ನಾಲ್ಕು ಬಾರಿ ಗೆದ್ದಿದ್ದೇನೆ, ಆಪರೇಷನ್ ಕಮಲಕ್ಕೆ ಬಲಿಯಾಗಿಲ್ಲ, ಪಕ್ಷ ನಿಷ್ಠೆಗೆ ಸಚಿವ ಸ್ಥಾನ ಕೊಡಿ : ಭದ್ರಾವತಿ ಶಾಸಕ ಸಂಗಮೇಶ್ ಬೇಡಿಕೆ
ಕೆ.ಹೆಚ್.ಮುನಿಯಪ್ಪ ಕೇಂದ್ರ ಸಚಿವರ ಸ್ಥಾನ ಅನುಭವಿಸಿದ ಬಳಿಕನೂ ರಾಜ್ಯದಲ್ಲಿ ಮಂತ್ರಿ ಸ್ಥಾನ ಪಡೆದ ಬಗ್ಗೆ ಪ್ರತಿಕ್ರಿಯಿಸುತ್ತಾ, ಅಂತಹವರು ಹಿರಿಯರಿದ್ದಾರೆ. ಅವರೇ ಅರ್ಥಮಾಡಿಕೊಳ್ಳಬೇಕು ಎಂದು ಭದ್ರಾವತಿ ಕೈ ಶಾಸಕ ಬಿ.ಕೆ.ಸಂಗಮೇಶ್ ಸೂಕ್ಷ್ಮವಾಗಿ ಹೇಳಿದರು.
ಬೆಂಗಳೂರು: ನಾಲ್ಕು ಬಾರಿ ಶಾಸಕನಾಗಿ ಗೆದ್ದು ಬರುತ್ತಿರುವ ನನಗೆ ಹಿರಿತನ ನೋಡಿ ಮಂತ್ರಿ ಸ್ಥಾನ ನೀಡಬೇಕು ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಒತ್ತಾಯಿಸಿದರು. ಬೆಂಗಳೂರಿನ ತಮ್ಮ ಕಚೇರಿ ಬಳಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಡಬೇಕೆಂದು ನಾನು ಡಿಕೆಶಿ, ಸಿದ್ದರಾಮಯ್ಯ ನವರಿಗೆ ಮನವಿ ಮಾಡುತ್ತೇನೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಾಲ್ಕನೇ ಬಾರಿ ಜಯಗಳಿಸಿದ್ದೇನೆ. ಕಾಗೋಡು ತಿಮ್ಮಪ್ಪ ನಂತರ ನಾನೊಬ್ಬನೇ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಬಾರಿ ಜಯಗಳಿಸಿರೋದು. ಸ್ವಾತಂತ್ರ್ಯ ಬಂದಾಗಿನಿಂದ ಭದ್ರಾವತಿಯ ಯಾವುದೇ ಶಾಸಕರಿಗೆ ಸಚಿವ ಸ್ಥಾನ ಸಿಗಲಿಲ್ಲ. ಬಿಜೆಪಿಯಿಂದ ಸಾಕಷ್ಟು ಆಫರ್ ಬಂದ್ರು ಕೂಡ, ಆಪರೇಷನ್ ಕಮಲದ ವೇಳೆ ಕೋಟಿ ಕೋಟಿ ಆಫರ್ ಕೊಟ್ಟು, ಸಚಿವ ಸ್ಥಾನದ ಆಮಿಷ ಒಡ್ಡಿದರೂ ಸಹ ನಾನು ಪಕ್ಷ ಬಿಟ್ಟು ಹೋಗಲಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಜನಾಕ್ರೋಶ ಸಮಾವೇಶಕ್ಕೆಂದು ಶಿವಮೊಗ್ಗಕ್ಕೆ ಬಂದಿದ್ದಾಗ ಸಂಗಮೇಶ್ ಅವರನ್ನ ಗೆಲ್ಲಿಸಿ, ಸಚಿವರನ್ನಾಗಿ ಮಾಡುತ್ತೇನೆ ಅಂದಿದ್ರು. ಜನ ಮತ ಹಾಕಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಕೊಟ್ಟಿಲ್ಲ ಅಂದ್ರೆ ಏನು ಮಾಡೋದಕ್ಕೆ ಆಗೋದಿಲ್ಲ. ಆದರೆ ನಾನು ಬಿಜೆಪಿಯ ಭದ್ರಕೊಟೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯಲ್ಲಿ ಗೆದ್ದಿದ್ದೇನೆ. ಜಿಲ್ಲಾವರು ವಿಷಯದಲ್ಲಿ ನಾನು ಹಿರಿಯನಿದ್ದೇನೆ. ಶಿವಮೊಗ್ಗ ದಲ್ಲಿ ಪ್ರಾಮಾಣಿಕ ವಾಗಿ ನಾಲ್ಕು ಬಾರಿ ಗೆದ್ದಿದ್ದೇನೆ. ಇದರಿಂದ ನನಗೆ ಸಚಿವ ಸ್ಥಾನದ ಜೊತೆ ಶಿವಮೊಗ್ಗ ಉಸ್ತುವಾರಿ ನೀಡಬೇಕು. ನನಗೆ ಸಚಿವ ಸ್ಥಾನ ಸಿಗದಿದ್ದರೂ ಪಕ್ಷದಲ್ಲೇ ಇರುತ್ತೇನೆ. ನನ್ನ ಹಿರಿತನ ಪರಿಗಣಿಸಿ ಕೊಡುವ ವಿಶ್ವಾಸವಿದೆ. ನನಗೆ ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಕೊಡ್ತೇನೆ ಅಂತಾ ಭರವಸೆ ನೀಡಿದ್ದಾರೆ. ನನಗೆ ಸಚಿವ ಸ್ಥಾನ ಕೊಟ್ರೆ ಮುಂಬರುವ ಪಾರ್ಲಿಮೆಂಟ್ ಚುನಾವಣೆ ಗೆ ಅನುಕೂಲ ಆಗುತ್ತದೆ ಎಂದರು.
ಮಧು ಬಂಗಾರಪ್ಪ ಸಚಿವ ಸ್ಥಾನ ಕೇಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದು ಅವರಿಗೆ ಬಿಟ್ಟ ವಿಚಾರ. ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ನಾನು ನಾಲ್ಕು ಬಾರಿ ಕಾಂಗ್ರೆಸ್ ನಿಂದ ಗೆದ್ದಿದ್ದೇನೆ. ಅವರು ಈ ಮುಂಚೆ ಜೆಡಿಎಸ್ ನಿಂದ ಗೆದ್ದಿದ್ದರೆ, ಈ ಬಾರಿ ಕಾಂಗ್ರೆಸ್ ನಿಂದ ಗೆದ್ದಿದ್ದಾರೆ. ಅವರೂ ಯೋಚನೆ ಮಾಡಲಿ. ಮಂತ್ರಿಗಿರಿ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಹಿರಿತನ ಆಧಾರದಲ್ಲಿ ನನಗೆ ಮಂತ್ರಿ ಸ್ಥಾನ ನೀಡಬೇಕು. ಹೈ ಕಮಾಂಡ್ ತೀರ್ಮಾನಕ್ಕೆ ನಾನು ಬದ್ದ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಸಚಿವ ಸ್ಥಾನ ಸಿಗದ ಸೀನಿಯರ್ ಗಳಿಗೆ ಅವಕಾಶ ಕೊಡಿ:
ಮೂರು ನಾಲ್ಕು ಬಾರಿ ಗೆದ್ದವರಿಗೆ ಈ ಬಾರಿ ಅವಕಾಶ ನೀಡಬೇಕು. ಸಚಿವ ಸ್ಥಾನ ಗಿಟ್ಟಿಸಿಕೊಳ್ಳುತ್ತಿರುವ ಹಿರಿಯರ ಬದಲು ಮೂರು ನಾಲ್ಕು ಗೆದ್ದು ಬರುತ್ತಿರುವ ಹೊಸಬರಿಗೆ ಮಂತ್ರಿ ಸ್ಥಾನ ನೀಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.
ಕೆ.ಹೆಚ್.ಮುನಿಯಪ್ಪ ಕೇಂದ್ರ ಸಚಿವರ ಸ್ಥಾನ ಅನುಭವಿಸಿದ ಬಳಿಕನೂ ರಾಜ್ಯದಲ್ಲಿ ಮಂತ್ರಿ ಸ್ಥಾನ ಪಡೆದ ಬಗ್ಗೆ ಪ್ರತಿಕ್ರಿಯಿಸುತ್ತಾ, ಅಂತಹವರು ಹಿರಿಯರಿದ್ದಾರೆ. ಅವರೇ ಅರ್ಥಮಾಡಿಕೊಳ್ಳಬೇಕು ಎಂದು ಶಾಸಕ ಬಿ.ಕೆ.ಸಂಗಮೇಶ್ ಹೇಳಿದರು.