ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ; ಮೃತ ಯುವಕನೊಬ್ಬ ಪಕ್ಕದ ಹೊಸೂರು ಕ್ಷೇತ್ರದ ಶಾಸಕನ ಪುತ್ರ
ತಮಿಳುನಾಡಿನ ಹೊಸೂರು ಕ್ಷೇತ್ರದ ಶಾಸಕ ವೈ.ಪ್ರಕಾಶ್ ಪುತ್ರ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಕಟ್ಟಡ ನಿರ್ಮಾಣ ಸಾಮಗ್ರಿ ಖರೀದಿ ಮಾಡಲು ನಿನ್ನೆ ಸಂಜೆ 5.30ಕ್ಕೆ ಬೆಂಗಳೂರಿಗೆ ಬಂದಿದ್ದ ಕರುಣಾಸಾಗರ್, ನಿನ್ನೆ ರಾತ್ರಿ ಕುಟುಂಬಸ್ಥರಿಂದ ಕರೆ ಬಂದಾಗ ಊಟಕ್ಕೆ ಮನೆಗೆ ಬರುತ್ತೀಯಾ ಎಂದು ಕೇಳಿದಾಗ ಮನೆಯವರ ಬಳಿ ಊಟಕ್ಕೆ ಬರಲ್ಲವೆಂದಿದ್ದ.
ಬೆಂಗಳೂರು: ಕೋರಮಂಗಲದಲ್ಲಿ ನಡೆದ ಭೀಕರ ಅಪಘಾತ ಕೇಸ್ಗೆ ಸಂಬಂಧಿಸಿ ಘಟನೆಯಲ್ಲಿ ಮೃತಪಟ್ಟ ಕರುಣಾಸಾಗರ್(28) ಡಿಎಂಕೆ ಶಾಸಕ ವೈ.ಪ್ರಕಾಶ್ ಪುತ್ರ. ತಮಿಳುನಾಡಿನ ಹೊಸೂರು ಕ್ಷೇತ್ರದ ಶಾಸಕ ವೈ.ಪ್ರಕಾಶ್ ಪುತ್ರ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಕಟ್ಟಡ ನಿರ್ಮಾಣ ಸಾಮಗ್ರಿ ಖರೀದಿ ಮಾಡಲು ನಿನ್ನೆ ಸಂಜೆ 5.30ಕ್ಕೆ ಬೆಂಗಳೂರಿಗೆ ಬಂದಿದ್ದ ಕರುಣಾಸಾಗರ್, ನಿನ್ನೆ ರಾತ್ರಿ ಕುಟುಂಬಸ್ಥರಿಂದ ಕರೆ ಬಂದಾಗ ಊಟಕ್ಕೆ ಮನೆಗೆ ಬರುತ್ತೀಯಾ ಎಂದು ಕೇಳಿದಾಗ ಮನೆಯವರ ಬಳಿ ಊಟಕ್ಕೆ ಬರಲ್ಲವೆಂದಿದ್ದ. ಆದ್ರೆ ತಡ ರಾತ್ರಿ 1-2ಗಂಟೆ ಆಸುಪಾಸಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಮೃತ ಕರುಣಾಸಾಗರ್ ಬೆಂಗಳೂರಿನಲ್ಲೇ ಬಹುತೇಕ ವ್ಯವಹಾರ ಮಾಡುತ್ತಿದ್ದ. ಹಾಗೂ ತಂದೆಯ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದ. ವೆಟ್ ಲಾಸ್ ಹಾಗೂ ಬಿಪಿ ಮೆಡಿಸನ್ ತೆಗೆದುಕೊಂಡು ಬರ್ತೇನೆ ಎಂದು ಮನೆಯಲ್ಲಿ ತಿಳಿಸಿ ಸಾಗರ್ ಬೆಂಗಳೂರಿಗೆ ಹೊರಟಿದ್ದ. ಆದ್ರೆ ಸ್ನೇಹಿತರ ಜೊತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಶವಾಗಾರಕ್ಕೆ ಬಂದ ಶಾಸಕ ರಾಮಲಿಂಗಾರೆಡ್ಡಿ ಹೊಸೂರು ಶಾಸಕರ ಪುತ್ರ ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಶವಾಗಾರಕ್ಕೆ ಶಾಸಕ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದಾರೆ. ರಾಮಲಿಂಗಾರೆಡ್ಡಿಗೆ ಶಾಸಕ ಪ್ರಕಾಶ್ ಕುಟುಂಬ ಆಪ್ತವಾಗಿತ್ತು. ಇನ್ನು ಚೆನ್ನೈಗೆ ಅಧಿವೇಶನಕ್ಕೆ ಹೋಗಿದ್ದ ಶಾಸಕ ಪ್ರಕಾಶ್ ಮಗನ ಸಾವಿನ ಸುದ್ದಿ ತಿಳಿದು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದಾರೆ.
