Gruha Jyothi Scheme: ಗೃಹಜ್ಯೋತಿ ಯೋಜನೆಗೆ ಸಾರ್ವಜನಿಕರಿಂದ ಭಾರೀ ಸ್ಪಂದನೆ: 4 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

|

Updated on: Jun 21, 2023 | 9:21 PM

ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಸಂಜೆ ವೇಳೆಗೆ ಒಟ್ಟು 10,85,320 ಗ್ರಾಹಕರು ಸೇವಾ ಸಿಂಧು ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

Gruha Jyothi Scheme: ಗೃಹಜ್ಯೋತಿ ಯೋಜನೆಗೆ ಸಾರ್ವಜನಿಕರಿಂದ ಭಾರೀ ಸ್ಪಂದನೆ: 4 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಗೃಹ ಜ್ಯೋತಿ ಯೋಜನೆಗೆ (Gruha Jyothi Scheme) ನೋಂದಣಿ ಪ್ರಕ್ರಿಯೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಸಂಜೆ ವೇಳೆಗೆ ಒಟ್ಟು 10,85,320 ಗ್ರಾಹಕರು ಸೇವಾ ಸಿಂಧು ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆಯು ಜೂನ್‌ 18 ರಂದು ಆರಂಭಗೊಂಡಿತ್ತು. ಮೊದಲ ದಿನ 96,305, ಎರಡನೆಯ ದಿನ 3,34,845, ಮೂರನೇ ದಿನ ರಾತ್ರಿ ವೇಳೆಗೆ 4,64,225 ಹಾಗೂ ನಾಲ್ಕನೇ ದಿನಿವಾದ ಇಂದು 1,89,945 ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆಗೆ ಈ ಸಂಖ್ಯೆ ಇನ್ನಷ್ಟು ಹೆಚ್ಚಳಗೊಳ್ಳಲಿದೆ ಎಂದು ತಿಳಿಸಿದೆ.

ಗುರುವಾರದಿಂದ ರಾಜ್ಯದ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೋಂದಣಿ ಮಾಡಲು ಪ್ರತ್ಯೇಕ ಲಾಗಿನ್ ಐಡಿ ಹಾಗೂ ಪ್ರತ್ಯೇಕ ಲಿಂಕ್ ಅನ್ನು ನೀಡಲು ನಿರ್ಧರಿಸಲಾಗಿದೆ. ಹಾಗಾಗಿ ನಾಳೆಯಿಂದ ರಾಜ್ಯದ 2000 ವಿದ್ಯುಚ್ಛಕ್ತಿ ಕಚೇರಿಗಳಲ್ಲಿ ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

200 ಯೂನಿಟ್​​ವರೆಗಿನ ಉಚಿತ ವಿದ್ಯುತ್‌ ಪಡೆಯುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ನೋಂದಣಿ ಪ್ರಕ್ರಿಯೆಯಲ್ಲಿ ದಿನೇ ದಿನೇ ಏರಿಕೆ ಕಂಡುಬರುತ್ತಿದ್ದು, ಸಾರ್ವಜನಿಕರು ಯೋಜನೆಯ ಪ್ರಯೋಜನ ಪಡೆಯಲು ಭಾರೀ ಉತ್ಸುಕತೆ ತೋರುತ್ತಿದ್ದಾರೆ.

ಇದನ್ನೂ ಓದಿ: Gruha Jyothi Scheme: ರೀಚ್​ ಆಗದ ಇಂಧನ ಇಲಾಖೆಯ ಅರ್ಜಿ ಸ್ವೀಕಾರ ಟಾರ್ಗೆಟ್​, 2ನೇ ದಿನ ಸಲ್ಲಿಕೆಯಾದ ಅರ್ಜಿ ಎಷ್ಟು ಗೊತ್ತಾ?

ಕರ್ನಾಟಕ ಒನ್‌, ಬೆಂಗಳೂರು ಒನ್‌ ಹಾಗೂ ಗ್ರಾಮ ಒನ್‌ ಜೊತೆಗೆ, ಸಾರ್ವಜನಿಕರು ತಮ್ಮ ಕಂಪ್ಯೂಟರ್‌, ಲ್ಯಾಪ್​ಟಾಪ್‌, ಮೊಬೈಲ್‌ ಫೋನ್​ಗಳಲ್ಲಿ ಹಾಗೂ ಕೆಲವು ವಿದ್ಯುತ್ ಕಚೇರಿಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವನ್ನು ನಿಗದಿಪಡಿಸದ ಕಾರಣ ಗ್ರಾಹಕರು ಗಡಿಬಿಡಿ ಮಾಡಕೊಳ್ಳದೇ, ಜೊತೆಗೆ ಆತಂಕ ಪಡದೇ ಸೇವಾ ಸಿಂಧು ಪೋರ್ಟಲ್‌ sevasindhugs.karnataka.gov.in ಮೂಲಕ ನೋಂದಾಯಿಸಬಹುದು ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Gruha Jyothi Scheme: ಗೃಹಜ್ಯೋತಿ ಯೋಜನೆ ಅಡಿ ಅರ್ಜಿ ಸಲ್ಲಿಕೆಗೆ ಆರಂಭಿಕ ವಿಘ್ನ, ಸರ್ವರ್ ಫುಲ್ ಬ್ಯುಸಿ

ಸೇವಾಸಿಂಧು ಪೋರ್ಟಲ್​ ಸರ್ವರ್​ ಡೌನ್​

ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಶುರುವಾದಾಗಿನಿಂದಲೂ ಸರ್ವರ್​ ಸಮಸ್ಯೆ ತಪ್ಪಿರಲಿಲ್ಲ. ನಾಡ ಕಚೇರಿ, ಬೆಂಗಳೂರು ಓನ್, ಗ್ರಾಮ ಓನ್ ಹಾಗೂ ಬೆಸ್ಕಾಂ ಕಚೇರಿಗಳ ಮುಂದೆ ನೂರಾರು ಜನ ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ಕಾಯುವಂತಹ ಪರಿಸ್ಥಿತಿ ಉಂಟಾಗಿತ್ತು. ಜೂನ್ 20ರಂದು ಕೂಡ  ಸೇವಾಸಿಂಧು ಪೋರ್ಟಲ್ ಸಮಸ್ಯೆ ಕಾಣಿಸಿಕೊಂಡಿತ್ತು.

ಅಷ್ಟೇ ಅಲ್ಲದೇ ನಾಲ್ಕನೇ ದಿನವಾದ ಇಂದು ಕೂಡ ಸರ್ವರ್​ ಸಮಸ್ಯೆ ಉಂಟಾಗಿತ್ತು. ಬಳಿಕ ಸರ್ವರ್ ಸಮಸ್ಯೆ ಬಗೆಹರಿಸಲು ಸರ್ಕಾರ ಹೊಸ ಲಿಂಕ್ ಬಿಟ್ಟಿತ್ತು. ಎಲ್ಲಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಹೊಸ ಲಿಂಕ್ ಲಭ್ಯವಿತ್ತು. ಕೇವಲ ಒಂದೇ ನಿಮಿಷದಲ್ಲಿ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:19 pm, Wed, 21 June 23