ಬೆಂಗಳೂರು, ಮೇ 6: ರಾಜ್ಯ ರಾಜಾಧಾನಿ ಬೆಂಗಳೂರು (Bengaluru) ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ನಗರ. ಇಲ್ಲಿ ಒಂದು ಸೈಟ್ ತೆಗದುಕೊಳ್ಳಬೇಕು ಅಂದರೆ ಮಧ್ಯಮ ವರ್ಗದ ಜನರಿಗೆ ಕನಸಿನ ಮಾತೇ ಎನ್ನುವಂತಾಗಿದೆ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಸೈಟ್ಗಳ ಬೆಲೆ ದುಬಾರಿಯಾಗುತ್ತಿದ್ದು, ಎಷ್ಟೋ ಜನರು ಇಷ್ಟು ದಿನ ನೆಮ್ಮದಿಯಾಗಿ ಬಾಡಿಗೆ ಮನೆಗಳಲ್ಲಿಯೇ (rented House) ಜೀವನ ನಡೆಸುತ್ತಿದ್ದಾರೆ. ಇದೀಗ ಬಾಡಿಗೆ ಮನೆಗಳ ಬಾಡಿಗೆಗೂ (House Rent) ಚಿನ್ನದ ದರ ನಿಗದಿಪಡಿಸಲಾಗುತ್ತಿದೆ. ಬಾಡಿಗೆದಾರರಿಗೆ ಇನ್ನು ಮುಂದೆ ಜೀವನ ಮಾಡುವುದು ತುಂಬ ಕಷ್ಟವಾದಂತೆ ಕಾಣುತ್ತಿದೆ.
ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಬಾಡಿಗೆ ದರವನ್ನು ಶೇಕಡಾ 8ರಷ್ಟು ಹೆಚ್ಚಳ ಮಾಡಲಾಗಿದೆ. ಹೈ ಫೈ ಏರಿಯಾಗಳಲ್ಲಿ ಬಾಡಿಗರ ದರವನ್ನು ಸಾಮಾನ್ಯ ಜನರು ಕೇಳದಂತಾಗಿದೆ. ಕೋವಿಡ್ ಅವಧಿಯಲ್ಲಿ 2022ರ ಅಂತ್ಯದ ವೇಳೆ ವೈಟ್‌ಫೀಲ್ಡ್‌ನಲ್ಲಿ 2 ಬಿಎಚ್‌ಕೆ ಮನೆ ದರ 22,500 ರೂ. ಇತ್ತು. ಇನ್ನು ಸರ್ಜಾಪುರ ರಸ್ತೆಯಲ್ಲಿ 24,000 ರೂ. ಇತ್ತು. 2023ರ ಅಂತ್ಯದ ವೇಳೆಗೆ, ವೈಟ್‌ಫೀಲ್ಡ್‌ನಲ್ಲಿ 30,200 ರೂ. ಮತ್ತು ಸರ್ಜಾಪುರ ರಸ್ತೆಯಲ್ಲಿ 31,600 ರೂ.ಗೆ ಗಮನಾರ್ಹವಾಗಿ ಏರಿಕೆ ಕಂಡಿತು.
2024ರ ಮೊದಲ ತ್ರೈಮಾಸಿಕದಲ್ಲಿ, ಸರಾಸರಿ ಬಾಡಿಗೆಯು ಸರ್ಜಾಪುರದಲ್ಲಿ 34,000 ರೂ., ಮತ್ತು ವೈಟ್‌ಫೀಲ್ಡ್‌ನಲ್ಲಿ 32,500 ರೂ.ಗೆ ಏರಿಕೆಯಾಗಿದೆ. ಇದಲ್ಲದೇ ಬೆಂಗಳೂರಿನ ಹೈ ಫೈ ಏರಿಯಾಗಳಾದ ಮಲ್ಲೇಶ್ವರಂ, ಕೋರಮಂಗಲ, ಡಾಲೋರ್ಸ್ ಕಾಲೋನಿ, ಸದಾಶಿವನಗರ, ಜಯನಗರ, ಜೆಪಿನಗರ, ರಾಜಾಜಿನಗರ, ಆರ್ಆರ್ ನಗರ, ಇಂದಿರಾನಗರ, ಸೇರಿದಂತೆ ಪ್ರಸಿದ್ಧ ಏರಿಯಾಗಳಲ್ಲೂ ಬಾಡಿಗೆ ದಾಖಾಲೆ ಬರೆಯುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ಬೆಂಗಳೂರಿನಲ್ಲಿ ಅತಿಹೆಚ್ಚು ಬೆಲೆ ಏರಿಕೆಯಾಗಿದ್ದು, ಸಿಲಿಕಾನ್ ಸಿಟಿ ತುಂಬ ದುಬಾರಿ ಎನ್ನುವಂತಾಗಿದೆ.
ಕೋರೋನಾ ಸಂದರ್ಭದಲ್ಲಿ ಐಟಿಬಿಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀಡಿದ್ದವು. ಇದೀಗ ಕೋವಿಡ್ ಸಮಯದಲ್ಲಿ ಮುಚ್ಚಿದ್ದ ಆಫೀಸ್ಗಳು ಒಪನ್ ಆಗುತ್ತಿದ್ದು, ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿವೆ. ಐಟಿ – ಬಿಟಿ ನೌಕರರಿಂದ ಹೆಚ್ಚಾಗಿ ಮನೆಗಳಿಗೆ ಬೇಡಿಕೆ ಇದೆ. ಅಲ್ಲದೆ, ಈಗ ಉದ್ಯೋಗ ಅರಸಿ ಬರುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಈ ಕಾರಣದಿಂದಾಗಿ ಮನೆಯ ಬಾಡಿಗಳು ಜಾಸ್ತಿಯಾಗುತ್ತಿವೆ ಎಂದು ಅಪಾರ್ಟ್ಮೆಂಟ್ ಅಸೋಸಿಯೇಷನ್ ಫೆಡರೇಷನ್ ಹೇಳಿದೆ.
ಇದನ್ನೂ ಓದಿ: ಮೇ 11ರವರೆಗೂ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ; ಮರ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಬೆನ್ನು ಮೂಳೆ ಮುರಿತ
ಇದೇ ರೀತಿಯಾಗಿ ಮನೆಯ ಬಾಡಿಗೆ ಹೆಚ್ಚಳವಾಗುತ್ತಿದ್ದರೆ ಬಡಜನರು ಜೀವನ ಮಾಡುವುದು ಹೇಗೆ? ಚಿಕ್ಕ ಮನೆಗಳಿಗೆ 7 ರಿಂದ 10 ಸಾವಿರ ಕೇಳುತ್ತಾರೆ. ಕೂಲಿ ಕೆಲಸ ಮಾಡಿ ಅಷ್ಟು ಬಾಡಿಗೆ ಕಟ್ಟುವುದಕ್ಕೆ ಆಗುತ್ತದೆಯೇ? ಈ ಕುರಿತಾಗಿ ಅಧಿಕಾರಿಗಳು ಕ್ರಮ ತಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 am, Thu, 9 May 24