
ಬೆಂಗಳೂರು, ಜುಲೈ 19: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆಗಳನ್ನು (Bengaluru 5 Corporations) ರಚನೆ ಮಾಡಿ ಕರ್ನಾಟಕ ಸರ್ಕಾರ (Karnataka Government) ಆದೇಶ ಹೊರಡಿಸಿದೆ. ಸರ್ಕಾರ ಐದೂ ಮಹಾನಗರ ಪಾಲಿಕೆಗಳ ಗಡಿಯನ್ನು ಗುರುತು ಮಾಡಿದೆ. ಬೃಹತ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಕೇಂದ್ರ ಕಚೇರಿಯನ್ನು ಆಗಸ್ಟ್ 10ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೇಂದ್ರ ಕಚೇರಿಯಾಗಿ ಮಾರ್ಪಾಡು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಆಗಸ್ಟ್ 11ರಿಂದ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಐದು ಪಾಲಿಕೆಗಳನ್ನು ರಚನೆ ಮಾಡಿದ ವಿಚಾರವಾಗಿ ಚರ್ಚೆ ನಡೆಸಿ, ಬಿಲ್ ಪಾಸ್ ಮಾಡಲು ಸರ್ಕಾರ ತಯಾರಿ ನಡೆಸಿದೆ. ಈ ಪಾಲಿಕೆಗಳ ರಚನೆ ಬಗ್ಗೆ ಆಕ್ಷೇಪಣೆ ಇದ್ದರೇ ಸಾರ್ವಜನಿಕರು ಸಲಹೆ ನೀಡುವಂತೆ ಸರ್ಕಾರ ಹೇಳಿದೆ.
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024ರ ಅಡಿಯಲ್ಲಿ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಲಾಗಿದೆ. ಈ ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆಗಳನ್ನು ರಚನೆ ಮಾಡಲಾಗಿದೆ.
ಅಧಿಕಾರ ವಿಕೇಂದ್ರೀಕರಣದ ಸಲುವಾಗಿ ಬಿಬಿಎಂಪಿಯನ್ನು 7ರ ವರೆಗೆ ಎಷ್ಟು ಭಾಗಗಳಾಗಿ ಬೇಕಿದ್ದರೂ ವಿಂಗಡಿಸುವ ಕುರಿತು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ ಪಾಟೀಲ್ ನೇತೃತ್ವದ ಗ್ರೇಟರ್ ಬೆಂಗಳೂರು ಸಮಿತಿಯು ಶಿಫಾರಸು ಮಾಡಿತ್ತು. ಪಾಲಿಕೆಗಳನ್ನು ರಚನೆ ಮಾಡುವ ಸಂದರ್ಭದಲ್ಲಿ ವಾರ್ಡ್‌ಗಳ ಸಂಖ್ಯೆಯೂ ಹೆಚ್ಚಳ ಮಾಡಬೇಕು. ಪ್ರತಿ ಪಾಲಿಕೆಗೂ 100ರಿಂದ 125 ವಾರ್ಡ್‌ಗಳನ್ನು ರಚನೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದು. ಈ ಅಭಿವೃದ್ಧಿಗೆ ಅನುಗುಣವಾಗಿ ಬೆಂಗಳೂರಿನ ಆಡಳಿತವನ್ನು ವಿಕೇಂದ್ರೀಕರಣ ಮಾಡಬೇಕು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಂಗಡಣೆ ಮಾಡಬೇಕು ಎನ್ನುವು ವಿಚಾರವು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲ್ಲೇ ಇದೆ. ಹೀಗಾಗಿ, ಇದೀಗ ಆಡಳಿತದ ದೃಷ್ಟಿಯಿಂದ ಐದು ಪಾಲಿಕೆಗಳನ್ನು ರಚನೆ ಮಾಡಲಾಗಿದೆ.
Published On - 7:32 pm, Sat, 19 July 25