ಬೆಂಗಳೂರು, ಜುಲೈ 14: ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕಾರಣ ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘವು (Hotel Owners’ Association) ತಮ್ಮ ವ್ಯಾಪ್ತಿಯಲ್ಲಿರುವ ರೆಸ್ಟೊರೆಂಟ್‌ಗಳು ಮತ್ತು ಫಾಸ್ಟ್ ಫುಡ್ ಮಳಿಗೆಗಳಲ್ಲಿ ಆಹಾರದ ಬೆಲೆಯನ್ನು ಶೇಕಡಾ 10 ರಿಂದ 15 ರಷ್ಟು ಹೆಚ್ಚಿಸಲು (Hotel food) ಚಿಂತನೆ ನಡೆಸಿದೆ. ಹೋಟೆಲ್ ಮಾಲೀಕರ ಸಂಘವು ಜುಲೈ 25 ರಂದು ಕರೆದಿರುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ವಿದ್ಯುಚ್ಛಕ್ತಿ, ಸರಕುಗಳು ಮತ್ತು ಹಲವಾರು ಪದಾರ್ಥಗಳ ಹೆಚ್ಚಳದಿಂದಾಗಿ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘ ಹೇಳಿದೆ.
ವಿದ್ಯುತ್ ಬಿಲ್ ಹೆಚ್ಚಾಗಿದೆ, ಸರಕುಗಳ ಬೆಲೆ ಹೆಚ್ಚಾಗಿದೆ ಮತ್ತು ತರಕಾರಿಗಳು ದುಬಾರಿಯಾಗುತ್ತಿವೆ. ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೋಟೆಲ್‌ಗಳಲ್ಲಿ ನೀಡುವ ಆಹಾರದ ಬೆಲೆ ಕನಿಷ್ಠ ಶೇ 10ರಷ್ಟು ಹೆಚ್ಚಳ ಅನಿವಾರ್ಯ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಈಗಾಗಲೇ ಕೆಲವು ಹೋಟೆಲ್ ಮಾಲೀಕರು ಬೆಲೆ ಏರಿಕೆ ಮಾಡಿದ್ದು, ಇನ್ನು ಕೆಲವರು ಆಷಾಢ ಮುಗಿಯಲು ಕಾಯುತ್ತಿದ್ದಾರೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
ಹಾಲಿನ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಅದರ ಆಧಾರದ ಮೇಲೆ ಜುಲೈ 25 ರಂದು ಕರೆಯಲಾದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹಾಲಿನ ದರ ಐದು ರೂ. ಹೆಚ್ಚಳಕ್ಕೆ ಹೆಚ್ಚಿದ ಒತ್ತಡ: ಶೀಘ್ರದಲ್ಲೇ ದರ ಏರಿಕೆ ಎಂದ ಸಚಿವ ವೆಂಕಟೇಶ್
ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ ಭೀಮಾ ನಾಯ್ಕ್ ನೇತೃತ್ವದ ನಿಯೋಗ ಶುಕ್ರವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಂದಿನಿ ಹಾಲಿನ ದರವನ್ನು ಲೀಟರ್‌ಗೆ 5 ರೂ. ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ ಇಟ್ಟಿದೆ.
ಇತ್ತೀಚೆಗೆ ಸರ್ಕಾರ ವಿದ್ಯುತ್ ದರವನ್ನು ಹೆಚ್ಚಿಸುವ ನಿರ್ಧಾರ ಜಾರಿಗೆ ತರಲು ನಿರ್ಧರಿಸಿದ ನಂತರ ನಗರದ ಕೆಲವು ಹೋಟೆಲ್‌ಗಳು ಮತ್ತು ದರ್ಶಿನಿಗಳು ಆಹಾರದ ಬೆಲೆಗಳನ್ನು ಹೆಚ್ಚಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Fri, 14 July 23