ಬೆಂಗಳೂರು: 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಮುಷ್ಕರಕ್ಕೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕೂಡ ಬೆಂಬಲ ನೀಡಿದ್ದು ರಾಜ್ಯದ ಹಲವೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಮಾಡಲಾಗಿದೆ. ಸದ್ಯ ಇದರಿಂದ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಗರ್ಭಿಣಿ ನರಳಾಡುತ್ತಿರುವ ದೃಶ್ಯಗಳು ಮನಕಲುಕುವಂತಿದೆ.
ಬೆಂಗಳೂರಿನ ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್ ಹಿನ್ನೆಲೆ ಭಾರೀ ಸಮಸ್ಯೆಗಳು ಎದುರಾಗುತ್ತಿವೆ. ಚಿಕಿತ್ಸೆ ಸಿಗದೆ ರೋಗಿಗಳು ನರಳಾಡುವಂತಾಗಿದೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಗರ್ಭಿಣಿ ಪರದಾಡುತ್ತಿದ್ದಾರೆ. ಮೂರು ಆಸ್ಪತ್ರೆಗಳಿಗೆ ಹೋದರೂ ಗರ್ಭಿಣಿಗೆ ಚಿಕಿತ್ಸೆ ಸಿಕ್ಕಿಲ್ಲ. ವೈದ್ಯರಿಲ್ಲ ಅಂತಾ ಚಿಕಿತ್ಸೆ ಕೊಡದೆ ನಮ್ಮನ್ನು ಕಳಿಸುತ್ತಿದ್ದಾರೆ ಎಂದು ಗರ್ಭಿಣಿಯ ಮಹಿಳೆಯ ತಾಯಿ ಕಣ್ಣೀರು ಹಾಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ವೈದ್ಯರು ಈಗಾಗೇ ಡೆಲಿವರಿ ಡೇಟ್ ನೀಡಿದ್ದಾರೆ. ಆದ್ರೆ ನಂಗೆ ಇವತ್ತು ಕೂಡಾ ಹೊಟ್ಟೆ ನೋವು ಕಾಣಿಸಿಕೊಂಡಿಲ್ಲ. ಹೊಟ್ಟೆಯಲ್ಲಿ ಮಗು ಟರ್ನ್ ಆಗಿದೆ ಅಂತಿದ್ದಾರೆ. ಸ್ಕ್ಯಾನ್ ಮಾಡಿಸಬೇಕು, ಬ್ಲಡ್ ಚೆಕ್ ಮಾಡಿಸೇಕು. ಆದ್ರೆ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಇಲ್ಲ. ವೈದ್ಯರಿಲ್ಲ ಅಂತಾ ಕಳಿಸಿದ್ರೂ ಎಂದು ತಿಳಿಸಿದರು.
ಇದನ್ನೂ ಓದಿ: ಸರ್ಕಾರದ ವಿರುದ್ಧ ನೌಕರರ ಸಮರ.. ಇಂದಿನಿಂದ ಮುಷ್ಕರ: ಬಹುತೇಕ ಎಲ್ಲಾ ಸರ್ಕಾರಿ ಸೇವೆಗಳು ಬಂದ್
ಬಾಗಲಕೋಟೆ ಜಿಲ್ಲೆ ನೌಕರರ ಸಂಘವೂ ಮುಷ್ಕರಕ್ಕೆ ಬೆಂಬಲ ಸೂಚಿಸಿದೆ. ಯಾವುದೇ ಇಲಾಖೆಯ ಸರಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗೋದಿಲ್ಲ. ಯಾರು ಕಚೇರಿ, ಶಾಲಾ ಕಾಲೇಜಿಗೆ ಬರೋದಿಲ್ಲ. ಜಿಲ್ಲೆಯಲ್ಲಿ 24800 ಸರಕಾರಿ ನೌಕರರಿದ್ದಾರೆ. ವೈದ್ಯಾಧಿಕಾರಿಗಳು, ವೈದ್ಯರು, ಕೆಎಎಸ್ ಅಧಿಕಾರಿಗಳಿಂದ ಹಿಡಿದು ಗ್ರೂಪ್ ಡಿ ವರೆಗೂ ನೌಕರರಿದ್ದಾರೆ. ಆಸ್ಪತ್ರೆ ತುರ್ತು ಸೇವೆಗೆ ಕೆಲ ವೈದ್ಯರು, ಸಿಬ್ಬಂದಿ ಮೀಸಲಿಡಲಾಗಿದೆ. ತುರ್ತು ಸೇವೆ ಮಾತ್ರ ಲಭ್ಯವಿರುತ್ತೆ. ಆದ್ರೆ ಅವರು ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸುತ್ತಾರೆ ಎಂದು ನೌಕರರ ಸಂಘದ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:25 am, Wed, 1 March 23