಇತ್ತು ಎಂದು ವಿದ್ಯಾರ್ಥಿನಿಯರು ವಾದ ಮಾಡಿದ್ದಾರೆ. ಇದಕ್ಕೆ ಹಿಜಾಬ್ ಸಂಸ್ಕೃತಿ ಇರಲಿಲ್ಲ ಎಂಬುವುದಕ್ಕೆ ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜು ಸಾಕ್ಷ್ಯ ನೀಡಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷದ ಗೋಡೆ ನಿರ್ಮಾಣ ಆಗಿದೆ: ಹಿಜಾಬ್ ವಿವಾದಕ್ಕೆ ಕಮಲ್ ಹಾಸನ್, ರಮ್ಯಾ ಪ್ರತಿಕ್ರಿಯೆ
Published On - 12:40 pm, Wed, 9 February 22