ಲಘು ಯುದ್ಧ ವಿಮಾನದ ಮಾಹಿತಿ ಕದ್ದವನಿಗಿಲ್ಲ ರಿಲೀಫ್ – ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಲಘು ಯುದ್ಧ ವಿಮಾನದ ಮಾಹಿತಿ ಕದ್ದು ಡಾರ್ಕ್ ವೆಬ್​ನಲ್ಲಿ ಮಾರಲು ಯತ್ನಿಸಿದ ಟೆಕ್ ವಿದ್ಯಾರ್ಥಿ ಮೇಲಿನ ಕೇಸ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಖಾಸಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶಿವರಾಮಕೃಷ್ಣ ಎಂಬ ಟೆಕ್ ವಿದ್ಯಾರ್ಥಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಂಟರ್ನಿಯಾಗಿ ಸೇರಿದ್ದನು.

ಲಘು ಯುದ್ಧ ವಿಮಾನದ ಮಾಹಿತಿ ಕದ್ದವನಿಗಿಲ್ಲ ರಿಲೀಫ್ - ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಹೈಕೋರ್ಟ್​​
Follow us
| Updated By: ವಿವೇಕ ಬಿರಾದಾರ

Updated on: Aug 16, 2023 | 1:59 PM

ಬೆಂಗಳೂರು: ಲಘು ಯುದ್ಧ ವಿಮಾನದ (Light fighter aircraft) ಮಾಹಿತಿ ಕದ್ದು ಡಾರ್ಕ್ ವೆಬ್​ನಲ್ಲಿ ಮಾರಲು ಯತ್ನಿಸಿದ ಟೆಕ್ ವಿದ್ಯಾರ್ಥಿ (Tec Student) ಮೇಲಿನ ಕೇಸ್ ರದ್ದುಪಡಿಸಲು ಹೈಕೋರ್ಟ್ (High Court) ನಿರಾಕರಿಸಿದೆ. ಖಾಸಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶಿವರಾಮಕೃಷ್ಣ ಎಂಬ ಟೆಕ್ ವಿದ್ಯಾರ್ಥಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಂಟರ್ನಿಯಾಗಿ ಸೇರಿದ್ದನು. ರಕ್ಷಣಾ ಇಲಾಖೆಯ ವಿಮಾನ ಅಭಿವೃದ್ಧಿ ಸಂಸ್ಥೆಯ ಅಡಿ ಲಘು ಯುದ್ಧ ವಿಮಾನದ ಕೋಡ್ ಅಭಿವೃದ್ಧಿಪಡಿಸುವ ವಿಭಾಗದಲ್ಲಿ ಕೆಲಸ ಮಾಡಿದ್ದನು. ಈ ವೇಳೆ ಯುದ್ಧ ವಿಮಾನದ ಮೂಲ ಕೋಡ್ ತಿಳಿದುಕೊಂಡಿದ್ದ ಈತ ಅದನ್ನು ಡಾರ್ಕ್ ವೆಬ್ ಮೂಲಕ ಮಾರಾಟ ಮಾಡಲು ಯತ್ನಿಸಿದ್ದನು.

ಆರಂಭದಲ್ಲಿ ಈ ಮಾಹಿತಿ ಡಾರ್ಕ್ ವೆಬ್​ನಲ್ಲಿ ಹೇಗೆ ಸೋರಿಕೆಯಾಯಿತೆಂದು ಪತ್ತೆ ಹಚ್ಚಲು ಕಷ್ಟವಾಗಿತ್ತು. 18 ತಿಂಗಳ ನಂತರ ಇದರ ಹಿಂದೆ ಶಿವರಾಮಕೃಷ್ಣ ಎಂಬ ವಿದ್ಯಾರ್ಥಿಯ ಕೈವಾಡ ಇದ್ದದ್ದು ಪತ್ತೆಯಾಗಿತ್ತು. ಈ ವೇಳೆಗೆ ಆತ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿ ಸಂಸ್ಥೆಯಲ್ಲಿ ಹಿರಿಯ ಟೆಕ್ನಿಕಲ್ ಅಧಿಕಾರಿ ಗ್ರೇಡ್ III ಹುದ್ದೆಗೆ ಅರ್ಜಿ ಸಲ್ಲಿಸಿದ್ದನು. ಅಷ್ಟರಲ್ಲಿ ತನಿಖೆ ವೇಳೆ ಈತನ ಪಾತ್ರ ಪತ್ತೆಯಾಗಿ ಮಾರ್ಚ್ 19, 2022 ರಂದು ಬಂಧನಕ್ಕೊಳಗಾಗಿದ್ದನು.

