ಹಿಜಾಬ್ ಹೆಸರಿನಲ್ಲಿ ಧರ್ಮಾಂಧತೆಯನ್ನು ವಿರೋಧಿಸುತ್ತೇನೆ: ಸಚಿವ ಶ್ರೀನಿವಾಸ ಪೂಜಾರಿ
ಇಡೀ ದೇಶಕ್ಕೆ ಕಿರುಕುಳ ಮಾಡಬೇಕು, ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಕಾರಣಕ್ಕೆ ಇಂಥ ಬೆಳವಣಿಗೆಗಳು ನಡೆದಿವೆ. ಕಾಶ್ಮೀರದಲ್ಲಿ ಇಂಥ ಚರ್ಚೆ ಆಗಬೇಕು. ದೇಶದ ಭದ್ರತೆಗೆ ತೊಂದರೆ ಆಗಬೇಕು ಎನ್ನುವ ಹುನ್ನಾರ ಇದರಲ್ಲಿ ಇದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್(Hijab), ಕೇಸರಿ ಶಾಲು ವಿವಾದಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಸಚಿವ ಶ್ರೀನಿವಾಸ ಪೂಜಾರಿ(kota Srinivas Poojary) ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮಲ್ಲಿ ಸ್ಪಷ್ಟತೆ ಇದೆ. ಯಾವ ಗೊಂದಲವೂ ಇಲ್ಲ. ಒಂದೂವರೆ ವರ್ಷದಿಂದ ಶಾಲಾ ಮಕ್ಕಳಿಗೆ(Childrens) ಸಮಸ್ಯೆ ಇರಲಿಲ್ಲ. ಈಗ ಸಮಸ್ಯೆಯಾಗಿದೆ. ಹಿಜಾಬ್ ಹೆಸರಿನಲ್ಲಿ ಧರ್ಮಾಂಧತೆಯನ್ನು ವಿರೋಧಿಸುತ್ತೇನೆ. ಇದನ್ನು ಹೊರಗಿನ ಮತಾಂಧ ಶಕ್ತಿಗಳು ಮಾಡುತ್ತಿರುವುದು. ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಾಗಿ ಕೇಸರಿ ಶಾಲು ಧರಿಸಿದ್ದಾರೆ. ಒಂದು ತಪ್ಪಾದರೆ ಇನ್ನೊಂದೂ ತಪ್ಪಲ್ಲವೇ. ಏನೇ ಆಗಲಿ ಶಿಕ್ಷಣ ಸಂಸ್ಥೆಗಳಲ್ಲಿ ಗೊಂದಲ ಇರಬಾರದು ಎಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಇಂಥ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತಿಳಿಗೊಳಿಸಬೇಕಿತ್ತು. ಆದರೆ ಮತಗಳ ಮೇಲೆ ಕಣ್ಣಿಟ್ಟು ರಾಜಕೀಯ ಹೇಳಿಕೆ ಕೊಡುತ್ತಿದ್ದಾರೆ. ಸರ್ಕಾರವನ್ನು ಚುಚ್ಚುವ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯ ಮನಸ್ಸಲ್ಲೂ ಹಿಜಬ್ ಧರಿಸಿ ಶಾಲೆಗೆ ಬರುವುದು ತಪ್ಪು ಎಂಬ ಭಾವನೆ ಇರಬಹುದು. ಇಡೀ ದೇಶಕ್ಕೆ ಕಿರುಕುಳ ಮಾಡಬೇಕು, ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಕಾರಣಕ್ಕೆ ಇಂಥ ಬೆಳವಣಿಗೆಗಳು ನಡೆದಿವೆ. ಕಾಶ್ಮೀರದಲ್ಲಿ ಇಂಥ ಚರ್ಚೆ ಆಗಬೇಕು. ದೇಶದ ಭದ್ರತೆಗೆ ತೊಂದರೆ ಆಗಬೇಕು ಎನ್ನುವ ಹುನ್ನಾರ ಇದರಲ್ಲಿ ಇದೆ ಎಂದು ಹೇಳಿಕೆ ನೀಡಿದ್ದಾರೆ.
