ಬೆಂಗಳೂರು: ಇಂದು(ಮಾರ್ಚ್ 7) ನಡೆಯುತ್ತಿರುವ ವಿಧಾನಪರಿಷತ್ನಲ್ಲಿ JDS ಸದಸ್ಯ ಭೋಜೇಗೌಡ ಸವಾಲು ಹಾಕಿದ್ದಾರೆ. ಎತ್ತಿನಹೊಳೆ ಯೋಜನೆ ಆದರೆ ನಾನು ನೇಣು ಹಾಕಿಕೊಳ್ಳುತ್ತೇನೆ. 22 ಸಾವಿರ ಕೋಟಿ ಖರ್ಚಾದರೂ ಯೋಜನೆ ಮುಗಿಸಲಾಗಲ್ಲ. 50 ಸಾವಿರ ಕೋಟಿ ಖರ್ಚು ಮಾಡಿದರೂ ನೀರು ಕೊಡಲಾಗಲ್ಲ. ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲಾಗಲ್ಲ, ಇದು ನನ್ನ ಸವಾಲ್ ಎಂದು ವಿಧಾನಪರಿಷತ್ನಲ್ಲಿ JDS ಸದಸ್ಯ ಭೋಜೇಗೌಡ ಸವಾಲು ಹಾಕಿದ್ದಾರೆ.
22 ಸಾವಿರ ಕೋಟಿ ಖರ್ಚಾದ್ರು ಈ ಯೋಜನೆ ಮುಗಿಸಲು ಸಾಧ್ಯವಿಲ್ಲ. 50 ಸಾವಿರ ಕೋಟಿ ಖರ್ಚು ಮಾಡಿದ್ರು ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಸಾಧ್ಯವಿಲ್ಲ. ಇದು ನನ್ನ ಚಾಲೆಂಜ್. ಎತ್ತಿನಹೊಳೆ ಯೋಜನೆ ಕೆಲವರ ಪಾಲಿಗೆ ಕಾಮಧೇನು ಆಗಿದೆ. ಯಾರು ಯಾರಿಗೆ ಇದು ಕಾಮಧೇನು ಅಂತ ನಮಗೆ ಗೊತ್ತಿದೆ. 50 ಸಾವಿರ ಕೋಟಿ ಖರ್ಚಾದರೂ ಯೋಜನೆ ಪೂರ್ಣ ಆಗಲ್ಲ. ಒಂದು ವೇಳೆ ಈ ಯೋಜನೆ ಆದ್ರೆ ನಾನು ನೇಣು ಹಾಕಿಕೊಳ್ತೀನಿ ಎಂದು ವಿಧಾನಪರಿಷತ್ನಲ್ಲಿ JDS ಸದಸ್ಯ ಭೋಜೇಗೌಡ ಸವಾಲ್ ಹಾಕಿದ್ದಾರೆ.
ಸದ್ಯ ವಿಧಾನಸಭೆ ಕಾರ್ಯ ಕಲಾಪ ಸಲಹಾ ಸಮಿತಿ ಸಭೆ ಅಂತ್ಯಗೊಂಡಿದ್ದು ಶುಕ್ರವಾರದವರೆಗೂ ಬಜೆಟ್ ಮೇಲೆ ಚರ್ಚೆ ನಡೆಯಲಿದೆ. ಸೋಮವಾರ ಬಜೆಟ್ ಮೇಲಿನ ಚರ್ಚೆಗೆ ಸರ್ಕಾರದಿಂದ ಉತ್ತರ ಬಳಿಕ ಇಲಾಖಾವಾರು ಚರ್ಚೆಗೆ ವಿಧಾನಸೌಧದಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ನಮ್ಮ ರಾಜ್ಯ ವಿದೇಶಿಗರ ಪಾಲಿಗೆ ಧರ್ಮಛತ್ರ ಅಲ್ಲ -ಗೃಹ ಸಚಿವ ಆರಗ ಜ್ಞಾನೇಂದ್ರ
ಕರ್ನಾಟಕದಲ್ಲಿಯೇ ಉಳಿದಿರುವ ವಿದೇಶಿಗರು ನಡೆಸುತ್ತಿರುವ ಡ್ರಗ್ಸ್ ದಂಧೆಯ ಬಗ್ಗೆ ವಿಧಾನ ಪರಿಷತ್ನಲ್ಲಿ ಸೋಮವಾರ ಚರ್ಚೆ ನಡೆಯಿತು. ವಿದೇಶಿಗರು ಮತ್ತು ಡ್ರಗ್ಸ್ ದಂಧೆಕೋರರ ಪಾಲಿಗೆ ನಮ್ಮ ದೇಶ ಧರ್ಮಛತ್ರ ಆಗಬಾರದು. ಇದನ್ನು ತಡೆಯಲು ರಾಜ್ಯ ಸರ್ಕಾರ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದೆ. ಪ್ರತಿ ಪೊಲೀಸ್ ಸ್ಟೇಷನ್ನಲ್ಲಿಯೂ ರಿಜಿಸ್ಟರ್ ನಿರ್ವಹಿಸಲು ಸೂಚಿಸಿದ್ದೇನೆ. ದೇಶದ ಏಕತೆ ಮತ್ತು ಭದ್ರತೆಯ ವಿಚಾರದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ. ನೈಜಿರಿಯಾ ಪ್ರಜೆಗಳು ಡ್ರಗ್ಸ್ ದಂಧೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಸಿಸಿಬಿ ಅಧಿಕಾರಿಗಳು ದಿನಕ್ಕೆ ಎರಡು ಮೂರು ದಾಳಿಗಳನ್ನು ನಡೆಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಬದಲಾಗಿ, ಡಿಟೆನ್ಷನ್ ಸೆಂಟರ್ಗಳೇ ಸಣ್ಣದಾಗುತ್ತಿವೆ. ನೈಜಿರಿಯಾ ಹೆಣ್ಣು ಮಕ್ಕಳನ್ನು ನಿಯಂತ್ರಿಸುವುದು