ಬೆಂಗಳೂರು: ಯುಗಾದಿ ಹೊಸತೊಡಕಿನ ಹಿನ್ನೆಲೆಯಲ್ಲಿ ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಜನರು ಮಾಂಸ ಖರೀದಿಗೆ ಮುಗಿಬಿದ್ದರು. ಪ್ರಾಣಿ ವಧೆಯ ಸಂದರ್ಭದಲ್ಲಿ ಹಲಾಲ್ ಪದ್ಧತಿ ಬೇಡ, ಜಟ್ಕಾ ಪದ್ಧತಿ ಅನುಸರಿಸಿ ಎಂದು ಜಾಗೃತಿ ಮೂಡಿಲು ಹಿಂದುತ್ವಪರ ಸಂಘಟನೆಗಳು ಪ್ರಯತ್ನ ನಡೆಸಿದವು. ಬಜರಂಗದಳದ ಕಾರ್ಯಕರ್ತರು ವಿವಿಧೆಡೆ ಕರಪತ್ರಗಳನ್ನೂ ಹಂಚಿದ್ದರು. ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಪಾಪಣ್ಣ ಮಟನ್ ಸ್ಟಾಲ್‌ನಲ್ಲಿ ಮಾಂಸಕ್ಕಾಗಿ ಉದ್ದನೆ ಸರತಿ ಸಾಲು ಕಂಡುಬಂತು. ನಡುಕಿನ 4 ಗಂಟೆಯಿಂದಲೇ ಜನರು ಮಾಂಸ ಖರೀದಿಗೆ ಪಾಳಿಯಲ್ಲಿ ನಿಂತಿದ್ದರು. ‘ನಮ್ಮ ಬಳಿ ಯಾರೂ ಕೂಡ ಹಲಾಲ್, ಜಟ್ಕಾ ಕಟ್ ಬಗ್ಗೆ ಕೇಳಿಲ್ಲ. ಗ್ರಾಹಕರು ಕೇಳಿದರೆ ಅವರಿಗೆ ಬೇಕಾದಂತೆ ಮಾಂಸ ಕೊಡುತ್ತೇವೆ’ ಎಂದು ಟಿವಿ9ಗೆ ಪಾಪಣ್ಣ ಮಟನ್ ಸ್ಟಾಲ್ ಮಾಲೀಕ ಮಾಹಿತಿ ನೀಡಿದರು. ಹಲಾಲ್, ಜಟ್ಕಾ ವಿಚಾರದ ಬಗ್ಗೆ ಗ್ರಾಹಕರ ಮುಂದೆ ಮಾತನಾಡುವುದಿಲ್ಲ. ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಮಾಂಸ ಸಿದ್ಧ ಮಾಡಿಕೊಡ್ತೇವೆ. ರಾತ್ರಿ 2 ಗಂಟೆಯಿಂದಲೇ ನಾವು ಮಾಂಸ ಮಾರಾಟ ಮಾಡ್ತಿದ್ದೇವೆ. ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚು ಮಾಂಸ ಖರೀದಿಸುತ್ತಿದ್ದಾರೆ. ಕೆಜಿ ಮಾಂಸವನ್ನು 800 ರೂಪಾಯಿಯಂತೆ ಮಾರುತ್ತಿದ್ದೇವೆ ಎಂದು ಹೇಳಿದರು. ಕಳೆದ ಎರಡು ವರ್ಷಗಳಿಂದ ಕೊರೊನಾ ಪಿಡುಗಿನ ಕಾರಣಕ್ಕೆ ನಿರ್ಬಂಧಗಳು ಇದ್ದ ಕಾರಣ ಈ ಬಾರಿ ಮಾಂಸಪ್ರಿಯರ ವರ್ಷತೊಡಕಿನ ಸಂಭ್ರಮ ಹೆಚ್ಚಾಗಿದೆ.