ಕರಾವಳಿಯಲ್ಲಿ ಬಿಜೆಪಿಯವರು ಹಿಜಾಬ್ ವಿವಾದ ಹುಟ್ಟು ಹಾಕಿದ್ದಾರೆ: ಜಯನಗರ ಶಾಸಕಿ ಸೌಮ್ಯ ರೆಡ್ಡಿ
ಕರಾವಳಿಯಲ್ಲಿ ಬಿಜೆಪಿಯವರು ಹಿಜಾಬ್ ವಿವಾದ ಹುಟ್ಟು ಹಾಕಿದ್ದಾರೆ. ದೆಹಲಿಯಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಹೊರಗಿಡಲಾಗಿತ್ತು. ಅದಕ್ಕೆ ವಿರುದ್ಧವಾಗಿ ಕರಾವಳಿಯಲ್ಲಿ ಬಜರಂಗದಳದವರೇ ಪ್ರತಿಭಟನೆ ಮಾಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಹಿಜಾಬ್ ವಿಚಾರ ಮುನ್ನೆಲೆಗೆ ಬಂದಿದೆ. ಈ ಸೂಕ್ಷ್ಮ ವಿಚಾರ ಅರ್ಥ ಮಾಡಿಕೊಂಡರೆ ಅದರ ಹಿಂದಿನ ಅಜೆಂಡಾ ಗೊತ್ತಾಗುತ್ತದೆ. ವಿದ್ಯಾರ್ಥಿನಿಯರನ್ನು ಗೇಟ್ ಹೊರಗಡೆ ನಿಲ್ಲಿಸಿದ ಪ್ರಾಂಶುಪಾರನ್ನು ಕೂಡಲೇ ಅಮಾನತ್ತು ಮಾಡಬೇಕು. ಇದು ಬಿಜೆಪಿ ನಡೆಸುತ್ತಿರುವ ಕುತಂತ್ರ ಎಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ ಕೂಡ ಹಿಜಾಬ್ ಹಾಕಿಕೊಂಡಿದ್ದಾರೆ: ಸಿ.ಎಂ ಇಬ್ರಾಹಿಂ
ಮೈಸೂರು ಮಹಾರಾಜ ಕಾಲದಿಂದಲೂ ಜಾರಿಯಲ್ಲಿದೆ. ಹೆಣ್ಣು ಮಕ್ಕಳು ತೆರಳುವ ಚಕ್ಕಡಿ ಗಾಡಿಗೂ ಪರದೆ ಹಾಕಿರುವ ಇತಿಹಾಸ ಇದೆ. ಇದು ಕೋವಿಡ್ ಸಮಯದಲ್ಲಿ ಹಾಕಿಕೊಳ್ಳುವಂತೆ. ನಾನು ಹಾಕೊಂಡಿದ್ದೀನಿ. ಸಿಎಂ ಬೊಮ್ಮಾಯಿ ಕೂಡ ಹಿಜಾಬ್ ಹಾಕಿಕೊಂಡಿದ್ದಾರೆ. ಇನ್ನು ಆ ಪ್ರಾಂಶುಪಾಲರು ಪಾಠ ಮಾಡುವವರು. ಅವರಿಗೆ ಬುದ್ದಿ ಇದೆಯಾ? ಈ ಹಿಂದೆ ಪೋಲಿಸರಿಗೂ ಸಮವಸ್ತ್ರ ಹಾಕಿಸಿ ಬಿಟ್ಟರು. ಎಲ್ಲಿಗೆ ತೆಗೆದುಕೊಂಡು ಹೋಗುತ್ತಾ ಇದಿರಿ? ಅಧಿಕಾರಿಗಳಿಗೆ ಹೇಳುತ್ತಾ ಇದ್ದೀನಿ ಹುಷಾರ್. ಬಿಜೆಪಿ ಇದೇ ಕೊನೆ ಬಾರಿ ಗಮನಿಸಿ , ಗಾಳಿ ಬದಲಾಗುತ್ತಿದೆ ಎಂದು ಮೈಸೂರಿನಲ್ಲಿ ಸಿ. ಎಂ. ಇಬ್ರಾಹಿಂ ಹೇಳಿದ್ದಾರೆ.