ನಮ್ಮ ಪೊಲೀಸರಿಗೂ ಕಷ್ಟವಾಗುತ್ತಿದೆ. ಮಾದಕ ವಸ್ತು ನಿಯಂತ್ರಣ ಕಾಯ್ದೆಯಡಿ ಈವರೆಗೆ 8000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಡ್ರಗ್ಸ್ ಪಿಡುಗು ನಿಯಂತ್ರಣಕ್ಕೆ ಬರದಿದ್ದರೆ ಪೊಲೀಸರನ್ನೇ ಹೊಣೆಯಾಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಚರ್ಚೆ ಆರಂಭಿಸಿದ್ದ ಸದಸ್ಯ ಸಲೀಂ ಅಹ್ಮದ್, ಬಹುತೇಕ ಅಕ್ರಮ ವಿದೇಶಿಗರು ಡ್ರಗ್ಸ್ ಪೆಡ್ಲರ್‌ಗಳಾಗಿದ್ದಾರೆ; ವೀಸಾ ಅವಧಿ ಮುಗಿದವರನ್ನು ತಕ್ಷಣ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಇದು ಬೆಂಗಳೂರಿಗೆ ಮಾತ್ರ ಸೀಮಿತ ಆಗಿಲ್ಲ, ಹುಬ್ಬಳ್ಳಿ ಶಿವಮೊಗ್ಗಕ್ಕೂ ಹರಡಿದೆ ಎಂದರು.
ಶೂನ್ಯ ವೇಳೆಯಲ್ಲಿ ಕಾಸರಗೋಡು ಶಾಲೆಗೆ ಮಲಯಾಳಂ ಶಿಕ್ಷಕರ ನೇಮಕ ವಿಚಾರ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್, ಕನ್ನಡ ಶಿಕ್ಷಕರ ನೇಮಕ ಮಾಡುವಂತೆ ಕೇರಳ ಹೈಕೋರ್ಟ್ ಆದೇಶವಿದ್ದರೂ ಅಲ್ಲಿ ಮಲಯಾಳಂ ಶಿಕ್ಷಕರನ್ನು ನೇಮಿಸಲಾಗಿದೆ. ಅಲ್ಲಿ ಶೀಘ್ರ ಕನ್ನಡ ಶಿಕ್ಷಕರ ನೇಮಕಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಗಡಿಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೇರಳ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸರ್ಕಾರಕ್ಕೆ ಸಲೀಂ ಅಹ್ಮದ್ ಒತ್ತಾಯಿಸಿದರು. ಚರ್ಚೆ ವೇಳೆ ಸರ್ಕಾರದ ಪರವಾಗಿ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ಕುಮಾರ್, ‘ಈ ಕುರಿತು ಕೇರಳ ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಅಲ್ಲಿನ ಮಕ್ಕಳ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದರು.
ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನಿಂದ ಕೊಲೆಯಾದ ದಿನೇಶ್ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಆಗ್ರಹಿಸಿದರು. ಹರ್ಷ ಕೊಲೆಯಾದಾಗ ₹ 25 ಲಕ್ಷವನ್ನು ಸರ್ಕಾರವೇ ಕೊಟ್ಟಿದೆ. ಆದರೆ ದಿನೇಶ್ನನ್ನು ಬಿಜೆಪಿ ಕಾರ್ಯಕರ್ತ ಕೊಂದರೂ ಪರಿಹಾರ ಕೊಟ್ಟಿಲ್ಲ ಎಂದು ದೂರಿದರು. ‘ಯಾರೇ ತಪ್ಪು ಮಾಡಿದರೂ ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಕ್ರಮ ತೆಗೆದುಕೊಳ್ಳುತ್ತೇವೆ. ಇಲಾಖೆಯಿಂದ ಕೊಡಬಹುದಾದ ಪರಿಹಾರವನ್ನು ಕೊಡುತ್ತೇವೆ’ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: Poco M4 Pro: ಹೊಸ ಫೋನ್ ಖರೀದಿಸುವವರು ಇಲ್ಲಿ ನೋಡಿ: ಕೇವಲ 13,999 ರೂ. ಗೆ ಸೇಲ್ ಕಾಣುತ್ತಿದೆ ಪೋಕೋ M4 ಪ್ರೊ
Published On - 3:11 pm, Mon, 7 March 22