
ಬೆಂಗಳೂರು, ಅ.22: ರಾಜಧಾನಿ ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಹೆಬ್ಬಾಳ ಜಂಕ್ಷನ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಕಿರು ಸುರಂಗ ಮಾರ್ಗ ಯೋಜನೆಗೆ ಪರಿಸರ ಪ್ರೇಮಿಗಳು ಹಾಗೂ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯೋಜನೆಗಾಗಿ ಬರೋಬ್ಬರಿ 1,128 ಮರಗಳನ್ನು ಕಡಿಯುವ ಪ್ರಸ್ತಾವನೆಗೆ ಸಾರ್ವಜನಿಕರಿಂದ ಸುಮಾರು 1,600 ಆಕ್ಷೇಪಣೆಗಳು ಬಂದಿದ್ದು, ಮತ್ತೊಂದೆಡೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಮರ ತೆರವಿಗೆ ತಡೆ ನೀಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಂಡಿರುವ ಈ 2.3 ಕಿ.ಮೀ ಉದ್ದದ, ಮೂರು ಲೇನ್ಗಳ ದ್ವಿಮುಖ ಸುರಂಗ ಮಾರ್ಗವು ಹೆಬ್ಬಾಳ ಜಂಕ್ಷನ್ನಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೂಲಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಬ್ಬಂದಿ ವಸತಿ ಗೃಹದವರೆಗೆ ಸಂಪರ್ಕ ಕಲ್ಪಿಸಲಿದೆ. ಯೋಜನೆಯ ಅನುಷ್ಠಾನಕ್ಕಾಗಿ ಹೆಬ್ಬಾಳ ಕೆರೆ ಪ್ರದೇಶದಲ್ಲಿ ಸುಮಾರು 3.5 ಎಕರೆ ಜಾಗವನ್ನು ನೀಡಲು ಬೆಂಗಳೂರು ಉತ್ತರ ನಗರ ಪಾಲಿಕೆ ಒಪ್ಪಿಗೆ ನೀಡಿದೆ.
ಮರಗಳ ತೆರವಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿ ನೋಟಿಸ್ ಹೊರಡಿಸಿತ್ತು. ಇದಕ್ಕೆ ಸ್ಪಂದಿಸಿದ ನಾಗರಿಕರು ಬರೋಬ್ಬರಿ 1,600ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ನಾಗರಿಕರು ಸಲ್ಲಿಸಿರುವ ಆಕ್ಷೇಪಣೆಗಳ ಪರಿಶೀಲನೆ ನಡೆಸಿದ ನಂತರ, ‘ಮರ ತಜ್ಞರ ಸಮಿತಿ’ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಲಿದೆ. ಸಮಿತಿಯ ಅಂತಿಮ ವರದಿಯ ಆಧಾರದ ಮೇಲೆಯೇ ಎಷ್ಟು ಮರಗಳನ್ನು ಉಳಿಸಬಹುದು, ಎಷ್ಟು ಮರಗಳನ್ನು ಮರುನಾಟಿ ಮಾಡಬಹುದು ಹಾಗೂ ಎಷ್ಟು ಮರಗಳನ್ನು ತೆರವುಗೊಳಿಸಬಹುದು ಎಂಬುದು ನಿರ್ಧಾರವಾಗಲಿದೆ.
ಇದನ್ನೂ ಓದಿ: ಮೈಸೂರು ದಸರಾದಲ್ಲಿ ಹೈಡ್ರಾಮಾ: ನಂದಿ ಕಂಬ ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್ಪಿ ರಿಷ್ಯಂತ್
ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ದಕ್ಷಿಣ ಪೀಠವು ಈ ಅರ್ಜಿ ಅಂತಿಮ ವಿಲೇವಾರಿಯಾಗುವವರೆಗೆ ಹೆಬ್ಬಾಳ ಸುರಂಗ ಮಾರ್ಗದ ಯೋಜನಾ ವ್ಯಾಪ್ತಿಯಲ್ಲಿ ಯಾವುದೇ ಮರಗಳನ್ನು ಕಡಿಯಬಾರದು ಎಂದು ಕಟ್ಟುನಿಟ್ಟಿನ ತಡೆ ನೀಡಿದೆ. 2.2 ರಿಂದ 2.3 ಕಿ.ಮೀ ಉದ್ದದ ಈ ಸುರಂಗ ಮಾರ್ಗದಿಂದಾಗಿ ಸ್ಥಳೀಯ ಜೀವವೈವಿಧ್ಯತೆ, ಅಂತರ್ಜಲ ಮಟ್ಟ, ನೈಸರ್ಗಿಕ ಚರಂಡಿ ವ್ಯವಸ್ಥೆ ಹಾಗೂ ಹೆಬ್ಬಾಳ ಮತ್ತು ನಾಗವಾರ ಕೆರೆಗಳನ್ನು ಜೋಡಿಸುವ ಜಲಚರ ವ್ಯವಸ್ಥೆಗೆ ತೀವ್ರ ಹಾನಿಯಾಗಲಿದೆ ಎಂದು ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ನಲ್ಲೂ ಕಾನೂನು ಹೋರಾಟ ಮುಂದುವರಿದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