ಹಿಂದೂ ಮುಸ್ಲಿಂ ಸಾಮರಸ್ಯದ ಕರಗ ಉತ್ಸವಕ್ಕೆ ಎದುರಾಗಲಿದೆಯಾ ಕಂಟಕ? ದರ್ಗಾ ಪ್ರವೇಶಿಸುತ್ತಾಳ ದ್ರೌಪಧಿಯಮ್ಮ

| Updated By: ಆಯೇಷಾ ಬಾನು

Updated on: Apr 07, 2022 | 12:23 PM

ಕರಗ ಉತ್ಸವ ತಾಯಿಯ ಮೆರವಣಿಗೆ ವೇಳೆ ಪ್ರತಿ ವರ್ಷವೂ ತಾಯಿಯನ್ನು ದರ್ಗಾಗೆ ಕರೆದುಕೊಂಡು ಹೋಗಲಾಗುತ್ತೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳಿಂದಾಗಿ ಈ ಆಚರಣೆಗೆ ಸಮಸ್ಯೆ ಎದುರಾಗಲಿದೆಯಾ ಎಂಬ ಭೀತಿ ಎದುರಾಗಿದೆ.

ಹಿಂದೂ ಮುಸ್ಲಿಂ ಸಾಮರಸ್ಯದ ಕರಗ ಉತ್ಸವಕ್ಕೆ ಎದುರಾಗಲಿದೆಯಾ ಕಂಟಕ? ದರ್ಗಾ ಪ್ರವೇಶಿಸುತ್ತಾಳ ದ್ರೌಪಧಿಯಮ್ಮ
ಬೆಂಗಳೂರು ಕರಗ ಉತ್ಸವ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಾಜ್ಯದಲ್ಲಿ ಹಿಂದೂ-ಮುಸ್ಲಿಂರ(Hindu Muslims) ನಡುವೆ ಒಂದಲ್ಲಾ ಒಂದು ವಿವಾದಗಳು ಹುಟ್ಟಿಕೊಳ್ಳುತ್ತಿವೆ. ನಾವೆಲ್ಲಾ ಒಂದೆ ನಮ್ಮಲ್ಲಿ ಯಾವುದೇ ಭೇದವಿಲ್ಲವೆಂದು ಕೆಲವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಆರಾಮಾಗಿದ್ರೆ ಮತ್ತೊಂದು ಕಡೆ ಬಾಂಧವ್ಯದ ಮೇಲೆ ವಿಷ ಬೀಜ ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ. ಸದ್ಯ ಇದೆಲ್ಲದರ ನಡುವೆ ಈಗ ಐತಿಹಾಸಿಕ ಬೆಂಗಳೂರು ಕರಗಕ್ಕೆ(Bengaluru Karaga) ಕಂಟಕ ಎದುರಾಗಿದೆ. ಹಿಂದೂ ಮುಸ್ಲಿಂ ಸಾಮರಸ್ಯ ಸಂದೇಶ ಸಾರುವ ಕರಗ ಉತ್ಸವ ಮೆರವಣಿಗೆಗೆ ರಾಜ್ಯದ ಸಂಘರ್ಷ ಸಮಸ್ಯೆ ಉದ್ಭವಿಸಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಮೆರವಣಿಗೆ ಸಿದ್ಧತೆಗಳು ಶುರುವಾಗಿವೆ. ಆದ್ರೆ ರಾಜ್ಯದಲ್ಲಿ ಹಿಜಾಬ್, ಹಲಾಲ್ನಂತಹ ಸಂಘರ್ಷಗಳು ನಡೆಯುತ್ತಿವೆ. ಹೀಗಾಗಿ ಕರಗ ಉತ್ಸವದ ಮೇಲೂ ಕರಿನೆರಳಿನ ಭೀತಿ ಎದುರಾಗಿದೆ. ಏಕೆಂದರೆ ಕರಗ ಉತ್ಸವ ತಾಯಿಯ ಮೆರವಣಿಗೆ ವೇಳೆ ಪ್ರತಿ ವರ್ಷವೂ ತಾಯಿಯನ್ನು ದರ್ಗಾಗೆ ಕರೆದುಕೊಂಡು ಹೋಗಲಾಗುತ್ತೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳಿಂದಾಗಿ ಈ ಆಚರಣೆಗೆ ಸಮಸ್ಯೆ ಎದುರಾಗಲಿದೆಯಾ ಎಂಬ ಭೀತಿ ಎದುರಾಗಿದೆ.

ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ಮುಸ್ಲಿಂ ಧರ್ಮಗುರುಗಳು ಭೇಟಿ
ಕರಗ ಉತ್ಸವ ಮೊದಲಿನಿಂದಲೂ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಅಪಸ್ವರ ಕೇಳುವ ಮುನ್ನವೇ ಮುಸ್ಲಿಂ ಧರ್ಮಗುರುಗಳು ಎಚ್ಚೆತ್ತುಕೊಂಡಿದ್ದು ಕರಗ ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವರ್ಷ ಹಿಜಾಬ್, ಹಲಾಲ್ ಸಂಘರ್ಷ ಹಿನ್ನೆಲೆ ಮಸ್ತಾನ್ ಸಾಬ್ ದರ್ಗಾ ಧರ್ಮ‌ಗುರುಗಳು ಕರಗ ಉತ್ಸವ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಕರಗ ಉತ್ಸವ ತಾಯಿಯ ಮೆರವಣಿಗೆ ಪ್ರತಿ ವರ್ಷದಂತೆ ನಡೆಯಲಿ. ಪ್ರತಿ ವರ್ಷದಂತೆ ಮಸ್ತಾನ್‌ ಸಾಬ್ ದರ್ಗಾಕ್ಕೆ ತಾಯಿ ಆಗಮಿಸಲಿ ಎಂದು ಮನವಿ ಮಾಡಿದ್ದಾರೆ. ಬಳೇಪೇಟೆ ಬಳಿ ಮಸ್ತಾನ್ ಸಾಬ್ ದರ್ಗಾ ಮುಂದೆ ಮೆರವಣಿಗೆ ಬರಲಿ. ಮುಸ್ಲಿಂ ಸಮುದಾಯದ ಸಹಕಾರ, ಪ್ರೀತಿ ಇರುತ್ತೆ. ನಮ್ಮ ಪೂರ್ವಿಕರ ಕಾಲದಿಂದ ನಡೆದುಬಂದ ರೀತಿ ಜರುಗಲಿ ಎಂದು ಮನವಿ ಮಾಡಿದ್ದಾರೆ.

