Praveen Nettaru: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ರಾಜೀನಾಮೆ: ನಳೀನ ಕುಮಾರ್​ ಕಟೀಲ್​​ಗೆ ಹೈಕಮಾಂಡ್ ಪ್ರಶ್ನೆ

| Updated By: ವಿವೇಕ ಬಿರಾದಾರ

Updated on: Aug 06, 2022 | 5:25 PM

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ರಾಜೀನಾಮೆ ಅಭಿಯಾನದ ಬಗ್ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ ಕುಮಾರ್​ ಕಟೀಲ್​​ ಅವರಿಗೆ ಹೈಕಮಾಂಡ್​ ಪ್ರಶ್ನೆ ಮಾಡಿದೆ.

Praveen Nettaru: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ರಾಜೀನಾಮೆ: ನಳೀನ ಕುಮಾರ್​ ಕಟೀಲ್​​ಗೆ ಹೈಕಮಾಂಡ್ ಪ್ರಶ್ನೆ
ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್
Follow us on

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಯುವ ಮೋರ್ಚಾ ಕಾರ್ಯಕರ್ತರ ರಾಜೀನಾಮೆ ಅಭಿಯಾನದ ಬಗ್ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ ಕುಮಾರ್​ ಕಟೀಲ್ (Nalin Kumar Kateel)​​ ಅವರಿಗೆ ಹೈಕಮಾಂಡ್​ ಪ್ರಶ್ನೆ ಮಾಡಿದೆ. ಯುವ ಮೋರ್ಚಾ ಕಾರ್ಯಕರ್ತರು ಏಕೆ ರಾಜೀನಾಮೆ ನೀಡುತ್ತಿದ್ದಾರೆ? ರಾಜ್ಯ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಸಮಸ್ಯೆ ಏನು? ಕೂಡಲೇ ಕಾರ್ಯಕರ್ತರ ಸಮಸ್ಯೆ ಬಗ್ಗೆ ಮಾತನಾಡಿ ಎಂದು ಪ್ರವೀಣ್ ನೆಟ್ಟಾರು ಪ್ರಕರಣ​ ಎನ್​ಐಎಗೆ ವಹಿಸಿದ್ದಕ್ಕೆ ಧನ್ಯವಾದ ಹೇಳಲು 3 ದಿನಗಳ ಹಿಂದೆ ನಳೀನ ಕುಮಾರ್​ ಕಟೀಲ್ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು (Amit Shah) ಭೇಟಿ ಮಾಡಿದ ವೇಳೆ ಕೇಳಿದ್ದಾರೆ.

ನಮ್ಮದು ಕಾರ್ಯಕರ್ತರ ಪಕ್ಷ, ಕಾರ್ಯಕರ್ತರನ್ನು ನಿರ್ಲಕ್ಷಿಸುವಂತಿಲ್ಲ. ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷಿಸುವುದನ್ನು ಮೋದಿ ಸಹಿಸುವುದಿಲ್ಲ. ಹೀಗಾಗಿ ಯುವ ಮೋರ್ಚಾ ಕಾರ್ಯಕರ್ತರ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ.

ಅಮಿತ್ ಶಾ ಶಾ ಸೂಚನೆ ನಂತರ ನಿನ್ನೆ (ಆಗಸ್ಟ್​ 5) ರಂದು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್​ ಯುವ ಮೋರ್ಚಾ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ.

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದೀಗ ಕಾರ್ಯಕರ್ತರ ಹಾಗೂ ಮುಖಂಡರ ರಾಜೀನಾಮೆ ಬಿಸಿ ತಟ್ಟುತ್ತಿದೆ. ಹತ್ಯೆ ನಂತರ ರಾಜ್ಯಾದ್ಯಂತ ಅನೇಕ ಯುವ ಮುಖಂಡರು ತಮ್ಮ ಪಕ್ಷದ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.

ವಿಜಯಪುರ ಜಿಲ್ಲೆಯ ಜಿಲ್ಲಾ ಸಾಮಾಜಿಕ ಜಾಲ ತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸಂದೀಪ ಪಾಟೀಲ್ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣ ಸಮಿತಿಯ 9 ಮಂಡಲಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.

