ಮಾನನಷ್ಟ ಮೊಕದ್ದಮೆ ಹೂಡುವೆ: ಗುತ್ತಿಗೆದಾರರ ಸಂಘದ ಕಮಿಷನ್ ಆರೋಪಕ್ಕೆ ಸುಧಾಕರ ಗರಂ

ಮಾನನಷ್ಟ ಮೊಕದ್ದಮೆ ಹೂಡುವೆ: ಗುತ್ತಿಗೆದಾರರ ಸಂಘದ ಕಮಿಷನ್ ಆರೋಪಕ್ಕೆ ಸುಧಾಕರ ಗರಂ
ಡಾ.ಕೆ. ಸುಧಾಕರ್

ನನ್ನ ವಿರುದ್ಧದ ಕಮಿಷನ್ ಆರೋಪ ಆಧಾರರಹಿತವಾಗಿದೆ. ಈ ಬಗ್ಗೆ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ತಿಳಿಸಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 13, 2022 | 2:05 PM

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಮಿಷನ್ ಕೇಳುತ್ತಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ‘ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು. ನನ್ನ ವಿರುದ್ಧದ ಕಮಿಷನ್ ಆರೋಪ ಆಧಾರರಹಿತವಾಗಿದೆ. ಈ ಬಗ್ಗೆ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್​ ಏಜೆಂಟ್ ಎಂದು ಆರೋಪ ಮಾಡಿದರು. ಇದಕ್ಕೂ ಮೊದಲು ಸಚಿವ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡು ಮಾತನಾಡಿದ್ದ ಅವರು, ಉದ್ದೇಶಪೂರ್ವಕವಾಗಿ ಸಚಿವ ಈಶ್ವರಪ್ಪ ಅವರನ್ನು ಕಾಂಗ್ರೆಸ್ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್‌ನವರು ಹೇಳುವುದು ಮುಖ್ಯವಲ್ಲ. ಪೊಲೀಸ್ ತನಿಖೆಯಲ್ಲಿ ಸತ್ಯಾಸತ್ಯತೆ ಬಯಲಾಗುತ್ತದೆ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೇಳಿಕೆ ಕೊಟ್ಟ ಬಳಿಕ ನಾವು ಮಾತನಾಡುವುದು ಸರಿಯಲ್ಲ. ಡಿವೈಎಸ್​ಪಿ ಗಣಪತಿ ಪ್ರಕರಣವೇ ಬೇರೆ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪ್ರಕರಣವೇ ಬೇರೆ. ಈ ಪ್ರಕರಣದಲ್ಲಿ ವಾಟ್ಸ್ಯಾಪ್ ಸಂದೇಶ ಎಲ್ಲಿಂದ ಬಂದಿದೆ? ಸದ್ಯಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಯಾರೋ ಒಬ್ಬ ಅನಾಮಧೇಯ ಪತ್ರ ಬರೆದರೆ, ಆಧಾರರಹಿತವಾದ ದೂರಿಗೆ ಯಾವ ಮಾನ್ಯತೆ ಕೊಡಲು ಸಾಧ್ಯ. ದೂರಿನ ಸಂಬಂಧ ದಾಖಲೆ ಎಲ್ಲಿದೆ. ಅದನ್ನು ಇಟ್ಟುಕೊಂಡು ಆರೋಪ ಮಾಡುವುದು, ಗೇಲಿ ಮಾಡುವುದು ಸರಿಯಲ್ಲ. ಪಕ್ಷಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಇದನ್ನೆಲ್ಲಾ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದವರೇ ಭ್ರಷ್ಟಾಚಾರದ ಜನಕರು. ಭ್ರಷ್ಟಾಚಾರ ರಹಿತ ಸ್ವಚ್ಛ ಸರ್ಕಾರವನ್ನು ಮೋದಿ ಕೊಡುತ್ತಿದ್ದಾರೆ. ಭ್ರಷ್ಟಾಚಾರ ಇದೆ, ಇಲ್ಲ ಎಂದು ಹೇಳೋಕೆ ಆಗಲ್ಲ. ಇದು ನಮ್ಮ ಸರ್ಕಾರ ಬಂದ ಮೇಲೆ ಆರಂಭವಾಗಿಲ್ಲ. ಭ್ರಷ್ಟಾಚಾರ ಮೊದಲಿನಿಂದಲೂ ಇದೆ. ಎಲ್ಲಾ ಪಕ್ಷಗಳು ಒಂದಾಗಿ ಈ ಬಗ್ಗೆ ಚರ್ಚಿಸಬೇಕು. ಡಿವೈಎಸ್‌ಪಿ ಗಣಪತಿ ವಿಚಾರವೇ ಬೇರೆ, ಈ ವಿಚಾರವೇ ಬೇರೆ ಎಂದರು.

ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿ: ಸಿದ್ದರಾಮಯ್ಯ

ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಭ್ರಷ್ಟಾಚಾರದ ಆರೋಪವನ್ನು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಅವರ ಕುಟುಂಬಸ್ಥರೂ ಮಾಡುತ್ತಿದ್ದಾರೆ. ಕಮಿಷನ್‌ಗೆ ಒತ್ತಾಯ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖವಿದ್ದರೂ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿಲ್ಲ. ಈಶ್ವರಪ್ಪ ಬಿಲ್ ಮಂಜೂರು ಮಾಡದಿದ್ದಕ್ಕೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್ ವಾಟ್ಸ್ಯಾಪ್ ಮೆಸೇಜ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇರೆ ಏನು ಬೇಕಾಗಿದೆ. ಕೂಡಲೇ ಸಚಿವ ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ರಾಜ್ಯ ಸರ್ಕಾರದ ಮೇಲೆ ಶೇ 40ರ ಕಮಿಷನ್ ಆರೋಪವನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ್ದಾರೆ. ರಾಜ್ಯದಲ್ಲಿ ಇಂತಹ ಕೆಟ್ಟ ಸರ್ಕಾರ ಎಂದೂ ಇರಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದರು. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರಿಗೆ ಚೆಕ್ ಮೂಲಕ ಕಮಿಷನ್ ಸಂದಾಯವಾಗುತ್ತಿದೆ. ಕೈ ಕುಟ್ಟಿ ಚೆಕ್ ಮೂಲಕ ಕಮಿಷನ್ ಪಡೆಯುತ್ತಾರೆ. ಸಚಿವರಾದ ಸುಧಾಕರ್, ಕಾರಜೋಳ ವಿರುದ್ಧದ ಆರೋಪಗಳೂ ಕೇಳಿಬಂದಿವೆ. ಮೊದಲು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಸರ್ಕಾರವೇ ಕೊಲೆ ಮಾಡಿದೆ: ಗುತ್ತಿಗೆದಾರರ ಸಂಘ ಆಕ್ರೋಶ, ಮುಷ್ಕರಕ್ಕೆ ನಿರ್ಧಾರ

ಇದನ್ನೂ ಓದಿ: ಸಂತೋಷ್ ಮನೆಯಲ್ಲಿ ಆಕ್ರಂದನ: ಮಗ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ ಎಂದ ತಾಯಿ, ಇದು ಕೊಲೆ ಎಂದ ಪತ್ನಿ

Follow us on

Related Stories

Most Read Stories

Click on your DTH Provider to Add TV9 Kannada