Lpg Cylinder Price Hike: ಜನತೆಯ ಜೇಬಿಗೆ ಕತ್ತರಿ ಎಷ್ಟು ಸರಿ? ಬಿಜೆಪಿ ವಿರುದ್ಧ ಕಿಡಿಕಾರಿದ ಹೆಚ್ ಡಿ ಕುಮಾರಸ್ವಾಮಿ
ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಏರಿಕೆ ಆಗುತ್ತಿರುವ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆ ಗೈದಿದ್ದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ (LPG Cylinder) ಬೆಲೆ ಮತ್ತೆ ಏರಿಕೆ ಆಗುತ್ತಿದೆ. ಹೋಟೆಲ್ ಮಾಲೀಕರ ಅಸೋಸಿಯೇಷನ್ ಕೂಡ ವಿರೋಧ ವ್ಯಕ್ತಪಡಿಸಿದೆ. ಸದ್ಯ ಈ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬೆಲೆ ಏರಿಕೆಯ ಬಿಸಿ ಮತ್ತೆ ದೇಶದ ಜನತೆಯನ್ನು ಸಂಕಷ್ಟಕ್ಕೆ ದೂಡಲಿದೆ. ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗೆ 50 ರೂಪಾಯಿ, ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ಗೆ 350.50 ರೂಪಾಯಿಗೆ ಹೆಚ್ಚಳವಾಗಿರುವ ಆಘಾತಕಾರಿ ಸುದ್ದಿ ವರದಿಯಾಗಿದೆ. ದೇಶದ ಆರ್ಥಿಕತೆಗೆ ಕಷ್ಟದಲ್ಲಿರುವಾಗ, ಜನತೆಯ ಜೇಬಿಗೆ ಕತ್ತರಿ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಬ್ಸಿಡಿ ನಿಂತಿರುವುದರಿಂದ ಗ್ರಾಮೀಣ ಭಾಗದ ಬಹಳಷ್ಟು ಮಹಿಳೆಯರು ಗ್ಯಾಸ್ ಸಿಲಿಂಡರ್ ಕೊಳ್ಳದೆ, ಮತ್ತೆ ಸೌದೆ ಬಳಕೆಗೆ ಹಿಂದಿರುಗಿದ್ದಾರೆ. ಇದೆ ವೇಳೆ ಮತ್ತೆ ಗೃಹ ಬಳಕೆಯ ಸಿಲಿಂಡರ್ ಬೆಲೆ ಏಕಾಏಕಿ ಏರಿಸಿದರೆ ಹೇಗೆ? ಕೇಂದ್ರ ಬಿಜೆಪಿ ಸರ್ಕಾರ ಯಾರಿಗಾಗಿ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ದೇಶದ ಜನರು ಹಣದುಬ್ಬರದಿಂದ ತತ್ತರಿಸುತ್ತಿದ್ದರೆ, ಪ್ರಧಾನಿ ಮೋದಿ ಮತ್ತವರ ಸಂಪುಟ ರಾಜ್ಯ ಚುನಾವಣೆಗಳಿಗಾಗಿ ಸುತ್ತುತ್ತಿದ್ದಾರೆ. ನಮ್ಮ ರಾಜ್ಯದ ಬಿಜೆಪಿ ಸರ್ಕಾರಕ್ಕಂತೂ ಮಾನ-ಮರ್ಯಾದೆ ಇಲ್ಲ. ತಮ್ಮದೇ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾರಣ ಎಲ್ಲವನ್ನೂ ಸಮರ್ಥಿಸುವ ಲಜ್ಜೆಗೇಡಿತನಕ್ಕೆ ಇಳಿದಿದ್ದಾರೆ.
