ಬೆಂಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೂ ಮೂರು ದಿನವಷ್ಟೆ ಬಾಕಿಯಿದ್ದು, ನಗರದಲ್ಲಿ ಬಂದೋಬಸ್ತ್ಗೆ ಭಾರಿ ಪ್ಲ್ಯಾನ್ ಮಾಡಲಾಗಿದೆ. ಗಣೇಶ ಮೂರ್ತಿ ಕೂರಿಸಲು ಸೂಕ್ಷ್ಮ, ಅತಿ ಸೂಕ್ಷ್ಮ, ಸಾಮಾನ್ಯ ಏರಿಯಾ ಎಂದು 3 ರೀತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಚಾಮರಾಜಪೇಟೆ, ಚಂದ್ರಾಲೇಔಟ್, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಗೋವಿಂದಪುರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಇಂತಹ ಏರಿಯಾಗಳಲ್ಲಿ ದಿನದ 24 ಗಂಟೆಯೂ ಭದ್ರತೆ ಇರಲಿದ್ದು, 3 ಪಾಳಿಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಸೂಕ್ಷ್ಮ ಏರಿಯಾಗಳಲ್ಲಿ ಇನ್ಸ್ಪೆಕ್ಟರ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಏರಿಯಾಗಳ ಸುತ್ತಮುತ್ತ ಸಿಸಿಕ್ಯಾಮರಾ ಕಣ್ಗಾವಲು ವಹಿಸಲಾಗುವುದು.
ಗಣೇಶೋತ್ಸವ ಆಯೋಜಕರ ಜೊತೆ ಮೀಟಿಂಗ್ ಮಾಡಿ ಮೆರವಣಿಗೆ ಬಗ್ಗೆ ಮಾಹಿತಿ ಪಡೆಯುವಂತೆ ಹೇಳಿದ್ದು, ಎರಡು ದಿನದಲ್ಲಿ ಸೂಕ್ಷ್ಮ ಪ್ರದೇಶಗಳ ಮೆರೆವಣಿಗೆಯ ಬ್ಲೂ ಪ್ರಿಂಟ್ ರೆಡಿ ಮಾಡಲು ಸೂಚನೆ ನೀಡಲಾಗಿದೆ. ಮೆರವಣಿಗೆಯ ಪ್ರತಿ ರಸ್ತೆಯಲ್ಲೂ ಸಿಸಿಟಿವಿ ಅಳವಡಿಕೆಗೆ ಮಾಡಲಾಗುತ್ತಿದ್ದು, ಅಲ್ಲದೇ ಮೆರವಣಿಗೆ ವೇಳೆ ಎರಡು ಡ್ರೋಣ್ ಕ್ಯಾಮೆರಾ ಬಳಸಲು ಕಮಿಷನರ್ ಸೂಚನೆ ನೀಡಿದ್ದಾರೆ. ಹಬ್ಬ, ಮೆರವಣಿಗೆಯ ಪ್ರತಿ ಕಂಟೆಂಟ್ ಕ್ಯಾಮರಾದಲ್ಲಿ ಕವರ್ ಆಗಬೇಕು. ಏರಿಯಾಗಳಲ್ಲಿ ಪೊಲೀಸ್ ಸಿಬ್ಬಂದಿ ಸದಾ ಬೀಟ್ ಇರಬೇಕು. ಹೀಗೆ ಸೂಕ್ಷ್ಮ ಏರಿಯಾಗಳ ಇನ್ಸ್ಪೆಕ್ಟರ್ಗಳಿಗೆ ಕಮೀಷನರ್ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆಯೋಜಕರು ಗಣೇಶ ಪ್ರತಿಷ್ಟಾಪನೆಗೆ ಬಿಬಿಎಂಪಿಯ ಏಕಗವಾಕ್ಷಿ ಅನುಮತಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಸದೃಡವಾಗಿ ಚಪ್ಪರ ಅಥವಾ ಶಾಮಿಯಾನ ಹಾಕತಕ್ಕದ್ದು ಎಂದು ತಿಳಿಸಿದೆ.
ಮಾರ್ಗಸೂಚಿಗಳು
1. ಶಾಮಿಯಾನ ಹೊರತುಪಡಿಸಿ ಬೇರೆಡೆ ಬ್ಯಾನರ್ ಬಂಟಿಂಗ್ಸ್ ಹಾಕಲು ಬಿಬಿಎಂಪಿ ಅನುಮತಿ ಕಡ್ಡಾಯ.
2. ವಿವಾದಿತ ಸ್ಥಳದಲ್ಲಿ ಮೂರ್ತಿ ಪ್ರತಿಷ್ಟಾಪನೆ ಮಾಡುವಂತಿಲ್ಲ.