ಹಲಾಲ್ ಮಾಂಸ ವಿರೋಧಿಸಿ ಜಟ್ಕಾ ಕಟ್ ಮಾಂಸ ಮಾರಾಟಕ್ಕೆ ಬೆಂಗಳೂರಲ್ಲಿ ಬಜರಂಗದಳ ಮುಂದಾಗಿದೆ. 2 ಕೆಜಿ ತೂಗುವ ಗುಡ್ಡೆ ಮಾಂಸವನ್ನು ₹ 900ಕ್ಕೆ ಮಾರಾಟ ಮಾಡುತ್ತಿದೆ. ಬೆಂಗಳೂರಿನ ಸಿದ್ದಾಪುರ, ಕೋರಮಂಗಲ, ಆಡುಗೋಡಿ, ವೆಂಕಟಪುರ, ಗುಟ್ಟೆಪಾಳ್ಯ, ಸೋಮೇಶ್ವರದಲ್ಲಿ ಮನೆಮನೆಗೆ ಫ್ರೀ ಡೋರ್ ಡೆಲಿವರಿ ಮಾಡಲಾಗುವುದು ಎಂದು ಬಜರಂಗದಳ ಘೋಷಿಸಿದೆ. ಬಂತು ಕೋಲಾರದಿಂದ ಕುರಿ, ಮೇಕೆ ತರಿಸಿಕೊಂಡಿರುವ ಕಾರ್ಯಕರ್ತರು ನಸುಕಿನ 3 ಗಂಟೆಯಿಂದ ವಧೆ ಶುರು ಮಾಡಿದ್ದಾರೆ. ತಲೆ, ಕಾಲು, ಬೋಟಿ, ಲೀವರ್, ಗುಡ್ದಾ, ಮಾಂಸ ಬೆರೆಸಿ ಗುಡ್ಡೆ ಮಾಂಸ ಎಂದು ಮಾರಲಾಗುತ್ತಿದೆ.
ತುಮಕೂರಿನಲ್ಲಿ ಖರೀದಿ ಜೋರು
ತುಮಕೂರಿನಲ್ಲಿಯೂ ಯುಗಾದಿ ಹಬ್ಬದ ಹೊಸತೊಡಕು ಹಿನ್ನೆಲೆಯಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸುತ್ತಿದ್ದಾರೆ. ತುಮಕೂರಿನ ಹನುಮಂತಪುರದ ಮಟನ್ ಸ್ಟಾಲ್‌ನಲ್ಲಿ ವ್ಯಾಪಾರ ಚುರುಕಾಗಿ ಸಾಗಿದೆ. ಚೀಲದ ಬ್ಯಾಗ್ಗಳೊಂದಿಗೆ ಬಂದಿರುವ ಜನರು ಪಾಳಿಯಲ್ಲಿ ಕಾಯುತ್ತಿದ್ದಾರೆ. ಶಿರಾದ ಮಂಜು ಮಟನ್ ಸ್ಟಾಲ್‌ನಲ್ಲಿ ಹಿಂದೂ ಮೀಟ್ ಮಾರ್ಟ್ ಹೆಸರಿನಡಿಯಲ್ಲಿ ವ್ಯಾಪಾರ ನಡೆಯುತ್ತಿದೆ. ಜಟ್ಕಾ ಕಟ್ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಹೊಸಕೋಟೆ ದಮ್ ಬಿರಿಯಾನಿಗೆ ಡಿಮಾಂಡ್
ಯುಗಾದಿ ಹೊಸತೊಡಕು ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಆನಂದ್ ದಮ್ ಬಿರಿಯಾನಿ ಖರೀದಿಸಲು ಬೆಂಗಳೂರಿನ ಟೆಕಿಗಳು ಸಾಲುಗಟ್ಟಿದ್ದಾರೆ. ಬಾನುವಾರದ ಬಾಡೂಟ ಸವಿಯಲು ನೂರಾರು ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಬೆಳಗ್ಗೆ 5 ಗಂಟೆಯಿಂದಲೆ ಬಿರಿಯಾನಿ ಸೆಂಟರ್ ಮುಂದೆ ಸರತಿ ಸಾಲು ಕಂಡುಬರುತ್ತಿದೆ. ಕಾರು ಬೈಕ್ಗಳಲ್ಲಿ ಬಂದಿರುವ ನೂರಾರು ಬಿರಿಯಾನಿ ಪ್ರಿಯರು ಮಟನ್ ಬಿರಿಯಾನಿ, ಕಾಲು ಸೂಪ್ ಮತ್ತು ಕಬಾಬ್ಗಾಗಿ ಸರತಿಯಲ್ಲಿ ನಿಂತಿದ್ದಾರೆ.