ಪರಿಸ್ಥಿತಿ ಕೈ ಮೀರುವ ಮುನ್ನ ಸರಿ ಪಡಿಸಿ: ಸಿಎಂಗೆ ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಪತ್ರ
ಮುಸ್ಲಿಂ ಹೆಣ್ಣು ಮಕ್ಕಳು ತಲೆಗೆ ಹಿಜಾಬ್ ಧರಿಸುವುದು ನಿಷೇಧ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ತನ್ವೀರ್ ಸೇಠ್ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಉಡುಪಿ ಕಾಲೇಜಿನ ಈ ಆದೇಶ ವಿವಾದದ ಸುಳಿಯಲ್ಲಿದೆ. ಅಲ್ಪಸಂಖ್ಯಾತ ಮಕ್ಕಳು ತಮ್ಮ ಮಾತೃ ಭಾಷೆಯಲ್ಲಿ ಮಾತನಾಡುವುದನ್ನು ನಿಷೇಧಿಸಿರುವುದು ಆಕ್ಷೇಪಣಿಯ. ಇಸ್ಲಾಂನಲ್ಲಿ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದು, ಸಿಖ್ಖರಲ್ಲಿ ಪೇಟ ಧರಿಸುವುದು, ಕ್ರೈಸ್ತರಲ್ಲಿ ಸನ್ಯಾಸಿ ದೀಕ್ಷೆ ಪಡೆದ ಹೆಣ್ಣು ಮಕ್ಕಳು ಸ್ಕಾರ್ಫ್ ಧರಿಸುವುದು ಹಿಂದಿನ ಕಾಲದಿಂದಲೂ ನಡೆದು ಬರುತ್ತಿರುವ ಪದ್ಧತಿ. ಇದಕ್ಕೆ ಯಾವುದೇ ನಿಷೇಧವಾಗಲೀ ತಡೆಯಾಗಲೀ ಇಲ್ಲಿಯವರೆಗೂ ವಿಧಿಸಿರುವುದಿಲ್ಲ. ಈ ವಿವಾದವನ್ನು ಅನೇಕ ಸಂಘಟನೆಗಳನ್ನು ವೈಭೀಕರಿಸಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದೆಗೆಡಿಸಿ ಲಾಭ ಪಡೆಯಲು ಯತ್ನಿಸಿವೆ. ನಾನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವನಾಗಿದ್ದಾಗ ಹೆಣ್ಣು ಮಕ್ಕಳಿಗೆ ಸ್ಕರ್ಟ್ ಮತ್ತು ಶರ್ಟ್ ಸಮವಸ್ತ್ರವನ್ನು ಬದಲಾಯಿಸಿದ್ದೆ. ಚೂಡಿದಾರ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದೆ. ಇದು ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಆಗುತ್ತಿದ್ದ ಲೈಂಗಿಕ ಕಿರುಕುಳವನ್ನು ತಡೆಯಲು ಸಹಕಾರಿ ಆಗಿದೆ ಎಂದು ತಿಳಿಸಿದ್ದಾರೆ.
