Bengaluru Rain: ರಾಜಧಾನಿ ಬೆಂಗಳೂರಿನಲ್ಲಿ ಬಂದೇ ಬಿಡ್ತು ಮುಂಗಾರಿನ ಮೊದಲ ಮಳೆ!

| Updated By: ಸಾಧು ಶ್ರೀನಾಥ್​

Updated on: Jun 03, 2021 | 4:08 PM

Bangalore Rain Updates: ನಗರದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು ಹಿತವಾದ, ಆಹ್ಲಾದಕರ ವಾತಾವರಣ ಮೂಡುತ್ತಿದೆ. ಮೂರು ದಿನದಿಂದ ಬಿಸಿಲಿಗೆ ಬಸವಳಿದಿದ್ದವರು ಆಹಾ ಮುಂಗಾರು ಮಳೆಯೇ... ಎಂದು ಪಲ್ಲವಿ ಹಾಡುತ್ತಿದ್ದಾರೆ. ಇನ್ನೇನು ಸಂಜೆಯ ವೇಳೆಗೆ ಇಡೀ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಲಕ್ಷಣಗಳು ಜೋರಾಗಿವೆ.

Bengaluru Rain: ರಾಜಧಾನಿ ಬೆಂಗಳೂರಿನಲ್ಲಿ ಬಂದೇ ಬಿಡ್ತು ಮುಂಗಾರಿನ ಮೊದಲ ಮಳೆ!
ಮಳೆ
Follow us on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನ ನಾಲ್ಕೈದು ದಿನಗಳಿಂದ ಬಿರುಬೇಸಿಗೆಯ ಅಂತಿಮ ಕ್ಷಣಗಳನ್ನು ಅಬ್ಬಾ ಶೆಖೆ, ವಿಪರೀತ ಬಿಸಿಲು ಅಂತಾ ಕಳೆಯುತ್ತಿದ್ದರು. ಸದ್ಯ ಈ ಬಿಸಿಲು ಕಳೆದು ಮುಂಗಾರು ಸಿಂಚನ ಆದರೆ ಸಾಕಪ್ಪಾ ಅಂತಾ ದಿನ ಕಳೆಯುತ್ತಿದ್ದರು. ಅದರಲ್ಲೂ ಕೊರೊನಾ ಪೀಡಿತ ರಾಜಧಾನಿಯಲ್ಲಿ ಸಂಜೆ ವೇಳೆ ವಾಕ್​ ಮಾಡುವವರಿಗೂ ಬಿಸಿಲಿನ ಝಳ ಭಾರೀ ಇತ್ತು. ಇದೀಗ ಕಾಲ ಬದಲಾಗಿದೆ. ಬೇಸಿಗೆ ಹೋಗಿ ಇಂದಿನಿಂದ ಮುಂಗಾರು ಮಳೆಗಾಲ ಕಾಲಿಟ್ಟಿದೆ. ಜೂನ್ 3 ಗುರುವಾರ ಮಧ್ಯಾಹ್ನದ ವೇಳೆಗೆ ರಾಜಧಾನಿಗೆ ಬಂದೇ ಬಿಡ್ತು ಮುಂಗಾರಿನ ಮೊದಲ ಮಳೆ!

ಮಧ್ಯಾಹ್ನ  2 ಗಂಟೆ ವೇಳೆಗೆ ದಟ್ಟ ಮೋಡಗಳು ಬೆಂಗಳೂರು ನಗರವನ್ನು ಆವರಿಸಿವೆ. ಅದರ ಹಿನ್ನೆಲೆಯಲ್ಲಿ ಗುಡುಗು ವಾದ್ಯಗೋಷ್ಠಿ ಆರ್ಭಟ ಜೋರಾಗಿದೆ.  ಮಳೆಯೂ ಶುರುವಾಗಿದೆ. ನಗರದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು ಹಿತವಾದ, ಆಹ್ಲಾದಕರ ವಾತಾವರಣ ಮೂಡುತ್ತಿದೆ. ಮೂರು ದಿನದಿಂದ ಬಿಸಿಲಿಗೆ ಬಸವಳಿದಿದ್ದವರು ಆಹಾ ಮುಂಗಾರು ಮಳೆಯೇ… ಎಂದು ಪಲ್ಲವಿ ಹಾಡುತ್ತಿದ್ದಾರೆ. ಇನ್ನೇನು ಸಂಜೆಯ ವೇಳೆಗೆ ಇಡೀ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಲಕ್ಷಣಗಳು ಜೋರಾಗಿವೆ.

ಇದೇ ವೇಳೆ, ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆ ಸಾಧ್ಯತೆಯಿದೆ. ಮುಂದಿನ 48 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಅತ್ಯಧಿಕ ಪ್ರಮಾಣದ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್​​ಗೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.

ನೈಋತ್ಯ ಮುಂಗಾರು ಎರಡು ದಿನ ವಿಳಂಬವಾಗಿ ಕೇರಳಕ್ಕೆ ಇಂದು ಪ್ರವೇಶಿಸಿದೆ. ಅದರ ಗುಣಲಕ್ಷಣವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಅನನೇಕ ಭಾಗಗಳಲ್ಲಿ ಮಳೆ ಆರಂಭವಾಗಿದೆ. ಆದರೆ ಜೂನ್ 6 ರಿಂದ ರಿಂದ ಕರ್ನಾಟಕದಲ್ಲಿ ಮಳೆ ಕಡಿಮೆಯಾಗೋ ಸಾಧ್ಯತೆ.

(Heavy Rain with thunderstorm and hailstones lashes many parts of Bangalore)

Monsoon 2021: ಇಂದಿನಿಂದ ಕೇರಳದಲ್ಲಿ ಮುಂಗಾರು; ಹವಾಮಾನ ಇಲಾಖೆ ಮುಂಗಾರು ಲೆಕ್ಕಾಚಾರದ ಹನಿ ಹನಿ ಮಾಹಿತಿ ಇಲ್ಲಿದೆ

ರಾಜಧಾನಿಯಲ್ಲಿ ಮುಂಗಾರು ವಿಕೋಪ ತಡೆಯಲು ಪೂರ್ವಸಿದ್ಧತೆ ಪರಿಶೀಲನೆ; ಸೂಕ್ಷ್ಮ ಸ್ಥಳಗಳಲ್ಲಿ ಶಾಶ್ವತ ಪರಿಹಾರಕ್ಕೆ ಸಿಎಂ ಸೂಚನೆ

Published On - 3:48 pm, Thu, 3 June 21