ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತು; ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಿ.ಕೆ.ಹರಿಪ್ರಸಾದ್ ಆಕ್ರೋಶ
ನನಗೆ ಸಿಎಂ ಆಯ್ಕೆ ಮಾಡೋದು, ಕೆಳಗೆ ಇಳಿಸೋದು ಬಹಳ ಚನ್ನಾಗಿ ಗೊತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ಸಮುದಾಯದ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ಬೆಂಗಳೂರು, ಜುಲೈ 22: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್ಸಿ ಬಿ.ಕೆ.ಹರಿಪ್ರಸಾದ್(B K Hariprasad) ಮತ್ತೆ ಆಕ್ರೋಶ ಹೊರ ಹಾಕಿದ್ದಾರೆ. ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ. ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ನಾನು ಮಂತ್ರಿ ಆಗೋದು ಬಿಡೋದು ಬೇರೆ ಪ್ರಶ್ನೆ. ಐವರನ್ನು ಸಿಎಂ ಆಯ್ಕೆ ಮಾಡುವುದರಲ್ಲಿ ನಾನು ಪಾತ್ರವಹಿಸಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಬಿ.ಕೆ.ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ. ನನಗೆ ಸಿಎಂ ಆಯ್ಕೆ ಮಾಡೋದು, ಕೆಳಗೆ ಇಳಿಸೋದು ಬಹಳ ಚನ್ನಾಗಿ ಗೊತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಸಮುದಾಯದ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಕರ್ನಾಟಕದಲ್ಲಿ ರಾಜಕೀಯವಾಗಿ ಈ ಸಮುದಾಯದವರು ಮುಂದೆ ಬರುತ್ತಿಲ್ಲ. ಏನೇ ಪ್ರಯತ್ನ ಮಾಡಿದ್ರು ಆಗುತ್ತಿಲ್ಲ. ಅವಕಾಶ ವಂಚಿತರಾಗುತ್ತಿರುವುದು ನೋಡಿದರೆ ಯಾರದ್ದೊ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಅನಿಸುತ್ತದೆ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಎಲ್ಲರ ಒಟ್ಟಿಗೆ ಸೇರಬೇಕು ಎಂದು ನಾವು 2013 ರಲ್ಲಿ ಬೆಂಬಲ ಕೊಟ್ಟಿದ್ದೇವು. ಬೆಂಬಲ ಕೊಟ್ಟ ಬಳಿಕ ನಾವು ಕಾಂಗ್ರೆಸ್ ಆಗಲಿ, ಮಂತ್ರಿಗಳಾಗಲಿ ಯಾರ ಬಳಿಯೂ ಕೈ ಚಾಚುವುದಿಲ್ಲ. ಹಿಂದುಳಿದ ವರ್ಗಕ್ಕೆ ಯಾವ ರೀತಿ ಅನುಕೂಲ ಮಾಡಬೇಕು ಎಂದ ಯೋಚನೆ ಮಾಡ್ತೇವೆ. ಸ್ವಾರ್ಥಕ್ಕೆ ಯಾವುದು ಕೇಳಲ್ಲ ಎಂದು ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: Bengaluru News: ಟ್ರಾಫಿಕ್ ಸಮಸ್ಸೆ, ಆಕ್ಸಿಡೆಂಟ್ಗೂ ಕೂಡ ಕರೆ ಮಾಡಿ 112ಗೆ
