ಗನ್‌ ಇಟ್ಟುಕೊಂಡು ಬಂದು ಸಿಎಂಗೆ ಹಾರ ಹಾಕಿದ ಅನಾಮಿಕ, ಆತಂಕ ಮೂಡಿಸಿದ ವ್ಯಕ್ತಿ!

ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದ ವ್ಯಕ್ತಿಯೋರ್ವ ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದ್ದಾನೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ರೋಡ್​ ಶೋ ನಡೆಯುತ್ತಿದ್ದ ವೇಳೆ ಏಕಾಏನಿ ಗನ್​ ಇಟ್ಟುಕೊಂಡಿದ್ದ ವ್ಯಕ್ತಿ ವಾಹನ ಏರಿ ಸಿದ್ದರಾಮಯ್ಯಗೆ ಹಾರ ಹಾಕಿದ್ದಾನೆ. ಇದು ಆತಂಕಕ್ಕೆ ಕಾರಣವಾಗಿದೆ.

ಗನ್‌ ಇಟ್ಟುಕೊಂಡು ಬಂದು ಸಿಎಂಗೆ ಹಾರ ಹಾಕಿದ ಅನಾಮಿಕ, ಆತಂಕ ಮೂಡಿಸಿದ ವ್ಯಕ್ತಿ!
Follow us
| Updated By: ರಮೇಶ್ ಬಿ. ಜವಳಗೇರಾ

Updated on:Apr 08, 2024 | 7:04 PM

ಬೆಂಗಳೂರು, (ಏಪ್ರಿಲ್ 08): ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ರಂಗೇರಿದ್ದು, ಈ ಬಾರಿ 20 ಸೀಟುಗಳನ್ನು ಗೆಲ್ಲಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕಾಲಿಗೆ ಚಕ್ರಕಟ್ಟಿಕೊಂಡವಂತೆ ಓಡಾಡುತ್ತಿದ್ದಾರೆ. ಅದರಂತೆ ಇಂದು (ಏಪ್ರಿಲ್ 08) ಸಿದ್ದರಾಮಯ್ಯ (Siddaramaiah) ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಭರ್ಜರಿ ರೋಡ್​ ಶೋ ನಡೆಸಿ ಮತಯಾಚಿಸಿದರು. ಆದ್ರೆ, ಈ ವೇಳೆ ಗನ್ ಇಟ್ಟುಕೊಂಡು ಬಂದಿದ್ದ ವ್ಯಕ್ತಿಯೋರ್ವ ಸಿಎಂ ಸಿದ್ದರಾಮಯ್ಯಗೆ ಸನ್ಮಾನ ಮಾಡಿರುವ ಘಟನೆ ನಡೆದಿದೆ. ಸೊಂಟದಲ್ಲಿ ಗನ್​ ಇಟ್ಟುಕೊಂಡು ವಾಹನ ಏರಿ ಬಂದು ಸಿದ್ದರಾಮಯ್ಯಗೆ ಹೂವಿನ ಹಾರ ಹಾಕಿ ಹೋಗಿದ್ದು, ಇದೀಗ ಇದು ಆತಂಕಕ್ಕೆ ಕಾರಣವಾಗಿದೆ.

ಹೌದು….ಬೆಂಗಳೂರಿನ ಭೈರಸಂದ್ರದಲ್ಲಿ ಸಿದ್ದರಾಮಯ್ಯ ಅವರು ಪ್ರಚಾರ ನಡೆಸುತ್ತಿದ್ದ ವೇಳೆ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಕ್ಯಾಂಟರ್ ಏರಿ ಸಿಎಂಗೆ ಹಾರ ಹಾಕಿದ್ದಾನೆ. ಆದರೆ, ಆ ವ್ಯಕ್ತಿ ಯಾರು ಏನು ಎನ್ನುವುದು ತಿಳಿದುಬಂದಿಲ್ಲ. ಆ ವ್ಯಕ್ತಿ ಬಳಿ ಇದ್ದಿದ್ದು ಲೈಸೆನ್ಸ್ ಹೊಂದಿರುವ ಗನ್ ಆಗಿತ್ತೇ? ಆತ ಕಾಂಗ್ರೆಸ್‌ ಕಾರ್ಯಕರ್ತನಾ? ಮುಖಂಡನಾ? ಅಥವಾ ಇನ್ಯಾವುದೋ ವ್ಯಕ್ತಿಯಾ? ಎಂಬ ಪ್ರಶ್ನೆ ಉದ್ಭವಿಸಿದೆ.

