ಬೆಂಗಳೂರು: ಬಿಎಂಎಸ್ ಕಾಲೇಜು ಟ್ರಸ್ಟ್ (BMS College Trust) ಜಮೀನು ಅಕ್ರಮದ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಅಶ್ವತ್ಥ್ ನಾರಾಯಣ ಅವರ ವಿರುದ್ಧ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಒಬ್ಬ ವ್ಯಕ್ತಿಗೆ ಈಗಾಗಲೇ ಈ ಟ್ರಸ್ಟ್ ಅನ್ನು ಬರೆದುಕೊಟ್ಟಿದೆ. ಸಾರ್ವಜನಿಕ ಟ್ರಸ್ಟ್ ಒಂದು ಕುಟುಂಬಕ್ಕೆ ವರ್ಗಾವಣೆ ಆಗುತ್ತಿದೆ. ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ತನಿಖೆ ಮಾಡೋದಕ್ಕೆ ಸರ್ಕಾರಕ್ಕೆ ಭಯ ಯಾಕೆ? ನಾನು ಈ ಅಕ್ರಮದ ದಾಖಲೆಗಳನ್ನು ಜನರ ಮುಂದೆ ಇಟ್ಟಿದ್ದೇನೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ (PM Narendra Modi) ಆದಷ್ಟು ಬೇಗ ಪತ್ರ ಬರೆಯುತ್ತೇನೆ. ಎಲ್ಲಾ ದಾಖಲೆಗಳನ್ನು ಪ್ರಧಾನಿಗಳಿಗೆ ಕಳುಹಿಸಿಕೊಡುತ್ತೇನೆ. ಇದು ಶೇ. 40ರಷ್ಟು ಕಮಿಷನ್ ಅಲ್ಲ ಶೇ. 100ರಷ್ಟು ಕಮಿಷನ್ ವ್ಯವಹಾರ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಈ ಪ್ರಕರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಅವರಿಗೆ ಕಿಕ್ಬ್ಯಾಕ್ ಹೋಗಿದೆ. ಅಕ್ರಮದ ಬಗ್ಗೆ ಅಶ್ವತ್ಥ್ ನಾರಾಯಣ ಸಾಕ್ಷಿ ಕೊಡಿ ಎಂದು ಹೇಳುತ್ತಾರೆ. ಸಾಕ್ಷಿಗಾಗಿ ನಾನು ದುರ್ಬಿನ್ ಹಾಕಿಕೊಂಡು ಕುಳಿತುಕೊಳ್ಳಲು ಆಗುತ್ತಾ? ಅವರ ಪಕ್ಷದಲ್ಲೇ ಅಶ್ವತ್ಥ್ ನಾರಾಯಣ ಬಗ್ಗೆ ಮಾತನಾಡುತ್ತಾರೆ. ಯಾವುದೇ ಸಚಿವರು, ಶಾಸಕರು ಅಶ್ವತ್ಥ್ ನಾರಾಯಣ ಪರ ನಿಂತಿಲ್ಲ. 2006ರಿಂದ ಇಲ್ಲಿಯವರೆಗೆ ಅಕ್ರಮದ ಆರೋಪದ ಬಗ್ಗೆ ತನಿಖೆ ಆಗಲಿ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೇ ಈ ಅಕ್ರಮ ಆಗಿದೆ. ತಾಕತ್ತಿದ್ದರೆ ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಲಿ ಎಂದು ಹೆಚ್ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಬಿಎಂಎಸ್ ಟ್ರಸ್ಟ್ ವಿವಾದ: ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲ; ಜೆಡಿಎಸ್ನಿಂದ ಧರಣಿ ಮುಂದುವರಿಕೆ
ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಪಹರಣ ಸಮಯದಲ್ಲಿ ಭೀಷ್ಮ, ದ್ರೋಣಾಚಾರ್ಯ, ಧೃತರಾಷ್ಟ್ರ ಹೇಗೆ ಮೌನಕ್ಕೆ ಶರಣಾಗಿದ್ದರೋ ನಿನ್ನೆಯ ಸದನದಲ್ಲಿ ಕೂಡ ಬಿಜೆಪಿ ಶಾಸಕರು ಹಾಗೇ ನೋಡಿಕೊಂಡು ಸುಮ್ಮನೆ ಕೂತಿದ್ದರು. 2006 ರಿಂದ ಇಲ್ಲಿಯ ತನಕ ನಡೆದ ಅಕ್ರಮಗಳನ್ನು ತನಿಖೆ ಮಾಡಿಸಿ. ನಾನು ಈ ವಿಚಾರ ಪ್ರಸ್ತಾಪ ಮಾಡಿದಾಗ ಬಿಜೆಪಿಯ ಶಾಸಕರು, ಸಚಿವರು ಯಾರೂ ಮಾತನಾಡಿಲ್ಲ. ದೊಡ್ಡ ಮಟ್ಟದ ಕಿಕ್ ಬ್ಯಾಕ್ ಇಲ್ಲಿ ಹೋಗಿದೆ. ಸಚಿವ ಅಶ್ವತ್ಥ್ ನಾರಾಯಣ ಅವರಿಗೂ ಕಿಕ್ ಬ್ಯಾಕ್ ಹೋಗಿದೆ. ಅವರ ಪಕ್ಷದ ಶಾಸಕರೇ ಈ ಬಗ್ಗೆ ಮಾತನಾಡಿದ್ದಾರೆ. ಸತ್ಯಾಂಶ ಹೊರಬರಬೇಕಾದರೆ ತನಿಖೆಯಾಗಬೇಕು ಎಂದು ನಾವು ಆಗ್ರಹ ಮಾಡುತ್ತಿದ್ದೇವೆ ಎಂದು ಹೆಚ್ಡಿ ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ.
ಪ್ರಧಾನಿ ಮಂತ್ರಿಗಳು ಭ್ರಷ್ಟ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಹಾಗಾಗಿ, ಈಗ ನಾನು ದಾಖಲೆಗಳನ್ನು ಅವರಿಗೆ ಕಳುಹಿಸಿ ಕೊಡುತ್ತೇನೆ. ಪ್ರಧಾನಿ ಮೋದಿ ಅದೇನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ. ಬಿಎಂಎಸ್ ಟ್ರಸ್ಟ್ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಟ್ರಸ್ಟ್ ಮತ್ತು ಆ ಟ್ರಸ್ಟ್‌ನ ಎಲ್ಲ ಸ್ವತ್ತುಗಳನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಎಂಎಸ್ ಟ್ರಸ್ಟ್ ವಿವಾದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಧರಣಿ ಆರಂಭಿಸಿದೆ. ಅದರಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಜೆಡಿಎಸ್ ಜೊತೆ ಸಂಧಾನ ಸಭೆ ನಡೆಯಿತು. ಈ ಸಭೆಯಲ್ಲಿ ಜೆಡಿಎಸ್ ಒತ್ತಾಯಕ್ಕೆ ಸರ್ಕಾರವೂ ಜಗ್ಗಲಿಲ್ಲ, ತನಿಖೆಗೆ ಪಟ್ಟು ಹಿಡಿದಿರುವ ಜೆಡಿಎಸ್ ಕೂಡ ಬಗ್ಗಲಿಲ್ಲ. ಬಿಎಂಎಸ್ ಟ್ರಸ್ಟ್ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಂಧಾನ ಸಭೆಯಲ್ಲಿ ಪಟ್ಟು ಹಿಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿಮ್ಮದೇ ಸಂಸ್ಥೆಯಿಂದ ಆದರೂ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ. ಆದರೆ ಯಾವುದೇ ಮಾದರಿಯ ತನಿಖೆಗೂ ಸಭೆಯಲ್ಲಿ ರಾಜ್ಯ ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ ಸದನದಲ್ಲಿ ಜೆಡಿಎಸ್ ಧರಣಿ ಮುಂದುವರಿಸಿದೆ.