ಬೆಂಗಳೂರಿನಲ್ಲಿ ಉಷ್ಣಾಘಾತ ಸಂಬಂಧಿತ ಸಾವು ಹೆಚ್ಚಳ ಸಾಧ್ಯತೆ: ಆಘಾತಕಾರಿ ವರದಿ ಬಹಿರಂಗ

ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಉಷ್ಣಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಇತ್ತೀಚಿನ ಅಧ್ಯಯನ ವರದಿ ಎಚ್ಚರಿಸಿದೆ. ಉಷ್ಣ ಅಲೆಗಳನ್ನು ತಡೆಯಲು ದೀರ್ಘಾವಧಿಯ ಪರಿಹಾರ ಕ್ರಮಗಳ ಅಗತ್ಯವಿದೆ. ಬೆಂಗಳೂರಿನಲ್ಲಿ ಈಗಾಗಲೇ ತಾಪಮಾನ ಏರಿಕೆಯಾಗಿದ್ದು, ಮುಂಬರುವ ವರ್ಷಗಳಲ್ಲಿ ಇದು ಮುಂದುವರೆಯುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರಿನಲ್ಲಿ ಉಷ್ಣಾಘಾತ ಸಂಬಂಧಿತ ಸಾವು ಹೆಚ್ಚಳ ಸಾಧ್ಯತೆ: ಆಘಾತಕಾರಿ ವರದಿ ಬಹಿರಂಗ
ಸಾಂದರ್ಭಿಕ ಚಿತ್ರ

Updated on: Mar 19, 2025 | 11:39 AM

ಬೆಂಗಳೂರು, ಮಾರ್ಚ್ 19: ಈ ವರ್ಷ ಇನ್ನೇನು ಬೇಸಿಗೆ ಆರಂಭವಾಗುವುದಕ್ಕೂ ಮುನ್ನವೇ ಕರ್ನಾಟಕದ (Karnataka) ವಿವಿಧಡೆ ತಾಪಮಾನದಲ್ಲಿ (Temperature) ತೀವ್ರ ಏರಿಕೆಯಾಗಿದೆ. ಹಲವೆಡೆ ಉಷ್ಣ ಅಲೆ (Heat Wave) ಆರಂಭವಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಭಾರತದ ಪ್ರಮುಖ ನಗರಗಳಿಗೆ ಸಂಬಂಧಿಸಿ ಆಘಾತಕಾರಿ ವರದಿಯೊಂದು ಬಹಿರಂಗವಾಗಿದೆ. ಉಷ್ಣಾಘಾತಕ್ಕೆ ಸಂಬಂಧಿಸಿದ ಸಾವುಗಳ ಸಂಖ್ಯೆ ಬೆಂಗಳೂರು ಸೇರಿದಂತೆ ಭಾರತದ ನಗರಗಳಲ್ಲಿ ಹೆಚ್ಚಾಗಬಹುದು ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ. ಉಷ್ಣ ಅಲೆಗಳನ್ನು ತಡೆಯುವ ನಿಟ್ಟಿನಲ್ಲಿ ದೀರ್ಘಾವಧಿಯ ಪರಿಹಾರ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ವರದಿ ತಿಳಿಸಿದೆ.

ಮುಂಬರುವ ವರ್ಷಗಳಲ್ಲಿ ಭಾರತದ ನಗರಗಳಲ್ಲಿ ಉಷ್ಣ ಅಲೆ ಮುಂದುವರೆಯಲಿದೆ. ಇದಕ್ಕೆ ತಕ್ಷಣವೇ ದೀರ್ಘಾವಧಿಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಇಲ್ಲವಾದಲ್ಲಿ ತಾಪಮಾನ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂದು ಕಿಂಗ್ಸ್ ಕಾಲೇಜ್ ಲಂಡನ್, ಹಾರ್ವರ್ಡ್ ವಿಶ್ವವಿದ್ಯಾಲಯ, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಮತ್ತು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನ ವರದಿ ತಿಳಿಸಿದೆ.

ಹವಾಮಾನ ಮಾದರಿಗಳ ಆಧಾರದಲ್ಲಿ ಮಾಡಲಾದ ಅಧ್ಯಯನ ವರದಿಯಲ್ಲಿ, 2011ರ ಜನಗಣತಿ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಬೆಂಗಳೂರು, ದೆಹಲಿ, ಫರೀದಾಬಾದ್, ಗ್ವಾಲಿಯರ್, ಕೋಟ, ಲುಧಿಯಾನ, ಮೀರತ್, ಸೂರತ್ ನಗರಗಳನ್ನು ಹೆಸರಿಸಲಾಗಿದೆ.

ಇದನ್ನೂ ಓದಿ
ಕಾಳಿಂಗ ಸರ್ಪದೊಂದಿಗೆ ಭೀಕರ ಕಾಳಗ: ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ
ಚಿನ್ನ ಬೆನ್ನಲ್ಲೇ ಡಿಆರ್​ಐ ಅಧಿಕಾರಿಗಳ ಮತ್ತೊಂದು ಭರ್ಜರಿ ಕಾರ್ಯಾಚರಣೆ
‘ನನ್ನ ಕೊಲೆಗೆ ಡಿಕೆಶಿ ಸಹೋದರರು​ ಸೇರಿ 4 ಜನರಿಂದ ಸ್ಕೆಚ್’: ಮುನಿರತ್ನ ಆರೋಪ
ಮಳವಳ್ಳಿ ಫುಡ್ ಪಾಯ್ಸನ್: ಹೋಟೆಲ್​ನಲ್ಲೇ ಆಹಾರಕ್ಕೆ ವಿಷ ಬೆರೆಸಿರುವ ಶಂಕೆ

12.4 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಮುಂಬೈ ಉಷ್ಣ ಅಲೆಗಳ ಹೆಚ್ಚು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತಾಪಮಾನ ಮತ್ತು ಹೆಚ್ಚಿನ ತೇವಾಂಶದ ಕಾರಣ ನಗರದಲ್ಲಿ ಬಿಸಿಲಿನ ಆಘಾತ ಹೆಚ್ಚಾಗಲಿದೆ ಎಂದು ಅಧ್ಯಯನ ವರದಿ ಹೇಳಿದೆ. ಸಂಭಾವ್ಯ ದುರಂತಗಳನ್ನು ತಡೆಯುವುದಕ್ಕಾಗಿ ಈಗಲೇ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಅಧ್ಯಯನ ವರದಿ ಸಲಹೆ ನೀಡಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದ 12 ಜಿಲ್ಲೆಗಳಲ್ಲಿ ಮಾರ್ಚ್​ 23ರಿಂದ ಮಳೆ

ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 33.9 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21.4 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಬಿಸಿಲಿನ ವಾತಾವರಣ ಇರಲಿದೆ. ಗುರುವಾರ ತಾಪಮಾನ ಸ್ವಲ್ಪ ಕಡಿಮೆಯಾಗಲಿದ್ದು, ಗರಿಷ್ಠ 33.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸರಾಸರಿ ಆರ್ದ್ರತೆಯ ಮಟ್ಟ ಶೇ 46, ಸಮತೋಲಿತ ವಾತಾವರಣ ಇರಲಿದೆ. ಆದಾಗ್ಯೂ ವಾರಾಂತ್ಯದ ದಿನಗಳಲ್ಲಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