ಕುಮಾರಸ್ವಾಮಿ ನಿವಾಸದ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಸಂಪರ್ಕ;ಎಷ್ಟು ದಂಡ ಬೀಳಬಹುದು?
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರ ನಿವಾಸಕ್ಕೆ ಅನಧಿಕೃತವಾಗಿ ಬೀದಿ ದೀಪದ ಕಂಬದಿಂದ ನೇರವಾಗಿ ವಿದ್ಯುತ್ ಪಡೆದುಕೊಂಡಿದ್ದರ ಬಗ್ಗೆ ಕಾಂಗ್ರೆಸ್ (Congress) ಟ್ವೀಟ್ ಮೂಲಕ ವಾಗ್ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿಯವರು ‘ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ ಎಂದಿದ್ದರು. ಜೊತೆಗೆ ಇದಕ್ಕೆ ಎಷ್ಟು ದಂಡವಾಗುತ್ತದೆ, ಅದನ್ನು ನಾನು ಕಟ್ಟುತ್ತೇನೆ ಎಂದಿದ್ದರು.
ಬೆಂಗಳೂರು, ನ.14: ದೀಪಾವಳಿ ದೀಪಾಲಂಕಾರಕ್ಕಾಗಿ ಬೆಂಗಳೂರಿನ ಜೆ.ಪಿ ನಗರ(JP Nagara)ದಲ್ಲಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರ ನಿವಾಸಕ್ಕೆ ಅನಧಿಕೃತವಾಗಿ ಬೀದಿ ದೀಪದ ಕಂಬದಿಂದ ನೇರವಾಗಿ ವಿದ್ಯುತ್ ಪಡೆದುಕೊಂಡಿದ್ದರ ಬಗ್ಗೆ ಕಾಂಗ್ರೆಸ್ (Congress) ಟ್ವೀಟ್ ಮೂಲಕ ವಾಗ್ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿಯವರು ‘ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ, ದಂಡ ಕಟ್ಟುತ್ತೇನೆ ಎಂದಿದ್ದರು. ಈ ಕುರಿತು ರಾಜ್ಯ-ರಾಜಕಾರಣದಲ್ಲಿ ಧಗಧಗಿಸುತ್ತಿದ್ದು, ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇವರಿಬ್ಬರ ವಾಗ್ವಾದದ ಮಧ್ಯೆ ಇದೀಗ ಬೆಸ್ಕಾಂ ಇಲಾಖೆ ಮಧ್ಯಪ್ರವೇಶಿಸಿದ್ದು, ಪರಿಶೀಲನೆ ನಡೆಸಿದೆ.
ಎಷ್ಟು ದಂಡ ಬೀಳಬಹುದು?
ಇನ್ನು ಈ ಕುರಿತು ಬೆಸ್ಕಾಂ ಬೆಸ್ಕಾಂ ಜಾಗೃತಾ ದಳದ ಡಿವೈಎಸ್ ಪಿ ಅನುಷ ನೇತೃತ್ವದಲ್ಲಿ ವಿದ್ಯುತ್ ಬಳಕೆ ಕೌಂಟಿಂಗ್ ಶುರುವಾಗಿದೆ. ಮನೆಯ ದೀಪಾಲಂಕಾರ ಆನ್ ಮಾಡಿಸಿದ ಅಧಿಕಾರಿಗಳು 10 ನಿಮಿಷ ಎಷ್ಟು ಬಳಕೆ ಆಗುತ್ತದೆ ಎನ್ನುವುದನ್ನು ಲೆಕ್ಕ ಮಾಡುತ್ತಾರೆ. ಇದರಿಂದ ಎರಡು ದಿನ ಎಷ್ಟು ಬಳಕೆ ಆಗಿದೆ ಎಂಬುದರ ಲೆಕ್ಕ ತೆಗೆದು, ಇಂದು(ನ.14) ಸಂಜೆಯೊಳಗೆ ಅಧಿಕಾರಿಗಳು ರಿಪೋರ್ಟ್ ನೀಡಲಿದ್ದಾರೆ. ನಾಳೆ ದಂಡದ ಮೊತ್ತವನ್ನು ನೋಟಿಸ್ ಮೂಲಕ ಬೆಸ್ಕಾ ತಿಳಿಸಲಿದೆ.
ಇದನ್ನೂ ಓದಿ:ರಾಜ್ಯ ರಾಜಕಾರಣದಲ್ಲಿ ಧಗಧಗಿಸಿದ ಕುಮಾರಸ್ವಾಮಿ ಮನೆಯ ಅಕ್ರಮ ವಿದ್ಯುತ್, ಯಾರು ಏನು ಹೇಳಿದ್ರು?
ಇನ್ನು ಕಾಂಗ್ರೆಸ್ ಟ್ವೀಟ್ ಮಾಡಿರುವ ಬೆನ್ನಲ್ಲೆ ಪ್ರತಿಕ್ರಿಯಿಸಿದ್ದ ಹೆಚ್ಡಿಕೆ, ‘ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದರು. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ(ನವೆಂಬರ್ 13) ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್ ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಹೇಳುವ ಮೂಲಕ ಸ್ಪಷ್ಟಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Tue, 14 November 23