ಇನ್ನು ಲೈಸೆನ್ಸ್ ಹೊಂದಿದ್ದರೂ ಸಹ ಆ ವ್ಯಕ್ತಿ ಏಕಾಏಕಿ ಸಿಎಂ ಸಿದ್ದರಾಮಯ್ಯ ಬಳಿ ಗನ್ ಇಟ್ಟುಕೊಂಡು ಹೋಗಬಹುದಾ? ಏನಾದರೂ ಹೆಚ್ಚು ಕಮ್ಮಿಯಾಗಿದ್ದರೆ? ಹೀಗಾಗಿ ಈ ಘಟನೆಯನ್ನು ಪೊಲೀಸ್ ಭದ್ರತಾ ವೈಫಲ್ಯ ಎಂದೇ ಹೇಳಲಾಗುತ್ತಿದ್ದು, ಈ ಬಗ್ಗೆ ಇದುವರೆಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಪ್ರಕರಣ ಮುಂದೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಗನ್​ ಇಟ್ಟುಕೊಂಡು ಬಂದು ಹಾರ ಹಾಕಿದ್ದು ರಿಯಾಜ್

ಯೆಸ್…ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಸಿದ್ದರಾಮಯ್ಯಗೆ ಹಾರ ಹಾಕಿ ಹೋದ ವ್ಯಕ್ತಿ ಯಾರು? ಯಾರು? ಎನ್ನುವುದು ಆತಂಕ ಮೂಡಿಸಿತ್ತು. ಈ ವಿಡಿಯೋ ಸುದ್ದಿ ವಾಹಿನಿಗಳಲ್ಲಿ ಹರಿದಾಡುತ್ತಿದ್ದಂತೆಯೇ ಆ ವ್ಯಕ್ತಿ ಯಾರು ಎನ್ನುವುದು ಗೊತ್ತಾಗಿದೆ. ಗನ್ ಇಟ್ಟುಕೊಂಡು ಬಂದು ಸಿಎಂಗೆ ಹಾರ ಹಾಕಿದ್ದು ರಿಯಾಜ್​ ಎಂದು ಗೊತ್ತಾಗಿದೆ.

ಜೀವಭಯವಿದೆ ಎಂದು ಅರ್ಜಿ ನೀಡಿ ಗನ್ ಪಡೆದುಕೊಂಡಿದ್ದ. ಅಲ್ಲದೇ ಎಲೆಕ್ಷನ್ ಟೈಮಲ್ಲಿ ಗನ್ ಸರೆಂಡರ್ ಮಾಡದಿರಲು ಸಹ ಅನುಮತಿ ಪಡೆದಿದ್ದ. ಆದ್ರೆ ಸಿಎಂ ಬಳಿ ಹೋಗುವಾಗ ಗನ್ ತೆಗೆದುಕೊಂಡು ಹೋಗಬಾರದಿತ್ತು. ಯಾಕಂದ್ರೆ Z ಭದ್ರತೆ ಹೊಂದಿರುವ ಸಿಎಂ ಹತ್ತಿರ ಗನ್ ಇರುವ ವ್ಯಕ್ತಿ ಹೋಗುವಂತಿಲ್ಲ. ಇನ್ನು ಸಿಎಂಗೆ ಝಡ್ ಸೆಕ್ಯುರಿಟಿ ಭದ್ರತೆ ಇರುತ್ತೆ. ಹೀಗಾಗಿ ಸಿಎಂ ಬಳಿ ಬರುವವರನ್ನ ತಪಾಸಣೆ ನಡೆಸಿ ಹತ್ತಿರ ಬಿಡಬೇಕಿತ್ತು. ಆದ್ರೆ, ಅದನ್ನು ಪೊಲೀಸರು ಮಾಡಿಲ್ಲ. ಇದೀಗ ರಿಯಾಜ್ ಸಾರ್ವಜನಿಕವಾಗಿ ಗನ್ ಪ್ರದರ್ಶನ ಮಾಡಿದ ಆರೋಪದ ಮೇಲೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಗಳಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:56 pm, Mon, 8 April 24