ತನ್ನ ವಿರುದ್ಧದ ತನಿಖೆ ರದ್ದುಪಡಿಸಬೇಕೆಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದನು. ಈತನ ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರದ ಡೆಪ್ಯುಟಿ ಸಾಲಿಸಿಟರ್ ಜನರಲ್ ಹೆಚ್. ಶಾಂತಿಭೂಷಣ್, ದೇಶದ ಭದ್ರತೆಯೊಂದಿಗೆ ಈತ ರಾಜಿ ಮಾಡಿಕೊಂಡಿದ್ದಾನೆ, ಬೇರೆಯವರ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ. ಹೀಗಾಗಿ ಈತನ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಈತನ ಅರ್ಜಿ ವಜಾಗೊಳಿಸಿದೆ.

ಇದನ್ನೂ ಓದಿ: ಹವಾನಾ ಸಿಂಡ್ರೋಮ್​ ಬಗ್ಗೆ ಪರಿಶೀಲನೆಗೆ ಕರ್ನಾಟಕ ಹೈಕೋರ್ಟ್​ ನಿರ್ದೇಶನಕ್ಕೆ ಕೇಂದ್ರ ಸಮ್ಮತಿ; ಏನಿದು ಹೊಸ ರೋಗ?

ಹೆಚ್‌ಎಎಲ್‌ ಸೇರಿದಂತೆ ಹಲವು ಪ್ರತಿಷ್ಟಿತ ರಕ್ಷಣಾ ಸಂಸ್ಥೆಗಳಲ್ಲಿ ಇಂಟರ್ನಿಯಾಗಿ ಈತ ತರಬೇತಿ ಪಡೆದಿದ್ದಾನೆ. ಲಘು ಯುದ್ಧ ವಿಮಾನದ ಮೂಲ ಕೋಡ್ ಮಾರಾಟಕ್ಕೆ ಯತ್ನಿಸಿದ ಗಂಭೀರ ಆರೋಪ ಈತನ ಮೇಲಿದೆ. ಈತನಿಂದ 2 ಲ್ಯಾಪ್‌ಟಾಪ್, 2 ಹಾರ್ಡ್ ಡಿಸ್ಕ್, 1 ಪೆನ್ ಡ್ರೈವ್, 1 ಮೊಬೈಲ್ ಅನ್ನು ವಶಕ್ಕೆ ಪಡೆದು ಫೊರೆನ್ಸಿಕ್​ನಲ್ಲಿ ಪರಿಶೀಲನೆಗೊಳಪಡಿಸಲಾಗಿದೆ.

ಇಂತಹ ಗಂಭೀರ ಪ್ರಕರಣದ ತನಿಖೆಯನ್ನು ರಾತ್ರೋರಾತ್ರಿ ಮುಕ್ತಾಯಗೊಳಿಸಲು ಸಾಧ್ಯವಿಲ್ಲ. ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವ ರೀತಿಯಲ್ಲಿ ಅರ್ಜಿದಾರ ವರ್ತಿಸಿದ್ದಾನೆ. ಡಾರ್ಕ್ ವೆಬ್ ನಲ್ಲಿ ದೇಶದ ಭದ್ರತೆಯ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾನೆ. ಈತ ಅಮಾಯಕನೆಂದು ನಂಬಲು ಸಾಧ್ಯವಿಲ್ಲ. ಸ್ವಂತ ಲಾಭಕ್ಕಾಗಿ ಯುದ್ಧ ವಿಮಾನದ ಮಾಹಿತಿಯನ್ನು ಡಾರ್ಕ್ ವೆಬ್​ನಲ್ಲಿ ಸೋರಿಕೆ ಮಾಡಿದ್ದಾನೆ. ಇಂತಹ ಪ್ರಕರಣಗಳ ತನಿಖೆ ಯುದ್ದೋಪಾದಿಯಲ್ಲಿ ಸಾಗಬೇಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ 4 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ತನಿಖಾ ತಂಡಕ್ಕೆ ನಿರ್ದೇಶನ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