Hijab Verdict: ಸುಪ್ರೀಂಕೋರ್ಟ್ ತೀರ್ಪು ಏನೇ ಬಂದರೂ ಪಾಲಿಸುತ್ತೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಮುಂದಿನ ದಿನಗಳಲ್ಲಿಯೂ ಸುಪ್ರೀಂಕೋರ್ಟ್ ಯಾವುದೇ ರೀತಿ ತೀರ್ಪು ನೀಡಿದರೂ ನಾವು ಗೌರವಿಸುತ್ತೇವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು.
ಬೆಂಗಳೂರು: ಹಿಜಾಬ್ ವಿವಾದ(Hijab Controversy) ಕುರಿತಂತೆ ಸುಪ್ರೀಂಕೋರ್ಟ್(Supreme Court) ನೀಡಿರುವ ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ‘ಸುಪ್ರೀಂಕೋರ್ಟ್ ವಿಭಜಿತ ತೀರ್ಪು ನೀಡಿದೆ. ಹೀಗಾಗಿ ವಿಚಾರಣೆ ಮುಂದುವರಿಯಬಹುದು. ಮುಂದಿನ ದಿನಗಳಲ್ಲಿಯೂ ಸುಪ್ರೀಂಕೋರ್ಟ್ ಯಾವುದೇ ರೀತಿ ತೀರ್ಪು ನೀಡಿದರೂ ನಾವು ಗೌರವಿಸುತ್ತೇವೆ’ ಎಂದು ಹೇಳಿದರು. ‘ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ಗೆ ವ್ಯವಸ್ಥೆ ಮಾಡಿಕೊಂಡಿದ್ದೆವು. ಮುಂದಿನ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿ ಯಾವುದೇ ನಿರ್ಧಾರ ತೆಗೆದುಕೊಂಡು,, ವಿಸ್ತೃತ ಪೀಠ ನೀಡುವ ಯಾವುದೇ ತೀರ್ಪಿಗೆ ರಾಜ್ಯ ಸರ್ಕಾರ ಬದ್ಧವಾಗಿರುತ್ತದೆ’ ಎಂದು ವಿವರಿಸಿದರು.
ಚಾಮರಾಜಪೇಟೆ ಈದ್ಗಾ ಮೈದಾನ ಪ್ರಕರಣವನ್ನೂ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಈ ಪ್ರಕರಣವನ್ನು ಸಹ ಗಮನಿಸುತ್ತಿದ್ದೇವೆ. ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಏನೇ ತೀರ್ಪು ಬಂದರೂ ಮಾನ್ಯ ಮಾಡುತ್ತೇವೆ ಎಂದರು. ಇದನ್ನೂ ಓದಿ: ಧಾರ್ಮಿಕ ಆಚರಣೆಗೆ ಶಾಲೆಗಳಲ್ಲಿ ಅವಕಾಶವಿಲ್ಲ, ಸುಪ್ರೀಂಕೋರ್ಟ್ನ ಮುಂದಿನ ತೀರ್ಪಿಗೆ ಕಾಯುತ್ತೇವೆ: ಶಿಕ್ಷಣ ಸಚಿವ ಬಿಸಿ ನಾಗೇಶ್
‘ರಾಜ್ಯದಲ್ಲಿ ಪ್ರಸ್ತುತ 3,500 ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುತ್ತೇವೆ. ಹಿಂದಿನ ಪ್ರಕರಣವನ್ನು ಗಮನದಲ್ಲಿರಿಸಿಕೊಂಡು ಈ ಪರೀಕ್ಷೆಯಲ್ಲಿ ಲೋಪವಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈಗಾಗಲೇ 98 ಜನರ ಬಂಧನವಾಗಿದ್ದು ತನಿಖೆ ಮುಂದುವರಿದಿದೆ’ ಎಂದರು.
Published On - 11:28 am, Thu, 13 October 22