
ಬೆಂಗಳೂರು, ಡಿಸೆಂಬರ್ 27: ಗೊಬ್ಬರ ಕ್ಷೇತ್ರದಲ್ಲಿನ ಭಾರತದ ಮುಂಚೂಣಿ ಸಹಕಾರಿ ಸಂಸ್ಥೆಯಾದ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೂಪರೇಟಿವ್ ಲಿಮಿಟೆಡ್ (ಇಸ್ಕೋ) ಕರ್ನಾಟಕದ ಬೆಂಗಳೂರು (Bengaluru) ಸಮೀಪದ ದೇವನಹಳ್ಳಿಯಲ್ಲಿ ತನ್ನ ಅತ್ಯಾಧುನಿಕ ನ್ಯಾನೋ ಗೊಬ್ಬರ ಕಾರ್ಖಾನೆಯನ್ನು ಉದ್ಘಾಟಿಸಿದೆ. ಈ ಕಾರ್ಖಾನೆಯನ್ನು ಇನ್ನೋ ಮತ್ತು ಎನ್‌ಸಿಯುಐ ಅಧ್ಯಕ್ಷರಾದ ಶ್ರೀ ದಿಲೀಪ್ ಸಂಘಾಣಿ ಅವರು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ವೇಳೆ ಅವರು ಕಾರ್ಖಾನೆಯ ಸಮಗ್ರ ಪರಿಶೀಲನೆ ನಡೆಸಿ, ನ್ಯಾನೋ ಗೊಬ್ಬರದ ಉತ್ಪಾದನೆ, ಗುಣಮಟ್ಟದ ಮಾನದಂಡಗಳು ಹಾಗೂ ತಾಂತ್ರಿಕ ಸಾಮರ್ಥ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಸಂಘಾಣಿ ಅವರು ಮಾತನಾಡಿ, ಈ ಕಾರ್ಖಾನೆ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಮಾನ್ಯ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ “ಸಹಕಾರದಿಂದ ಸಮೃದ್ಧಿ” ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
12 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿತಗೊಂಡಿರುವ ಈ ಅತ್ಯಾಧುನಿಕ ನ್ಯಾನೋ ಗೊಬ್ಬರ ಕಾರ್ಖಾನೆ ಪ್ರತಿದಿನ 2 ಲಕ್ಷ ನ್ಯಾನೋ ಯೂರಿಯಾ ಪ್ಲಸ್ ಬಾಟಲಿಗಳ ಉತ್ಪಾದನೆಗೆ ಸಾಮರ್ಥ್ಯ ಹೊಂದಿದೆ. ದೀರ್ಘಾವಧಿಯಲ್ಲಿ ಇದು ದಕ್ಷಿಣ ಭಾರತದಲ್ಲಿ ಸಾಂಪ್ರದಾಯಿಕ ಯೂರಿಯಾದ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ಆಮದು ವೆಚ್ಚವನ್ನು ಇಳಿಸುವುದರ ಜೊತೆಗೆ ನಿಖರ ಕೃಷಿಯನ್ನು (ಪ್ರಿಸಿಷನ್ ಫಾರ್ಮಿಂಗ್) ಉತ್ತೇಜಿಸುತ್ತದೆ. ದೇವನಹಳ್ಳಿಯಲ್ಲಿ ಸ್ಥಾಪಿತಗೊಂಡಿರುವ ಈ ಕಾರ್ಖಾನೆ ತಾಂತ್ರಿಕ ಶ್ರೇಷ್ಠತೆಯ ಪ್ರತೀಕವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಪ್ರಗತಿಶೀಲ ಪ್ರಕ್ರಿಯೆಗಳ ಮೂಲಕ ಗೊಬ್ಬರ ಉತ್ಪಾದನೆ ಮಾಡಲಾಗುತ್ತದೆ.
ಉದ್ಘಾಟನೆ ಮತ್ತು ಕಾರ್ಖಾನೆ ಪರಿಶೀಲನೆಯ ನಂತರ ಶ್ರೀ ಸಂಘಾಣಿ ಅವರು ಕಾರ್ಖಾನೆಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ವಿಶೇಷ ಸಂವಾದ ನಡೆಸಿದರು. ಈ ವೇಳೆ ನ್ಯಾನೋ ಗೊಬ್ಬರಗಳ ಮಹತ್ವ, ಅವುಗಳ ಪಾತ್ರ ಮತ್ತು ಭಾರತದ ಕೃಷಿಯ ಭವಿಷ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ನವೋದ್ಯಮ ಆಧಾರಿತ ಸಹಕಾರಿ ತಂತ್ರಗಳನ್ನು ಬಲಪಡಿಸುವ ಕುರಿತು ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಇಷ್ಟೋ ಉಪಾಧ್ಯಕ್ಷರಾದ ಬಲವೀರಸಿಂಗ್, ಮಾಜಿ ಅಧ್ಯಕ್ಷರಾದ ಕೆ. ಶ್ರೀನಿವಾಸನ್ ಗೌಡ, ವ್ಯವಸ್ಥಾಪಕ ನಿರ್ದೇಶಕರಾದ ಕೆ. ಜೆ. ಪಟೇಲ್, ಪ್ರಲಾದಸಿಂಗ್, ವಿಜಯಶಂಕರ ರೈ, ವಿವೇಕ್ ಕೊಹ್ಲಿ, ಸುಬ್ರಜಿತ್ ಪಾಧಿ, ಮಾರ ಗಂಗಾ ರೆಡ್ಡಿ, ವಾಲ್ಮೀಕಿ ತ್ರಿಪಾಠಿ, ಜಗದೀಪ್ ಸಿಂಗ್ ನಕ್ಕೆ, ಜಯೇಶ್ ರಾಡಾಡಿಯಾ, ಉಮೇಶ್ ತ್ರಿಪಾಠಿ, ಭಾವೇಶ್ ರಾಡಾಡಿಯಾ, ಪ್ರೇಮಚಂದ್ ಮುನ್ನಿ, ಮುಕುಲ್ ಕುಮಾರ್, ನ್ಯಾನೋ ಘಟಕದ ಮುಖ್ಯಸ್ಥ ಸಂಜಯ್ ಕುಲಶ್ರೇಷ್ಠ ಸೇರಿದಂತೆ ನಿರ್ದೇಶಕ ಮಂಡಳಿಯ ಸದಸ್ಯರು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.