ಬೆಂಗಳೂರು, ಅ.09: ಸರ್ಕಾರಿ ಶಾಲೆಗಳಲ್ಲಿ (Government Schools) ಮೂಲಭೂತ ಸೌಕರ್ಯ ಕೊರತೆ ವಿಚಾರಕ್ಕೆ ಸಂಬಂಧಿಸಿ ಮೂಲಸೌಕರ್ಯ ಕಲ್ಪಿಸದ ಸರ್ಕಾರಕ್ಕೆ ಹೈಕೋರ್ಟ್ (High Court) ತರಾಟೆಗೆ ತೆಗೆದುಕೊಂಡಿದೆ. ಸರ್ಕಾರಕ್ಕೆ ಶಾಲೆಗಳ್ಲಲಿ ಮೂಲಭೂತ ಸೌಕರ್ಯ ಕೊರತೆ ಇರುವುದು ತಿಳಿದಿಲ್ಲವೇ. ಮೂಲಭೂತ ಸೌಕರ್ಯ ಒದಗಿಸಲೂ 5 ವರ್ಷಗಳ ಯೋಜನೆ ಬೇಕೇ? 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ. 32 ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಡ ಮಕ್ಕಳಿಗೆ ಶಿಕ್ಷಣ ಪಡೆಯುವ ಅಧಿಕಾರವಿಲ್ಲವೇ? ಶ್ರೀಮಂತರ ಮಕ್ಕಳು ಮಾತ್ರ ಶಿಕ್ಷಣ ಪಡೆಯಬೇಕೇ ಎಂದು ಹೈಕೋರ್ಟ್ ಸರ್ಕಾರಕ್ಕೆ (Karnataka Government) ತರಾಟಗೆ ತೆಗೆದುಕೊಂಡಿದೆ.
CJ ಪ್ರಸನ್ನ B.ವರಾಳೆ, ನ್ಯಾ.ಕೃಷ್ಣ S.ದೀಕ್ಷಿತ್ ಅವರಿದ್ದ ಪೀಠ ಸರ್ಕಾರಕ್ಕೆ ಹಿಗ್ಗಾಮುಗ್ಗ ಜಾಡಿಸಿದೆ. ಮೂಲಭೂತ ಸೌಕರ್ಯ ಕೊರತೆಯಿಂದ ಸರ್ಕಾರಿ ಶಾಲೆ ಮುಚ್ಚುತ್ತಿವೆ. ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಾಗಿದೆ. ಸರ್ಕಾರಿ ಶಾಲೆಗಳ ಬದಲು ಖಾಸಗಿ ಶಾಲೆ ಪ್ರೋತ್ಸಾಹಿಸುತ್ತಿದ್ದೀರಾ? ಹಣವಿಲ್ಲದ ಬಡ ಜನರು ಮಕ್ಕಳಿಗೆ ಶಿಕ್ಷಣ ನೀಡುವುದು ಹೇಗೆ? ಸಮಾನತೆ ಬರುವುದೇ ಶಿಕ್ಷಣದಿಂದ. ಅಂಬೇಡ್ಕರ್ ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಸಂವಿಧಾನದಡಿ ಪ್ರಾಥಮಿಕ ಶಿಕ್ಷಣ ಮೂಲಭೂತ ಹಕ್ಕು ಎಂದು ತರಾಟೆಗೆ ತೆಗೆದುಕೊಂಡಿದ್ದು ಮೂಲಸೌಕರ್ಯ ಒದಗಿಸಿದ ಬಗ್ಗೆ 8 ವಾರಗಳಲ್ಲಿ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈ ಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ: ಮಡಿಕೇರಿ: ಗಿರಿಜನ ಆಶ್ರಮ ಶಾಲೆಗೆ ಸರ್ಕಾರದಿಂದ ಪೂರೈಕೆಯಾದ ಆಹಾರ ಧಾನ್ಯಗಳಲ್ಲಿ ರಾಶಿ ರಾಶಿ ಹುಳು ಪತ್ತೆ
ರಾಜ್ಯದ ಅನೇಕ ಶಾಲೆಗಳು ಮೂಲಭೂತ ಸೌಕರ್ಯ ಕೊರತೆಯನ್ನು ಎದುರಿಸುತ್ತಿವೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಮಕ್ಕಳು ಪರದಾಡುವಂತ ಸ್ಥಿತಿ ಇರುವ ಬಗ್ಗೆ ವರದಿಯಾಗಿತ್ತು. ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿಲ್ಲದೆ ಪ್ರತಿನಿತ್ಯ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ಇದೆ. ಕಲಘಟಗಿ ಪಟ್ಟಣದಲ್ಲಿರುವ ಸರ್ಕಾರಿ ಮಾದರಿ ಶಾಲೆ, ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕುಡಿಯಲು ನೀರಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