ಮೈಸೂರು ರಸ್ತೆಯ ಮಾಂಸದಂಗಡಿಯಲ್ಲಿ ಮಾತನಾಡಿದ ಗ್ರಾಹಕರೊಬ್ಬರು, ಹಲಾಲ್ ಅಥವಾ ಜಟ್ಕಾ ಕಟ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮಗೆ ನಮಗೆ ಒಳ್ಳೆಯ ಮಾಂಸ ಬೇಕು ಅಷ್ಟೇ ಎಂದರು. ಗ್ರಾಹಕರು ಕೇಳಿದ ರೀತಿಯಲ್ಲಿ ಮಾಂಸ ಕೊಡುತ್ತೇವೆ ಎಂದು ಮಾಲೀಕರು ಪ್ರತಿಕ್ರಿಯಿಸಿದರು.
ರಾಮನಗರದಲ್ಲಿ ವಿವಾದದ ಬಿಸಿ ಇಲ್ಲ
ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿರುವ ರಾಮನಗರದಲ್ಲಿ ಹಲಾಲ್-ಜಟ್ಕಾ ಕಟ್ ವಿವಾದ ಅಷ್ಟಾಗಿ ಪರಿಣಾಮ ಬೀರಿಲ್ಲ. ಹಿಂದೂಗಳು ಹಲಾಲ್ ಮಾಡಿರೋ ಮಾಂಸವನ್ನೇ ಖರೀದಿ ಮಾಡುತ್ತಿದ್ದಾರೆ. ತಮಗೆ ಯಾವ ಮಾಂಸ ಬೇಕೋ ಅದನ್ನೇ ಖರೀದಿಸುತ್ತಿದ್ದಾರೆ.
ಶಿವಾಜಿನಗರದಲ್ಲೂ ವ್ಯಾಪಾರ ಜೋರು
ಬೆಂಗಳೂರಿನ ಶಿವಾಜಿನಗರದಲ್ಲಿಯೂ ಹಲಾಲ್-ಜಟ್ಕಾ ಕಟ್ ವಿವಾದ ಅಷ್ಟಾಗಿ ಸದ್ದು ಮಾಡಿಲ್ಲ. ಕಳೆದ ವರ್ಷಕ್ಕಿಂತಲೂ ಈ ವರ್ಷ ಒಳ್ಳೆಯ ವ್ಯಾಪಾರ ಆಗುತ್ತಿದೆ. ನಮ್ಮ ಅಂಗಡಿಯಲ್ಲಿ ಹಲಾಲ್ ಕಟ್ ಮಾಂಸವನ್ನೇ ಮಾರುತ್ತಿದ್ದೇವೆ. ಹಿಂದೂ ಗ್ರಾಹಕರೇ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸ್ತಿದ್ದಾರೆ ಎಂದು ಮಟನ್ ಮಾರಾಟಗಾರರು ಹೇಳಿದರು.
ಯಲಿಯೂರಿನಲ್ಲಿ ಗುಡ್ಡೆ ಮಾಂಸಕ್ಕೆ ಡಿಮಾಂಡ್
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಯಲಿಯೂರು ಗ್ರಾಮದಲ್ಲಿ ಗುಡ್ಡೆ ಮಾಂಸಕ್ಕೆ ನೂರಾರು ಗ್ರಾಹಕರು ಮುಗಿಬಿದ್ದಿದ್ದಾರೆ. ಕುರಿ ಮತ್ತು ಮೇಕೆಗಳನ್ನು ಸಾಕಿರುವರು ನೇರವಾಗಿ ಗುಡ್ಡೆ ಮಾಂಸ ಮಾರಾಟ ಮಾಡುತ್ತಿದ್ದಾರೆ. ಹಲಾಲ್ ಕಡೆ ಹೋಗದೆ ಗುಡ್ಡೆ ಮಾಂಸ ಕಡೆ ಹಳ್ಳಿಜನರು ಗಮನ ಹರಿಸುತ್ತಿದ್ದಾರೆ. ಮೈಸೂರು ತಾಲ್ಲೂಕು ಕೆಜಿ ಕೊಪ್ಪಲಿನಲ್ಲಿಯೂ ಹೊಸತೊಡಕಿಗೆ ಮಾಂಸ ಖರೀದಿ ಜೋರಾಗಿ ನಡೆದಿದೆ.
ಇದನ್ನೂ ಓದಿ: ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯ?; ಹಲಾಲ್, ಜಟ್ಕಾ ವಿವಾದದ ನಡುವೆ ಪಶುಸಂಗೋಪನಾ ಇಲಾಖೆ ಮಹತ್ವದ ಆದೇಶ