ಚಿತ್ರದುರ್ಗ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ ಆಡಳಿತರೂಢ ಬಿಜೆಪಿ ಪಕ್ಷದ ವಿವಿಧ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಜಿಲ್ಲಾ ಉಪಾದ್ಯಕ್ಷ ಆರ್. ಪಾಲಯ್ಯ, ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಚಳ್ಳಕೆರೆ ತಾಲೂಕು ಯುವ ಘಟಕದ ಅದ್ಯಕ್ಷ ಎಸ್.ಶಶಿಧರ್ ಹಾಗೂ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಕಠಿಣ ಕ್ರಮದ ಭರವಸೆಯ ಬದಲು‌ ಕಠಿಣ ಕಾನೂನು ಹಾಗೂ ಮುನ್ನೆಚ್ಚರಿಕೆಯ ಕ್ರಮವನ್ನು ಜಾರಿಗೊಳಿಸುವಂತೆ ರಾಜೀನಾಮೆಯಲ್ಲಿ ಆಗ್ರಹಿಸಿದ್ದರು.

ಕೊಪ್ಪಳ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಜಿಲ್ಲೆಯಲ್ಲಿ ರಾಜೀನಾಮೆ ಮುಂದುವರಿದಿದೆ. ಯುವ ಮೋರ್ಚಾದ ಗ್ರಾಮೀಣ ಮಂಡಲದ ಕೋಷ್ಟಾಧ್ಯಕ್ಷ ಅಣ್ಣಯ್ಯ ಹಿಟ್ನಾಳ್ ಅವರು ರಾಜೀನಾಮೆ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು ತಾಯಿಗೆ ಸಮಾನ, ಒಲೈಕೆ ರಾಜಕಾರಣ ಮಾಡಬೇಡಿ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ ಹಿಟ್ನಾಳ್, ನನ್ನಂತ ಇನ್ನು ಅನೇಕ ಪಕ್ಷದ ಕಾರ್ಯಕರ್ತರು ರಾಜೀನಾಮೆ ನೀಡಲಿದ್ದಾರೆ. ಆತ್ಮಸಾಕ್ಷಿಗೆ ವಿರುದ್ದವಾಗಿ ನಾನು ಕೆಲಸ‌ ಮಾಡುವುದಿಲ್ಲ ಎಂದು ಹೇಳಿದ್ದರು.

ಬಾಗಲಕೋಟೆ ಪ್ರವೀಣ್ ಹತ್ಯೆಯಿಂದ ಕೆರಳಿ ಕೆಂಡಾಮಂಡಲರಾಗಿರುವ ಕಾರ್ಯಕರ್ತರು, ಮುಖಂಡರು ಪಕ್ಷಕ್ಕೆ ರಾಜೀನಾಮೆ ಬಿಸಿ ತಟ್ಟಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲೂ ಸಾಮೂಹಿಕ ರಾಜೀನಾಮೆ ನೀಡಲಾಗಿದ್ದು, ಬಿಜೆಪಿಯ ವಿವಿಧ ಮೋರ್ಚಾ ಪದಾಧಿಕಾರಿಗಳಿಂದ ರಾಜೀನಾಮೆ ಸಲ್ಲಿಕೆಯಾಗಿದೆ. ಜಮಖಂಡಿ ಬಿಜೆಪಿಯ ನಗರ ಮಂಡಲ, ಒಬಿಸಿ ಮೋರ್ಚಾ, ಮಹಿಳಾ ಮತ್ತು ಎಸ್​ಸಿ ಮೋರ್ಚಾದ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು.

ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಶಿರಗನ್ನವರ್, ಜಮಖಂಡಿ ನಗರ ಮಂಡಲ ಕಾರ್ಯದರ್ಶಿ ಶಂಕರ ಕಾಳೆ, ಒಬಿಸಿ ಮೋರ್ಚಾ ಅಧ್ಯಕ್ಷ ಶಾಮ ಗಣಾಚಾರಿ, ಒಬಿಸಿ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ದೇಬಡಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಗೊರನಾಳ, ಎಸ್​ಸಿ ಮೋರ್ಚಾ ಉಪಾಧ್ಯಕ್ಷ ಸುನಿಲ್ ಬೋವಿ, ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು.

ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Sat, 6 August 22