ಉಡುಪಿ ಜಿಲ್ಲೆಯ ಕಾರ್ಕಳ ಕೋಟಿ ಚನ್ನಯ್ಯ ಪಾರ್ಕ್ ಗೆ 5 ಕೋಟಿ ಕೊಡಿ ಎಂದು ಕೇಳಿದ್ದೆವು. ಸಿದ್ದರಾಮಯ್ಯ ಕೊಡುತ್ತೇವೆ ಎಂದು ಕೊಟ್ಟಿಲ್ಲ. ನನಗೆ ಅವರು ರಾಜಕೀಯವಾಗಿ ಏನು ಸಹಾಯ ಮಾಡಲು ಆಗಲ್ಲ. ನಾನೇ ಅವರಿಗೆ ಸಹಾಯ ಮಾಡುತ್ತೇನೆ. ಮಂಗಳೂರು ವಿವಿಯಲ್ಲಿ ಗುರುಪೀಠ ಸ್ಥಾಪನೆಗೆ ನಾನು ಎಂಪಿ ಆದಾಗ ಹಣ ಕೊಟ್ಟಿದೆ. ಕಟ್ಟಡ ಅರ್ಧಕ್ಕೆ ನಿಂತಿದೆ ಹಣ ಕೊಟ್ಟಿಲ್ಲ, ಆದರೆ ಅವರ ಸಮಾಜಕ್ಕೆ ಎಷ್ಟು ಕೊಟ್ಟಿದ್ದಾರೆ ಎಂದು ಸ್ವಾಮೀಜಿಗಳು ನೋಡಲಿ. ಹಿಂದುಳಿದ ವರ್ಗ ಎಂದರೆ ಒಂದು ಜಾತಿ ಮಾತ್ರವಲ್ಲ. ಜಾತಿ ಬೇರೆ, ವರ್ಗ ಬೇರೆ, ನಾವು ವರ್ಗದಲ್ಲಿ ಬರುತ್ತೇವೆ. ವರ್ಗದಲ್ಲಿ ಬರುವ ಎಲ್ಲರಿಗೂ ಸಮಾನ ಹಕ್ಕು ಪಡೆಯಬೇಕು. 11 ಕ್ಷೇತ್ರಗಳಲ್ಲಿ ಈಡಿಗ, ಬಿಲ್ಲವ, ದೀವರು ನಿರ್ಣಯಕವಾಗಿದ್ದೇವೆ. ನಾನು ಸಹ ಎಲೆಕ್ಷನ್ ಕಮಿಟಿಯಲ್ಲಿ ಇದ್ದೆ, ನಾಲ್ಕು ಜನ ಟಿಕೆಟ್ ವಂಚಿತರಾದರು. 2 ಬಿಲ್ಲವ, 1 ಈಡಿಗ, 1 ದೀವರು ವಂಚಿತರಾದರು. ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಅಲ್ಪಸಂಖ್ಯಾತರಿಗೆ ಕೊಟ್ಟಿದ್ದಾರೆ. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ನೀವು ಮುಂದೆ ಬರಬೇಕಾದರೆ ಅಲ್ಪಸಂಖ್ಯಾತರ ವಿರುದ್ಧ ಧ್ವನಿ ಎತ್ತಬಾರದು. ಅಲ್ಪಸಂಖ್ಯಾತರನ್ನು ಮುಂದಿಟ್ಟು ನಮಗೆ ಟಿಕೆಟ್ ವಂಚಿತರನ್ನಾಗಿ ಮಾಡುತ್ತಾರೆ. ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು, ಕುರುಬರು ಸಿಎಂ ಸ್ಥಾನಕ್ಕೆ ಹೋರಾಟ ಮಾಡ್ತಾರೆ. ಅವರು ಅಧಿಕಾರಕ್ಕೆ ಬರಬೇಕಾದರೆ ಅವರ ಸ್ಥಾನಗಳನ್ನು ಬಿಟ್ಟುಕೊಡಲಿ. ನಮ್ಮನ್ನು ಯಾಕೆ ಕಟ್ ಮಾಡ್ತಾರೆ, ನಾವು ಹೆಚ್ಚು ಇರುವ ಜಾಗದಲ್ಲಿ ಅವಕಾಶ ಕೊಡಬೇಕು. ನಾವೇನು ಮಂಡ್ಯ, ಬೆಳಗಾವಿಯಲ್ಲಿ ಕೊಡಿ ಎಂದು ಕೇಳಲ್ಲ. ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡುಗು ಕಡೆ ನಮ್ಮವರು ನಿರ್ಣಾಯಕ.
ಮಂಗಳೂರಿನಲ್ಲಿ 600 ಜನ ಜೈಲಿಗೆ ಹೋದರು, ಅವರ ಪೈಕಿ 400 ಜನ ಬಿಲ್ಲವರು
