ಗ್ರೇಟರ್ ಬೆಂಗಳೂರು ವಿಧೇಯಕ: ಇದು ಬೆಂಗಳೂರಿನ ಪಾಲಿಗೆ ಮರಣ ಶಾಸನ ಎಂದ ಆರ್ ಅಶೋಕ್
ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ವಿಭಜನೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಗ್ರೇಟರ್ ಬೆಂಗಳೂರು ವಿಧೇಯಕ ಮರಣ ಶಾಸನ ಎಂದು ಕರೆದಿರುವ ವಿರೋಧ ಪಕ್ಷದ ನಾಯಕರು, ಬಿಬಿಎಂಪಿ ವಿಭಜನೆಯಿಂದ ಆಡಳಿತಾತ್ಮಕ ವೆಚ್ಚ ಹೆಚ್ಚಾಗುವುದು ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ಅಡ್ಡಿಯಾಗುವುದು ಎಂದು ಆರೋಪಿಸಿದ್ದಾರೆ. ಬೆಂಗಳೂರು ಒಂದಾಗಿರಬೇಕೆಂಬುದು ಒತ್ತಾಯಿಸಿದ್ದಾರೆ.

ಬೆಂಗಳೂರು, ಮಾರ್ಚ್ 10: ಗ್ರೇಟರ್ ಬೆಂಗಳೂರು ವಿಧೇಯಕ (Greater Bengaluru Bill) ಇದು ಬೆಂಗಳೂರಿನ ಪಾಲಿಗೆ ಮರಣ ಶಾಸನ ಎಂದು ವಿರೋಧ ಪಕ್ಷದ ನಾಯಕ ಅಶೋಕ್ (R Ashoka) ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, 74ನೇ ತಿದ್ದುಪಡಿ ಬಗ್ಗೆ ನೀವು ಅಪಚಾರ ಮಾಡುತ್ತಿದ್ದೀರಿ. ಮುಖ್ಯಮಂತ್ರಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಸ್ಥಳೀಯ ನಾಯಕತ್ವದ ಮೇಲೆ ಹೇರಿಕೆ ಮಾಡುತ್ತಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಬಿಬಿಎಂಪಿ ವಿಭಜನೆ ಮಾಡಬಾರದು: ಆರ್.ಅಶೋಕ್ ಒತ್ತಾಯ
ಯಾವುದೇ ಕಾರಣಕ್ಕೂ ಬಿಬಿಎಂಪಿ ವಿಭಜನೆ ಮಾಡಬಾರದು. ಬೆಂಗಳೂರು ಒಟ್ಟಾಗಿರಲಿ ಅಂತಾ 4 ಗೋಪುರ ನಿರ್ಮಿಸಿದ್ದರು. ಕೆಂಪೇಗೌಡರ ಪರಿಕಲ್ಪನೆಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಿಎಂಗೆ ಪರಮಾಧಿಕಾರ ನೀಡಿ ಪಾಲಿಕೆ ಅಧಿಕಾರ ತೆಗೆದಿದ್ದಾರೆ. ಬೆಂಗಳೂರಿಗೆ ಈ ವಿಧೇಯಕ ಮರಣ ಶಾಸನ ತಂದಂತಾಗುತ್ತದೆ. ಬೆಂಗಳೂರಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ. ಒಬ್ಬ ಮೇಯರ್ ಇರಲಿ, ಕಮಿಷನರ್ ಡಿವೈಡ್ ಮಾಡಿ ಆಡಳಿತ ಮಾಡಿ ಎಂದು ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಬೆಂಗಳೂರು ಒಡೆಯುವ ಕೆಲಸ ಬೇಡ: ಶಾಸಕ ಡಾ.ಅಶ್ವತ್ಥ್ ನಾರಾಯಣ
ಶಾಸಕ ಡಾ.ಅಶ್ವತ್ಥ್ ನಾರಾಯಣ ಮಾತನಾಡಿ, ಬೆಂಗಳೂರು ಒಡೆಯುವ ಕೆಲಸ ಆಗುವುದು ಬೇಡ. ಅಧಿಕಾರ ವಿಕೇಂದ್ರೀಕರಣ ಮಾಡುವ ಕೆಲಸ ಮಾಡಿ. ಬೆಂಗಳೂರು ವಿಭಜನೆ ಕೈಬಿಡಿ. ವಾರ್ಡ್ ಸಮಿತಿ ನೇಮಕಾತಿ ಪ್ರಸ್ತಾವನೆ ಕೈಬಿಡಿ. ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಬೆಂಗಳೂರು ಅಭಿವೃದ್ಧಿ ಸಚಿವರು ಇರುವುದು ಬೇಡ. ನಾಮನಿರ್ದೇಶಿತ ವಿಧಾನ ಪರಿಷತ್ ಮತ್ತು ರಾಜ್ಯಸಭಾ ಸದಸ್ಯರಿಗೆ ಮತದಾನದ ಹಕ್ಕು ಕೈಬಿಡುವಂತೆ ಆಗ್ರಹಿಸಿದರು. ಅಶ್ವಥ್ ನಾರಾಯಣ ಸಲಹೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ವಿರುದ್ಧ ಸಂಸದ ಬಸವರಾಜ ಬೊಮ್ಮಾಯಿ ಕಿಡಿ
ಗ್ರೇಟರ್ ಬೆಂಗಳೂರು ವಿಧೇಯಕ ಮಂಡನೆಗೆ ಬಗ್ಗೆ ದೆಹಲಿಯಲ್ಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಬೆಂಗಳೂರು ನಗರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ, ಟ್ರಾಫಿಕ್ ನಿರ್ವಹಣೆ ಮಾಡಿಲ್ಲ. ಬ್ರ್ಯಾಂಡ್ ಬೆಂಗಳೂರು ಅಂತಾರೆ ಎಂದು ಕಿಡಿಕಾರಿದ್ದಾರೆ.
ಉತ್ತಮ ಯೋಜನೆಗಳೇ ಇಲ್ಲ. ವರ್ಲ್ಡ್ ಬ್ಯಾಂಕ್ನಿಂದ ಸಾಲ ಪಡೆಯೋದು ಬಿಟ್ರೆ ಬೇರೇನೂ ಆಗಿಲ್ಲ. ಇದನ್ನೆಲ್ಲಾ ಮರೆಮಾಚಲು 7 ಭಾಗಗಳನ್ನಾಗಿ ವಿಭಜನೆಯಾಗಲಿದೆ. ಬಿಬಿಎಂಪಿ ವಿಭಜನೆ ಆಡಳಿತಾತ್ಮಕ ವೆಚ್ಚಗಳನ್ನು ಹೆಚ್ಚು ಮಾಡಲಿದೆ. ಇದು ಬೆಂಗಳೂರಿನ ಸಮಸ್ಯೆಗೆ ಪರಿಹಾರ ಅಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.