ಕರ್ನಾಟಕ ಹಿಜಾಬ್ ವಿವಾದದಲ್ಲಿ ಮೂಗು ತೂರಿಸಿದ ಪಾಕಿಸ್ತಾನ; ಭಾರತದಲ್ಲಿನ ಈ ಬೆಳವಣಿಗೆ ಸಚಿವರಿಗೆ ಭಯಹುಟ್ಟಿಸುತ್ತಿದೆಯಂತೆ !
ಮುಸ್ಲಿಮರನ್ನು ನಿರ್ಬಂಧಿಸಲು ಭಾರತ ಮಾಡುತ್ತಿರುವ ಇಂಥ ಪ್ರಯತ್ನಗಳನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು ಎಂದು ಪಾಕ್ ವಿದೇಶಾಂಗ ಇಲಾಖೆ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.
ಕರ್ನಾಟಕದಾದ್ಯಂತ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್-ಕೇಸರಿ ಶಾಲು (Hijab Row In Karnataka) ವಿವಾದಕ್ಕೆ ಪಾಕಿಸ್ತಾನದಿಂದ (Pakistan)ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿಜಾಬ್ ಧರಿಸಿ ಹೋದ ಹೆಣ್ಣುಮಕ್ಕಳಿಗೆ ಕಾಲೇಜಿನ ಕ್ಲಾಸ್ರೂಮಿಗೆ ಪ್ರವೇಶ ನಿರಾಕರಿಸಿದ ಕ್ರಮವನ್ನು ಪಾಕ್ನ ಇಮ್ರಾನ್ ಖಾನ್ ಸರ್ಕಾರದ ಇಬ್ಬರು ಸಚಿವರು ಟ್ವೀಟ್ ಮೂಲಕ ಖಂಡಿಸಿದ್ದಾರೆ. ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್ಝಾಯ್ ಕೂಡ ಕರ್ನಾಟಕ ಹಿಜಾಬ್ ವಿವಾದದ ಬಗ್ಗೆ ಟ್ವೀಟ್ ಮಾಡಿ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹಿಜಾಬ್ (Hijab) ಅಡ್ಡಿಯಾಗುತ್ತಿರುವುದು ಭಯಾನಕ ಎಂದಿದ್ದಾರೆ. ಹಾಗೇ ಇಮ್ರಾನ್ ಖಾನ್ ಸರ್ಕಾರದಲ್ಲಿ ಮಾಹಿತಿ ಇಲಾಖೆ ಸಚಿವರಾಗಿರುವ ಫಾವದ್ ಚೌಧರಿ ಮತ್ತು ವಿದೇಶಾಂಗ ಇಲಾಖೆ ಸಚಿವ ಶಾ ಮೊಹಮ್ಮದ್ ಖುರೇಷಿ ಟ್ವೀಟ್ ಮಾಡಿ, ಹಿಜಾಬ್ ವಿವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಆಗುತ್ತಿರುವ ಬೆಳವಣಿಗೆ ನಿಜಕ್ಕೂ ಭಯ ಹುಟ್ಟಿಸುವಂತಿದೆ ಎಂದು ಹೇಳಿದ್ದಾರೆ.
ಮಾಹಿತಿ ಇಲಾಖೆ ಸಚಿವರಾಗಿರುವ ಫಾವದ್ ಚೌಧರಿ ಟ್ವೀಟ್ ಮಾಡಿ, ಪ್ರಧಾನಿ ಮೋದಿಯವರ ಭಾರತದಲ್ಲಿ ಈಗೇನು ನಡೆಯುತ್ತಿದೆಯೋ ಅದು ಭಯಹುಟ್ಟಿಸುವಂತಿದೆ. ಅಸ್ಥಿರ ನಾಯಕತ್ವದಿಂದಾಗಿ ಭಾರತದ ಸಮಾಜ ಅತ್ಯಂತ ವೇಗವಾಗಿ ಅವನತಿಯಾಗುತ್ತಿದೆ. ಇತರ ನಾಗರಿಕರು ಉಳಿದ ಉಡುಪುಗಳನ್ನು ಧರಿಸುವುದು ಹೇಗೆ ಅವರ ವೈಯಕ್ತಿಕ ಆಯ್ಕೆಯೋ, ಹಿಜಾಬ್ ಧರಿಸುವುದೂ ಕೂಡ ಮುಸ್ಲಿಂ ಹೆಣ್ಣುಮಕ್ಕಳ ವೈಯಕ್ತಿಕ ಆಯ್ಕೆ ಎಂದು ಹೇಳಿದ್ದಾರೆ.
ಇನ್ನೊಬ್ಬ ಸಚಿವ ಖುರೇಷಿ ಟ್ವೀಟ್ ಮಾಡಿ, ಮುಸ್ಲಿಂ ಹೆಣ್ಣುಮಕ್ಕಳನ್ನು ಅವರು ಧರಿಸುವ ಹಿಜಾಬ್ ಕಾರಣಕ್ಕೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದೆಂದರೆ ಅದು ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಸಮಾಧಿ ಮಾಡಿದಂತೆ. ಮುಸ್ಲಿಮರನ್ನು ನಿರ್ಬಂಧಿಸಲು ಭಾರತ ಮಾಡುತ್ತಿರುವ ಇಂಥ ಪ್ರಯತ್ನಗಳನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
Depriving Muslim girls of an education is a grave violation of fundamental human rights. To deny anyone this fundamental right & terrorise them for wearing a hijab is absolutely oppressive. World must realise this is part of Indian state plan of ghettoisation of Muslims.
— Shah Mahmood Qureshi (@SMQureshiPTI) February 9, 2022
ಕರ್ನಾಟಕದಲ್ಲಿ ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ತಮಗೆ ತರಗತಿಗೆ ಹಿಜಾಬ್ ಧರಿಸಿ ಹೋಗಲು ಅನುಮತಿ ನೀಡಬೇಕು ಎಂದು ಕೆಲವು ಮುಸ್ಲಿಂ ಹೆಣ್ಣುಮಕ್ಕಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸದ್ಯ ಯಾವುದೇ ತೀರ್ಪನ್ನೂ ಕೋರ್ಟ್ ನೀಡಿಲ್ಲ. ಇನ್ನೊಂದೆಡೆ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ತರಗತಿಗೆ ಬರಲು ಪ್ರಾರಂಭಿಸಿದ್ದಾರೆ. ಸಮವಸ್ತ್ರಕ್ಕಿಂತಲೂ ಮುಸ್ಲಿಂ ಹೆಣ್ಣುಮಕ್ಕಳಿಗೆ ಅವರ ಧರ್ಮದ ಹಿಜಾಬ್ ಮುಖ್ಯವಾದರೆ, ನಮಗೂ ನಮ್ಮ ಕೇಸರಿ ಶಾಲು ಮುಖ್ಯ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ರಾಜ್ಯದಲ್ಲಿ ಮೂರುದಿನಗಳ ಕಾಲ ಕಾಲೇಜಿಗೆ ರಜೆ ಘೋಷಣೆ ಮಾಡಿ, ಸರ್ಕಾರ ಆದೇಶ ಹೊರಡಿಸಿದೆ. ಇದೆಲ್ಲದರ ಮಧ್ಯೆ ಹಿಜಾಬ್ ವಿವಾದವೆಂಬುದು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ.
Published On - 12:24 pm, Wed, 9 February 22