ನೂರಾರು ವರ್ಷಗಳ ಇತಿಹಾಸದಂತೆ ಕರಗ ಆಚರಣೆ ನಡೆಯಲಿದೆ
ಇನ್ನು ಧರ್ಮ ಗುರುಗಳ ಚರ್ಚೆ ಬಳಿಕ ಮಾತನಾಡಿದ ಕರಗ ಉತ್ಸವ ಸಮಿತಿ ವ್ಯವಸ್ಥಾಪಕ ಅಧ್ಯಕ್ಷ ಸತೀಶ್‌, ಪ್ರತಿ ವರ್ಷದಂತೆ ಈ ಬಾರಿಯೂ ಕರಗ ಉತ್ಸವ ಮೆರವಣಿಗೆ ನಡೆಯಲಿದೆ. ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ಉತ್ಸವ ಭೇಟಿ ನೀಡಲಿದೆ. ನೂರಾರು ವರ್ಷಗಳ ಇತಿಹಾಸದಂತೆ ಆಚರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಧರ್ಮರಾಯಸ್ವಾಮಿ ದೇಗುಲಕ್ಕೆ ಮಸ್ತಾನ್ ಸಾಬ್ ದರ್ಗಾ ಮೌಲ್ವಿಗಳು ಬಂದಿದ್ದರು. ಕರಗ ಉತ್ಸವ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಕರಗ ಉತ್ಸವದ ಮೆರವಣಿಗೆ ಪ್ರತಿ ವರ್ಷದಂತೆ ನಡೆಯಲಿ. ಮಸ್ತಾನ್‌ ಸಾಬ್ ದರ್ಗಾಕ್ಕೆ ತಾಯಿ ಬರಲಿ ಎಂದು ಮನವಿ ಮಾಡಿದ್ದಾರೆ. ಬಳೇಪೇಟೆ ಬಳಿಯ ಮಸ್ತಾನ್ ಸಾಬ್ ದರ್ಗಾ ಮುಂದೆ ಬರಲಿ. ಮುಸ್ಲಿಂ ಸಮುದಾಯದ ಸಹಕಾರ, ಪ್ರೀತಿ ಇರುತ್ತೆಂದಿದ್ದಾರೆ. ನಮ್ಮ ಪೂರ್ವಿಕರ ಕಾಲದಿಂದ ನಡೆದುಬಂದ ರೀತಿ ಜರುಗಲಿ ಎಂದಿದ್ದಾರೆ ಎಂದು ಮುಸ್ಲಿಂ ಧರ್ಮ‌ಗುರುಗಳ ಮನವಿ ಬಗ್ಗೆ ಟಿವಿ9ಗೆ ಕರಗ ಉತ್ಸವ ಸಮಿತಿ ವ್ಯವಸ್ಥಾಪಕ ಅಧ್ಯಕ್ಷ ಸತೀಶ್‌ ಮಾಹಿತಿ ನೀಡಿದ್ದಾರೆ.

ಈ ಬಾರಿ ಕರಗ ಉತ್ಸವ ರೂಟ್ ಮ್ಯಾಪ್ ಹೇಗಿದೆ?
ಬೆಂಗಳೂರಿನಲ್ಲಿ ಈ ಬಾರಿ ಅದ್ಧೂರಿ ಕರಗ ಉತ್ಸವ ಜರುಗಲಿದೆ. ಕೊರೊನಾ‌ ಕಾರಣಕ್ಕೆ‌ ಕಳೆದೆರಡು ವರ್ಷ ಅತ್ಯಂತ ಸರಳವಾಗಿ ಕರಗ ಉತ್ಸವ ಜರುಗಿತ್ತು. ಹೀಗಾಗಿ ಈ ವರ್ಷ ಕರಗ ಉತ್ಸವ ಅದ್ಧೂರಿಯಾಗಿ ಜರುಗಲಿದೆ. ಏ.16ರಂದು‌ ಕರಗ ಉತ್ಸವ ಮೆರವಣಿಗೆ ನಡೆಯಲಿದೆ. ಅಂದು ರಾತ್ರಿ ಕರಗ ಮೆರವಣಿಗೆ ಮೊದಲು ಧರ್ಮರಾಯ ಸ್ವಾಮಿ ದೇಗುಲ ಪ್ರದಕ್ಷಿಣೆ ಹಾಕಿ ದೇಗುಲದ ರಸ್ತೆ ಮೂಲಕ ಕುಂಬಾರಪೇಟ್ ರೋಡ್ ಸಾಗಿ ಅನಂತರ ರಾಜ ಮಾರ್ಕೆಟ್ ಸರ್ಕಲ್ ತಲುಪಿ ಅಲ್ಲಿಂದ ಸಿಟಿ ಮಾರ್ಕೆಟ್ ಸರ್ಕಲ್ ಕಡೆ ಮೆರವಣಿಗೆ ಸಾಗಲಿದೆ. ಅಲ್ಲಿಂದ ಕೋಟೆ ಆಂಜನೇಯ ಸ್ವಾಮಿ ದೇಗುಲ ತೆರಲಿ ಅಲ್ಲಿಂದ ವಾಪಾಸ್ ಸಿಟಿ ಮಾರ್ಕೆಟ್ ಸರ್ಕಲ್ ಮೂಲಕ ಪೊಲೀಸ್ ರೋಡ್ ಕಡೆಗೆ ಪಯಣ ಬೆಳೆಸಲಿದೆ. ಕಾಟನ್ ಪೇಟ್ ಪೊಲೀಸ್ ಸ್ಟೇಷನ್ ರಸ್ತೆಯಿಂದ ಕಾಟನ್ ಪೇಟ್ ರಸ್ತೆಯಲ್ಲಿ ಮೆರವಣಿಗೆ ಸಾಗಿ
ಅಲ್ಲಿರುವ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಲಿದೆ. ಬಳೇಪೇಟೆ ಸರ್ಕಲ್ ಮೂಲಕ ಅಣ್ಣಮ್ಮ ದೇವಿಯ ದೇವಸ್ಥಾನದತ್ತ ಮೆರವಣಿಗೆ ನಡೆಯಲಿದೆ. ಕೊನೆಗೆ ಕಬ್ಬನ್ ಪೇಟೆ ಮುಖ್ಯ ರಸ್ತೆಯ ಮೂಲಕ ವಾಪಾಸ್ ಶ್ರೀ ಧರ್ಮರಾಯ ಸ್ವಾಮಿ ದೇಗುಲ ಪ್ರವೇಶ ಮಾಡಲಿದೆ.