ಇದನ್ನೂ ಓದಿ: LPG ಸಿಲಿಂಡರ್ ಬೆಲೆ ಏರಿಕೆಗೆ ಹೋಟೆಲ್ ಮಾಲೀಕರಿಂದ ವಿರೋಧ: ಸದ್ಯಕ್ಕಿಲ್ಲ ಹೋಟೆಲ್ ತಿಂಡಿ ಬೆಲೆ ಹೆಚ್ಚಳ
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಇಷ್ಟು ದೊಡ್ಡದಾಗಿ ಏರಿಸಿದರೆ ನಾಳೆ ಹೊಟೇಲ್, ರೆಸ್ಟೋರೆಂಟ್ಗಳ ಪರಿಸ್ಥಿತಿ ಏನಾಹಬಹುದು? ಇಲ್ಲೆಲ್ಲ ಕೆಲಸ ಮಾಡುವ ಲಕ್ಷಾಂತರ ಮಂದಿಯ ಉದ್ಯೋಗದ ಗತಿ ಏನು? ಆಹಾರದ ಬೆಲೆ ಆಕಾಶದೆತ್ತರಕ್ಕೆ ಏರಿದರೆ ಜನಸಾಮಾನ್ಯರ ಪಾಡೇನು? ಸುಳ್ಳುಗಳನ್ನೇ ಹೇಳುತ್ತಾ ಜನರ ಬದುಕು ನಿರ್ನಾಮ ಮಾಡಲಾಗುತ್ತಿದೆ ಎಂದು ಸಾಲು ಸಾಲು ಪ್ರಶ್ನೆಗಳನ್ನು ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ಮುಂದಿಟ್ಟಿದ್ದಾರೆ.
ಹೋಟೆಲ್ ಮಾಲೀಕ ಅಸೋಸಿಯೇಷನ್ ವಿರೋಧ
ಎಲ್.ಪಿ.ಜಿ ಸಿಲಿಂಡರ್ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆ ಹೋಟೆಲ್ ಮಾಲೀಕ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸುವುದರೊಂದಿಗೆ ಸದ್ಯಕ್ಕೆ ಹೋಟೆಲ್ ಫುಡ್ಗಳ ಬೆಲೆ ಜಾಸ್ತಿಯಾಗೋದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಕುರಿತಾಗಿ ಟಿವಿ 9ಗೆ ಹೋಟೆಲ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ ರಾವ್ ಪ್ರತಿಕ್ರಿಯೆ ನೀಡಿದ್ದು, ಜನ ಸಾಮಾನ್ಯರಿಗೆ ಹಾಗೂ ಹೋಟೆಲ್ ಮಾಲೀಕರಿಗೂ ಈಗೀನದರ ಸಿಕ್ಕಾಪಟ್ಟೆ ಹೊರೆಯಾಗಲಿದೆ. ಈ ಕುರಿತಾಗಿ ಇದೇ 16ಕ್ಕೆ ಕೇಂದ್ರ ಸಚಿವರನ್ನ ಭೇಟಿ ಮಾಡುತ್ತೇವೆ. ಜಿಎಸ್ಟಿ ರೇಟ್ ನಮಗೆ ತುಂಬ ಜಾಸ್ತಿ ಇದೆ.’
ಇದನ್ನೂ ಓದಿ: LPG Cylinder Price Hike: ಬೆಲೆ ಏರಿಕೆ ಶಾಕ್! ಗೃಹ ಬಳಕೆಯ LPG ಸಿಲಿಂಡರ್ ದರ ಹೆಚ್ಚಳ
ಡೊಮೆಸ್ಟಿಕ್ ರೇಟ್ನಲ್ಲಿ 5% ಜಿಎಸ್ಟಿ ಇದೆ. ಆದರೆ ನಮಗೆ ಕಮರ್ಷಿಯಲ್ ರೇಟ್ನಲ್ಲಿ ಜಿಎಸ್ಟಿ 18% ಇದೆ. ಈ ವಿಚಾರವಾಗಿ ನಾವು ಈ ಹಿಂದೆ ಮನವಿ ಮಾಡಿದ್ದೇವು. ಈಗ ಮತ್ತೆ ಒತ್ತಾಯ ಮಾಡುತ್ತೇವೆ. ಜೊತೆಗೆ ನಮಗೆ ರಿಯಾಯಿತಿ ದರವು ಜಾಸ್ತಿ ಮಾಡಿದ್ದಾರೆ. ಕೇಂದ್ರ ಸಚಿವರ ಜೊತೆ ಮಾತಾನಾಡಿದ ಬಳಿಕ ಬೆಲೆ ಏರಿಕೆಯ ಕುರಿತು ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:06 pm, Wed, 1 March 23