
ಬೆಂಗಳೂರು, ನವೆಂಬರ್ 09: ಸರ್ಕಾರದ ಯೋಜನೆ ಉಚಿತ ಯೋಜನೆಗಳು ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಕರ್ನಾಟಕ ಹೈರ್ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ. ವಿ. ಶ್ರೀಶಾನಂದ ಅವರಿದ್ದ ಪೀಠವು, ‘ಸರ್ಕಾರದ ಯೋಜನೆ ಉಚಿತವಾದರೆ ಬೆಲೆ ಏರಿಕೆ ಖಚಿತ. 650 ರೂ. ಇದ್ದ ತುಪ್ಪ 850 ರೂ. ಗೆ ಏರಿಕೆಯಾಗಿದೆ. ದೀಪಾವಳಿಗೆ ತುಪ್ಪದ ಯಮದೀಪ ಹಚ್ಚಬೇಕು. ಇಷ್ಟು ದರ ಹೆಚ್ಚಾದರೆ ತುಪ್ಪದ ದೀಪ ಹಚ್ಚುವುದು ಹೇಗೆ? ಹಾಲು, ಬಸ್ ಟಿಕೆಟ್ ದರ ಜಾಸ್ತಿಯಾಗಿದೆ. ದೀಪಾವಳಿ ಆದ ಮೇಲೆ ಸಕ್ಕರೆ ದರವೂ ಹೆಚ್ಚಾಗಬಹುದು. ಹೀಗೆ ಬೆಲೆ ಹೆಚ್ಚಾದರೆ ಸಾಮಾನ್ಯ ಜನ ಜೀವನ ಮಾಡುವುದು ಹೇಗೆ ಎಂದು ಕಳವಳ ವ್ಯಕ್ತಪಡಿಸಿದೆ.
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮೈಸೂರಿನ ಸರ್ಕಾರಿ ಉಗ್ರಾಣದಲ್ಲಿ ಇರಿಸಲಾಗಿದ್ದ ಆಹಾರ ಧಾನ್ಯಗಳ ಲೆಕ್ಕಪರಿಶೋಧನೆ ವೇಳೆ 320 ಕ್ವಿಂಟಲ್ ಅಕ್ಕಿ ಹಾಗೂ 85 ಕ್ವಿಂಟಲ್ ಗೋಧಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಅಕ್ರಮ ಹಿನ್ನೆಲೆ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ತಮ್ಮ ವಿರುದ್ಧದ ಕ್ರಿಮಿನಲ್ ಕೇಸ್ ರದ್ಧುಗೊಳಿಸುವಂತೆ ಕೋರಿ ಉಗ್ರಾಣದ ಹಿರಿಯ ವ್ಯವಸ್ಥಾಪಕರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಈ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಪೀಠವು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದೆ.
ಇನ್ನು ಹೈಕೋರ್ಟ್ ಅಭಿಪ್ರಾಯದ ವರದಿ ಪೋಸ್ಟ್ ಮಾಡುವ ಮೂಲಕ ಜೆಡಿಎಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ. ‘ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕನ್ನಡಿಗರ ಕಿವಿಗೆ ಹೂವಿಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮಾನ್ಯ ಹೈಕೋರ್ಟ್ ಛೀಮಾರಿ ಹಾಕಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ. ಒಂದು ಕೈಯಲ್ಲಿ ‘ಉಚಿತ’ದ ಆಮಿಷವೊಡ್ಡಿ, ಇನ್ನೊಂದು ಕೈಯಲ್ಲಿ ಹಾಲು, ತುಪ್ಪ, ವಿದ್ಯುತ್ ದರಗಳನ್ನು ಮನಬಂದಂತೆ ಏರಿಸಿ ಬಡವರು, ರೈತರು ಹಾಗೂ ಜನಸಾಮಾನ್ಯರ ಕತ್ತು ಹಿಸುಕುತ್ತಿದೆ ಈ ಸರ್ಕಾರ. 650 ರೂ. ಇದ್ದ ತುಪ್ಪದ ದರವನ್ನು 850 ರೂ.ಗೆ ಏರಿಸಿ ದೀಪಾವಳಿ ಹಬ್ಬದಂದೇ ಜನರ ಮನೆಗೆ ಕತ್ತಲು ಆವರಿಸುವಂತೆ ಮಾಡಿದ್ದೀರಿ’ ಎಂದು ವಾಗ್ದಾಳಿ ಮಾಡಿದೆ.
ಇದನ್ನೂ ಓದಿ: ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್: ಖಾಲಿ ಜಾಗಕ್ಕೆ ಕಾಂಪೌಂಡ್ ಹಾಕಿ, ಇಲ್ಲದಿದ್ದರೆ ನೋಟಿಸ್
‘ಜನ ಯಮದೀಪ ಹಚ್ಚುವ ಬದಲು, ಯಮನೇ ಬರಲಿ ಎನ್ನುವಂತಾಗಿದೆ’ ಎಂದು ನ್ಯಾಯಪೀಠವೇ ಕಳವಳ ವ್ಯಕ್ತಪಡಿಸುವ ಮಟ್ಟಿಗೆ ರಾಜ್ಯದ ಆಡಳಿತ ಕುಸಿದುಬಿದ್ದಿದೆ. ಡಿಕೆ ಶಿವಕುಮಾರ್ ಅವರೇ, ಜನರನ್ನು ಮರಳು ಮಾಡುವ ನಿಮ್ಮ ಗ್ಯಾರಂಟಿಗಳೆಂಬ ‘ಹಗಲು ದರೋಡೆ’ಯನ್ನು ರಾಜ್ಯದ ಜನತೆ ಅರ್ಥಮಾಡಿಕೊಂಡಿದ್ದಾರೆ. ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ನಿಮ್ಮ ಜನವಿರೋಧಿ ಆಡಳಿತಕ್ಕೆ ಕನ್ನಡಿಗರು ಶೀಘ್ರದಲ್ಲೇ ತಕ್ಕ ಶಾಸ್ತಿ ಮಾಡಲಿದ್ದಾರೆ. ನಾಡಿನ ಜನರ ಶಾಪ ಈ ಸರ್ಕಾರಕ್ಕೆ ತಟ್ಟುವುದು ನಿಶ್ಚಿತ’ ಎಂದು ಕಿಡಿಕಾರಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:05 pm, Mon, 9 November 26