3. ಆಯೋಜಕರ ಪರವಾಗಿ ಕಾರ್ಯಕರ್ತರು 24 ಗಂಟೆಯೂ ಮೇಲ್ವಿಚಾರಣೆ ನೋಡಿಕೊಳ್ಳತಕ್ಕದ್ದು.
4. ಮೇಲ್ವಿಚಾರಣೆ ನೋಡಿಕೊಳ್ಳುವವರ ಮಾಹಿತಿಯನ್ನ ಪೊಲೀಸ್ ಠಾಣೆಗೆ ನೀಡಬೇಕು.
5. ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಬಿಬಿಎಂಪಿ ಸುತ್ತೋಲೆಯಂತೆ ಸಿಸಿಟಿವಿ ಅಳವಡಿದತಕ್ಕದ್ದು.
6. ಸ್ಥಳದಲ್ಲಿ ಅಗ್ನಿ ನಂದಕಗಳು, ನೀರು ಅಥವಾ ಮರಳಿನ ವ್ಯವಸ್ಥೆ ಇರತಕ್ಕದ್ದು.
7. ಸುತ್ತಮುತ್ತ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇರದಂತೆ ಎಚ್ಚರ ವಹಿಸತಕ್ಕದ್ದು.
8. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಓರ್ವ ಎಲೆಕ್ಟ್ರಿಶಿಯನ್ ಇರತಕ್ಕದ್ದು.
9. ಸಮರ್ಪಕವಾಗಿ ಬೆಳಕು ಹಾಗೂ ವಿದ್ಯುತ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು.
10. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಆಗಮನ ನಿರ್ಗಮನ ವ್ಯವಸ್ಥೆ ಸೂಕ್ತವಾಗಿರಬೇಕು.
11. ಬ್ಯಾರಿಕೇಡ್ ಅಳವಡಿಸಿ ಸ್ವಯಂ ಸೇವಕರನ್ನ ಸ್ಥಳದಲ್ಲಿ ನಿಯೋಜಿಸತಕ್ಕದ್ದು.
12. ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆಗಳಾಗದಂತೆ ಆಯೋಜಕರು ಎಚ್ಚರ ವಹಿಸಬೇಕು.
13. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಲಾಗಿದೆ.
14. ಆಯೋಜಕರು, ಅಧ್ಯಕ್ಷರು, ಪದಾಧಿಕಾರಿಗಳ ಹೆಸರು, ವಿಳಾಸ, ನಂಬರನ್ನು ಸ್ಥಳಿಯ ಠಾಣೆಗೆ ನೀಡಬೇಕು.
15. ಆಯೋಜಕರು, ಅಧ್ಯಕ್ಷರು, ಪದಾಧಿಕಾರಿಗಳ ಹೆಸರು, ವಿಳಾಸ, ನಂಬರನ್ನು ಸ್ಥಳದಲ್ಲಿ ಪ್ರದರ್ಶಿಸತಕ್ಕದ್ದು.
16. ಲೇಸರ್ ಪ್ರೊಜೆಕ್ಷನ್ ಮಾಡಲು ಅವಕಾಶವಿಲ್ಲ.
17. ಸೂಕ್ಷ್ಮ, ಅತಿಸೂಕ್ಷ್ಮ ಸ್ಥಳಗಳಲ್ಲಿ ಮೆರವಣಿಗೆ ಸಾಗುವಾಗ ಸಿಡಿಮದ್ದು, ಪಟಾಕಿಗಳನ್ನ ಸಿಡಿಸುವಂತಿಲ್ಲ.
18. ಕಾರ್ಯಕ್ರಮ ಆಯೋಜನೆಗಾಗಿ ಬಲವಂತದ ವಂತಿಗೆ ವಸೂಲಿ ಮಾಡಿದರೆ ಕಠಿಣ ಕಾನೂನು ಕ್ರಮ ತಗೆದುಕೊಳ್ಳಲಾಗುವುದು.
19. ಆಯೋಜಕರು, ಕಾರ್ಯಕರ್ತರನ್ನು ಗುರುತಿಸಲು ಅನುಕೂಲವಾಗುವಂತೆ ಶರ್ಟ್ ಅಥವಾ ಕ್ಯಾಪ್ ಧರಿಸಿರಬೇಕು.
20. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಕಡೆ ಪೊಲೀಸರಿಗೆ ಮಾಹಿತಿ ನೀಡಿ ಭದ್ರತೆ ಪಡೆಯಬೇಕು.
21. ವಿಸರ್ಜನಾ ಮೆರವಣಿಗೆ ನಿಗದಿತ ಸಂದರ್ಭದಲ್ಲಿ ನಡೆಯತಕ್ಕದ್ದು.
22. ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ತಂತಿ, ಮರದ ಕೊಂಬೆಗಳ ಬಗ್ಗೆ ಸೂಕ್ತ ಎಚ್ಚರ ವಹಿಸಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.