ನಾನು ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ. ನಾನು ಎಂಪಿ ಇದ್ದಾಗ ಈಡಿಗ ಸಮುದಾಯ ಭವನಕ್ಕೆ, ಶಾಲೆ, ವಸತಿ ಶಾಲೆ ಹಣ ಕೊಟ್ಟಿದ್ದೇನೆ. ನಾರಾಯಣಗುರು ಅಭಿವೃದ್ಧಿ ನಿಗಮ ಮಾಡುತ್ತೇವೆ ಎಂದು ಘೋಷಣೆ ಮಾಡಿದರು, ಅದಕ್ಕೆ ಹಣ ಕೊಟ್ಟಿಲ್ಲ. ನಾವು ಒತ್ತಡ ತಂದಿದ್ದೇವೆ, ಇದು ನಮಗೆ ಒಳ್ಳೆಯದಾಗುವ ಪ್ರಶ್ನೆಯಲ್ಲ. ಮುಂದಿನ ಪೀಳಿಗೆಗೆ ಒಳ್ಳೆಯದಾಗಬೇಕು, ನೂರು ವರ್ಷಗಳ ಹಿಂದೆ ಹೋಗಿದೆ ಪೀಳಿಗೆ. ಕೆಲವರು ಸ್ವಾಮೀಜಿಗಳ ಬಳಿ ಹೇಳ್ತಾರೆ ಈಗಾಗಲೇ ಒಬ್ಬರು ಆಗಿದ್ದಾರಲ್ಲ, ಇನ್ನೊಬ್ಬರು ಯಾಕೆ ಅಂತ. ಮಂಗಳೂರಿನಲ್ಲಿ 600 ಜನ ಜೈಲಿಗೆ ಹೋದರು, ಅವರ ಪೈಕಿ 400 ಜನ ಬಿಲ್ಲವರು. ಯಾಕೆ ಜೈಲಿಗೆ ಕಳಿಸಿದ್ರಂತೆ, ಯಾರದ್ದೊ ತೆವಲಿಗೆ ಕೊಲೆ ಮಾಡೋದು, ಕೊಲೆ ಆಗೋದು ನಾರಾಯಣಗುರು ಸಿದ್ದಾಂತ ನಾವು ಮರೆತಿದ್ದೇವೆ. ನಾವು ಸಂಘಟಿತರಾಬೇಕು, ಇಲ್ಲ ಅಂದರೆ ಕಡೆಗಣಿಸುತ್ತಾರೆ. ಹಿಂದೆ ಜಾಲಪ್ಪ ಅವರಿಂದ ಎಲ್ಲಾ ಸಹಾಯ ಪಡೆದುಕೊಂಡರು. ಅವರ ಮೊಮ್ಮಗನಿಗೆ ಟಿಕೆಟ್ ಕೊಡಬೇಕಾದರೆ, ಜಾಲಪ್ಪ ಅವರ ಮೊಮ್ಮಗನೆ ಅಲ್ಲ ಎನ್ನುವ ಮಟ್ಟಕ್ಕೆ ಚರ್ಚೆ ಮಾಡಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.
1985 ರವರೆಗೆ ಅಬಕಾರಿ ಗುತ್ತಿಗೆದಾರರು ಸರ್ಕಾರ ಮಾಡುತ್ತಿದ್ದರು. 2008 ರಲ್ಲಿ ಯಡಿಯೂರಪ್ಪ ಅವರು ಸಾರಾಯಿ ಬ್ಯಾನ್ ಮಾಡಿದರು. ಬೇರೆ ಜಾತಿಯ ಕಸುಬುಗೆ ಕೈ ಹಾಕಿದ್ದರೇ ಇಷ್ಟೊತ್ತಿಗೆ ರಕ್ತಪಾತ ಅಗಿರೋದು ನಾವು ಸುಮ್ಮನೆ ಪಾನಿಪುರಿ, ತರಕಾರಿ ಮಾರಾಟ ಮಾಡ್ತಾ ಇದ್ದೇವೆ. ಬಿಜೆಪಿಯವರು ಇದ್ದರೆ ತಪ್ಪು ತಿಳಿಯಬೇಡಿ ಪಕ್ಷದ ವಿರುದ್ಧ ಮಾತಾಡುತ್ತಿಲ್ಲ. ಬಹಳ ವ್ಯವಸ್ಥೆಯಾಗಿ ತುಳಿಯುವ ಪ್ರಯತ್ನ ಮಾಡ್ತಾರೆ. ನಾನು ಮಂತ್ರಿ ಆಗೋದು ಬಿಡುದೋ ಬೇರೆ ಪ್ರಶ್ನೆ. 5 ಸಿಎಂ ಆಯ್ಕೆ ಮಾಡುವುದರಲ್ಲಿ ನಾನು ಪಾತ್ರವಹಿಸಿದ್ದೇನೆ. ಛತ್ತೀಸ್ಗಢದ ಸಿಎಂ ನಮ್ಮ ನೆಂಟರು ಅಲ್ಲ, ಹಿಂದುಳಿದ ವರ್ಗದವರನ್ನು ಸಿಎಂ ಮಾಡಿದ್ದೇನೆ. ಸಿಎಂ ಮಾಡೋದು, ಕೆಳಗೆ ಇಳಿಸೋದು ನನಗೆ ಚನ್ನಾಗಿ ಗೊತ್ತಿದೆ. ನಾನು ಯಾರ ಬಳಿಯೂ ಬೀಕ್ಷೆ ಬೇಡಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ಇಲ್ಲ ಅಂದಿದ್ದರೇ ಬೆಂಗಳೂರಿನಲ್ಲಿ 49 ವರ್ಷ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ಓಡಿಸಿ ಬಿಡುತ್ತಿದ್ದರು. ಅದರಲ್ಲಿ ನಮ್ಮವರು ಇರ್ತಾರೆ. ಶೋಷಣೆಗೆ ಒಳಗಾಗಬಾರದು ಎಂದು ಸಭೆಯಲ್ಲಿ ಬಿಕೆ ಹರಿಪ್ರಸಾದ್ ಕಿವಿ ಮಾತು ಹೇಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