ಕೆಮ್ಮಿದಾಗ ರಕ್ತ ವಾಂತಿ ಆಗ್ತಾ ಇತ್ತು ರಾತ್ರಿ 1.30 ರಿಂದ 2 ಗಂಟೆ ಸಮಯದಲ್ಲಿ ಜೋರಾದ ಶಬ್ಧ ಬಂದಿದೆ. ಮನೆಯಲ್ಲಿ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿದೆ ಅಂದುಕೊಂಡ್ವಿ. ತಕ್ಷಣ ನಾವು ಹೊರಗೆ ಬಂದು ನೋಡಿದ್ವಿ. ಎಲ್ಲರೂ ಕಾರಿನೊಳಗೆ ಸಿಕ್ಕಾಕಿಕೊಂಡಿದ್ರು. ಕೆಲವರ ಕೈ ಕಾಲು ಎಲ್ಲವೂ ಕಟ್ ಆಗಿತ್ತು. ಓರ್ವ ಮಾತ್ರ ಉಸಿರಾಡ್ತಿದ್ದ. ಕೆಮ್ಮಿದಾಗ ರಕ್ತ ವಾಂತಿ ಆಗ್ತಾ ಇತ್ತು. ಆತನನ್ನ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಲಾಯ್ತು. ಆದ್ರು ಅವರೂ ಕೂಡ ಬದುಕಲಿಲ್ಲ. ಕಾರ್ ಡೋರ್ ಓಪನ್ ಮಾಡೋದೆ ಕಷ್ಟ ಆಗ್ತಿತ್ತು. ಮೃತದೇಹ ಕಷ್ಟ ಪಟ್ಟು ಹೊರ ತೆಗೆಯಲಾಯ್ತು ಎಂದು ಅಪಘಾತ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ.
ಘಟನೆ ಮಾಹಿತಿ ನಗರದ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದೆ. ತಡರಾತ್ರಿ 1.45ರಿಂದ 2 ಗಂಟೆ ಸುಮಾರಿಗೆ ಐಷಾರಾಮಿ ಕಾರು ಅಪಘಾತವಾಗಿ ಮೂವರು ಮಹಿಳೆಯರು ನಾಲ್ಕು ಪುರುಷರು ಸೇರಿ 7 ಜನರ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ತುತ್ತಾದ ಕಾರಿಗೆ ಫ್ಯಾನ್ಸಿ ನಂಬರ್ ಇತ್ತು ಫುಟ್‌ಪಾತ್ ಹತ್ತಿ ಡಿವೈಡರ್‌ಗೆ ಗುದ್ದಿರುವ ಐಷಾರಾಮಿ ಕಾರು ಬಳಿಕ ಪಕ್ಕದ ಕಟ್ಟಡದ ಗೋಡೆಗೆ ಡಿಕ್ಕಿಯಾಗಿದೆ. ಅಪಘಾತಕ್ಕೆ ತುತ್ತಾದ ಕಾರಿಗೆ ಫ್ಯಾನ್ಸಿ ನಂಬರ್ ಇತ್ತು. ಅದು KA 03 MY 6666. ಈ ನಂಬರಿನ ಐಷಾರಾಮಿ ಕಾರು ಅಪಘಾತದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಮುಂದಿನ ಸೀಟ್ ತುಂಬಾ ರಕ್ತದ ಕಲೆಗಳಿದ್ದು ಕಾರಿನ ಎಡಭಾಗದ 2 ಟೈರ್ ಸಂಪೂರ್ಣ ಪೀಸ್‌ಪೀಸ್ ಆಗಿದೆ. ಐಷಾರಾಮಿ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಆಸ್ಪತ್ರೆಗೆ ದಾಖಲಿಸಿದ ವೇಳೆ ಮೃತಪಟ್ಟಿದ್ದಾರೆ. ಕಾರಿನ ಮುಂದಿನ ಸೀಟ್‌ನಲ್ಲಿ ಮೂವರು ಕುಳಿತಿದ್ದು ಹಿಂಬದಿ ಸೀಟ್‌ನಲ್ಲಿ ನಾಲ್ವರು ಕುಳಿತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಮೃತರೆಲ್ಲರೂ ಸ್ನೇಹಿತರಾಗಿದ್ದು, 20ರಿಂದ 30 ವರ್ಷದವರಾಗಿದ್ದಾರೆ. ಹೊಸೂರು ಮೂಲದ ಕರುಣಾಸಾಗರ್, ಪತ್ನಿ ಬಿಂದು(28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ(21), ಧನುಷಾ(21), ಹುಬ್ಬಳ್ಳಿಯ ರೋಹಿತ್, ಹರಿಯಾಣ ಮೂಲದ ಉತ್ಸವ್ ಮೃತ ದುರ್ದೈವಿಗಳು.
ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿರುವ 7 ಜನರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ಮರಣೋತ್ತರ ಪರೀಕ್ಷೆ ಬಳಿಕ ಮದ್ಯ ಸೇವನೆ ಮಾಹಿತಿ ಲಭ್ಯವಾಗಲಿದೆ. ಮೃತರಲ್ಲಿ ಕೆಲವರು ಕೋರಮಂಗಲದ ಜೋಲೋ ಸ್ಟೇ ಪಿಜಿಯಲ್ಲಿ ವಾಸವಿದ್ರು. ಈ ಸಂಬಂಧ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ; ಬೇರೆ ಬೇರೆ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಸ್ನೇಹಿತರು
ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ, ಎಸಿಪಿಯಿಂದ ತನಿಖೆ: ಸಂಚಾರಿ ಆಯುಕ್ತ ರವಿಕಾಂತೇಗೌಡ ಹೇಳಿದ್ದೇನು?
Published On - 8:23 am, Tue, 31 August 21