ಹೆಣ್ಣು ಮಕ್ಕಳಲ್ಲಿ ಆಗುವ ವಯೋ ಸಹಜ ದೈಹಿಕ ಕ್ರಿಯೆಯನ್ನು ಮರೆಮಾಚಲು ಅನುಕೂಲವಾಗಿದೆ ಭಾರತ ದೇಶದಲ್ಲಿ ಪ್ರತಿಯೊಂದು ಧರ್ಮಗಳಲ್ಲೂ ವಯಸ್ಸಿಗೆ ಅನುಗುಣವಾಗಿ ವಸ್ತ್ರಗಳನ್ನು ಧರಿಸುವುದು ಸರ್ವೇಸಾಮಾನ್ಯ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪ್ರಸ್ತುತ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಹಾಗೂ ರಕ್ಷಣೆಗಾಗಿ ಅನೇಕ ಕಾನೂನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ರಕ್ಷಣೆ ಹಾಗೂ ವಿದ್ಯಾಭ್ಯಾಸ ಸರ್ಕಾರದ ಹೊಣೆಯಾಗಿದೆ. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಉಡುಪಿ ಕಾಲೇಜಿನ ಪ್ರಾಂಶುಪಾಲರ ನಡೆ ಮಕ್ಕಳಲ್ಲಿ ಜಾತಿ ಬೇಧ ಭಾವಗಳನ್ನು ಹುಟ್ಟು ಹಾಕುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಹಾಗೂ ಉತ್ತಮ ಸಮಾಜಕ್ಕೆ ಮಾರಣಾಂತಿಕವಾಗಿದೆ. ಪರಿಸ್ಥಿತಿ ಕೈಮೀರುವ ಮುನ್ನ ವಿದ್ಯಾರ್ಥಿಗಳ ಹಾಗೂ ಸಮಾಜದ ಹಿತದೃಷ್ಟಿಯಿಂದ ಪ್ರಾಂಶುಪಾಲರಿಗೆ ಸೂಕ್ತ ಆದೇಶವನ್ನು ನೀಡಿ. ಈ ವಿವಾದಕ್ಕೆ ತೆರೆ ಎಳೆಯುವಂತೆ ಮನವಿ ಪತ್ರದ ಮೂಲಕ ಶಾಸಕ ತನ್ವೀರ್ ಸೇಠ್ ಮನವಿ ಮಾಡಿದ್ದಾರೆ.
ಶಾಲಾ ಕಾಲೇಜಿನಲ್ಲಿ ಹಿಜಾಬ್ ನಿಷೇಧ ಆಗಬೇಕು: ಮಾಜಿ ಸಚಿವ ಸೊಗಡು ಶಿವಣ್ಣ
ಉಡುಪಿಯಲ್ಲಿ ಹಿಜಾಬ್ ಹಾಗೂ ಕೇಸರಿ ವಿವಾದಕ್ಕೆ ಸಂಬಂಧಪಟ್ಟಂತೆ ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿಕೆ ನೀಡಿದ್ದಾರೆ. ಶಾಲಾ ಕಾಲೇಜಿನಲ್ಲಿ ಹಿಜಾಬ್ ನಿಷೇಧ ಆಗಬೇಕು. ಅದೇ ರೀತಿ ಕೇಸರಿ ಶಾಲಿಗೂ ಅವಕಾಶ ಕೊಡಬಾರದು. ಏಕರೂಪ ವಸ್ತ್ರಸಂಹಿತೆ ಜಾರಿಯಾಗಬೇಕು. ತುಮಕೂರು ಜಿಲ್ಲೆಯ ಸರ್ಕಾರಿ ಕಾಲೇಜಲ್ಲಿ ಈ ರೀತಿಯ ಹಿಜಾಬ್ ಸಂಸ್ಕೃತಿ ಇಲ್ಲ. ಮಂಗಳೂರು, ಉಡುಪಿ ಭಾಗದಲ್ಲಿ ನಡೆಯುತ್ತಿರುವುದನ್ನು ನೋಡುತ್ತಿದ್ದೇನೆ. ನಾವು ಅಫ್ಘಾನಿಸ್ತಾನದಲ್ಲಿ ಇದಿವಾ ಅನ್ನೋ ರೀತಿ ಆಗಿದೆ ನಮಗೆ. ಶಾಲೆ ಅಂತ ಬಂದಾಗ ಎಲ್ಲರು ಒಂದೇ. ಶಾಲೆಗಳಲ್ಲಿ ಜಾತಿ ಧರ್ಮದ ಬರಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್-ಕೇಸರಿಶಾಲು ವಿವಾದದ ಕೇಂದ್ರ ಬಿಂದು ಕುಂದಾಪುರ ಕಾಲೇಜಿಗೆ ನಾಳೆ ರಜೆ
Published On - 11:45 am, Sat, 5 February 22