
ಬೆಂಗಳೂರು, ಜನವರಿ 22: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ ಸಂಬಂಧ ಎಫ್‌ಐಆರ್ ರದ್ದು ಕೋರಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಬಗ್ಗೆ ಮಹತ್ವದ ಆದೇಶ ನೀಡಿದ್ದು, ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಮುಖಂಡನ ಪರವಾಗಿ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿದ್ದರು.
ಫೋನ್ ಮೂಲಕ ಆಡಿದ ಮಾತಿಗೆ ಮಾಧ್ಯಮದಲ್ಲೇ ರಾಜೀವ್ ಗೌಡ ಕ್ಷಮೆ ಕೇಳಿದ್ದಾರೆ. ಬಿಎನ್‌ಎಸ್ ಸೆಕ್ಷನ್ 132 ಈ ಕೇಸಿನಲ್ಲಿ ಅನ್ವಯಿಸುವುದಿಲ್ಲ. ಸಾರ್ವಜನಿಕವಾಗಿ ಕ್ಷಮೆ ಕೇಳಲು ರಾಜೀವ್ ಗೌಡ ಸಿದ್ಧರಿದ್ದಾರೆ. ತನಿಖೆಗೆ ಸಹಕರಿಸಲು ಸಿದ್ಧರಿರುವ ಕಾರಣ ರಕ್ಷಣೆಗೆ ಮನವಿ ಮಾಡಲಾಗಿದೆ ಎಂದು ವಕೀಲರು ವಾದಿಸಿದ್ದರು. ಆದ್ರೆ ಈ ವೇಳೆ ಗರಂ ಆಗಿದ್ದ ನ್ಯಾಯಾಲಯ, ಅರ್ಜಿದಾರನಿಗೆ ಮಹಿಳೆಯರೆಂದರೆ ಗೌರವ ಇಲ್ಲವೇ ಎಂದು ಪ್ರಶ್ನೆ ಮಾಡಿತ್ತು. ಅಲ್ಲದೆ, ಒಮ್ಮೆ ಮಾತನಾಡಿದರೆ ವಾಪಸ್ ಪಡೆಯಲು ಆಗುವುದಿಲ್ಲ. ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು. ನೀವು ಕ್ಷಮೆ ಕೇಳಿದರೂ ಒಡೆದಿರುವುದು ಒಂದಾಗುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಅರ್ಜಿ ವಿಚಾರಣೆ ಸಂಬಂಧ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.
ಇದನ್ನೂ ಓದಿ: ರಾಜೀವ್ ಗೌಡ ಪರ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪತ್ರ; ಆ್ಯಸಿಡ್ ಎರಚುವುದಾಗಿ ಎಚ್ಚರಿಕೆ
ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ರಾಜೀವ್ ಗೌಡ ಸಲ್ಲಿಸಿರುವ ಅರ್ಜಿಗೆ ಸರ್ಕಾರಿ ಅಭಿಯೋಜಕರು ತಕರಾರು ಸಲ್ಲಿಕೆ ಮಾಡಿದ್ದಾರೆ. ಕಳೆದ ಶನಿವಾರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ರಾಜೀವ್ ಗೌಡ ಪರ ವಕೀಲ ಶಿವಶಂಕರರೆಡ್ಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ಕೋರ್ಟ್, ವಿಚಾರಣೆಯನ್ನ ಇಂದಿಗೆ ಮುಂದೂಡಿತ್ತು. ಇಂದು ತಕರಾರು ಸಲ್ಲಿಕೆ ಹಿನ್ನೆಲೆ ರಾಜೀವ್ ಗೌಡ ನಿರೀಕ್ಷಣಾ ಜಾಮೀನು ಅರ್ಜಿ ಭವಿಷ್ಯ ಸಂಜೆ ನಿರ್ಧಾರ ಆಗಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.