ಭಾರತವೊಂದು ಜ್ಯಾತ್ಯಾತೀತ ರಾಷ್ಟ್ರ, ಶಾಂತಿ ಸೌಹಾರ್ದತೆಯಿಂದ ಇರಬೇಕು
ಇನ್ನು ಕರಗ ಉತ್ಸವ ಮೆರವಣಿಗೆ ಮಸ್ತಾನ್ ದರ್ಗಾಗೆ ಹೋಗುವ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಪ್ರತಿಕ್ರಿಯಿಸಿದ್ದಾರೆ. ಕರಗ ಮೆರವಣಿಗೆ ಮಸ್ತಾನ್ ದರ್ಗಾಕ್ಕೆ ಹೋಗ ಬೇಕೋ ಬೇಡವೋ ಎಂಬ ಪ್ರಶ್ನೆ ಎದ್ದಿದೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದನ್ನು ಹಾಗೇ ನಡೆಯಲು ಬಿಡುವುದು ಒಳ್ಳೆಯದು. ನಾನೊಬ್ಬ ಹಿಂದೂವಾಗಿ ಕರಗ ಮಸ್ತಾನ್ ದರ್ಗಾಕ್ಕೆ ಹೋಗಬೇಕು ಎಂದು ಹೇಳುತ್ತೇನೆ. ಮಸ್ತಾನ್ ದರ್ಗಾ ಮಂಡಳಿ ಕೂಡ ಕರಗಮ್ಮನ ಪೂಜೆ ಸಿದ್ಧವಾಗಿದೆ. ಭಾರತವೊಂದು ಜ್ಯಾತ್ಯಾತೀತ ರಾಷ್ಟ್ರ, ಶಾಂತಿ ಸೌಹಾರ್ದತೆಯಿಂದ ಇರಬೇಕು
ಅದಕ್ಕೆ ಧಕ್ಕೆ ತರುವ ಯಾವ ಕೆಲಸವೂ ಆಗಬಾರದು ಎಂದಿದ್ದಾರೆ.

ಇದನ್ನೂ ಓದಿ: ತುಮಕೂರು: ತಾಯಿ, ಮಗಳನ್ನು ಕೊಂದಿದ್ದ ಹಂತಕನಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸಿದ ಸೆಷನ್ಸ್ ಕೋರ್ಟ್

ಅಬ್ಬಾ! ಕೊನೆಗೂ ಬೆಂಗಳೂರು ಕರಗ ಉತ್ಸವಕ್ಕೆ ಬಿಬಿಎಂಪಿ ಹಸಿರು ನಿಶಾನೆ, ತಗ್ಗಿದ ಕೊರೊನಾ ಅಬ್ಬರ

Published On - 9:43 am, Thu, 7 April 22