ರಾಜ್ಯ ರಾಜಕಾರಣದಲ್ಲಿ ಧಗಧಗಿಸಿದ ಕುಮಾರಸ್ವಾಮಿ ಮನೆಯ ಅಕ್ರಮ ವಿದ್ಯುತ್, ಯಾರು ಏನು ಹೇಳಿದ್ರು?
ಕರ್ನಾಟಕದಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಟೀಕೆ ಮಾಡುತ್ತಿದ್ದು, ಇದರ ಮಧ್ಯೆ ಕುಮಾರಸ್ವಾಮಿ ಅವರ ಮನೆಯ ದೀಪಾಲಂಕಾರಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಅಕ್ರಮವಾಗಿ ಬೀದಿ ಕಂಬದಿಂದ ವಿದ್ಯುತ್ ಪಡೆದಿರುವುದನ್ನು ಕಾಂಗ್ರೆಸ್ ವಿಡಿಯೋ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಕುಮಾರಸ್ವಾಮಿಯ ಮನೆ ವಿದ್ಯುತ್ ರಾಜ್ಯ ರಾಜಕಾರಣದಲ್ಲಿ ಧಗಧಗಿಸುತ್ತಿದೆ.
ಬೆಂಗಳೂರುಮ (ನವೆಂಬರ್ 14): ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರ ನಿವಾಸಕ್ಕೆ ದೀಪಾಲಂಕಾರಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದಕ್ಕೆ ಕಾಂಗ್ರೆಸ್ ವಿಡಿಯೋವೊಂದರನ್ನು ಬಿಡುಗಡೆ ಮಾಡಿದೆ. ದೀಪಾವಳಿ ಪ್ರಯುಕ್ತ ಬೆಂಗಳೂರಿನ ಜೆಪಿ ನಗರದಲ್ಲಿರುವ ನಿವಾಸಕ್ಕೆ ದೀಪಾಲಂಕಾರ ಸಲುವಾಗಿ ಅಕ್ರಮವಾಗಿ ಬೀದಿ ಕಂಬದ ಮೂಲಕ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಇದನ್ನು ಸ್ವತಃ ಕುಮಾರಸ್ವಾಮಿ ತಪ್ಪೊಪ್ಪಿಕೊಂಡಿದ್ದಾರೆ. ಇದಕ್ಕೆ ಇದೀಗ ಕಾಂಗ್ರೆಸ್ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಅಕ್ರಮ ವಿದ್ಯುತ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಡುವೆ ಹೊತ್ತಿ ಉರಿಯುತ್ತಿದೆ. ಇದರ ಮಧ್ಯೆ ಇದೀಗ ಬೆಸ್ಕಾಂ ಸಹ ಪ್ರವೇಶ ಮಾಡಿದೆ.
ಅಕ್ರಮ ವಿದ್ಯುತ್ ಪಡೆದಿರುವ ಈ ಬಗ್ಗೆ ಸ್ವತಃ ಬೆಸ್ಕಾಂ ಎಇಇ ಪ್ರಶಾಂತ್ ಅವರು ಟಿವಿ9 ಜೊತೆ ಮಾತನಾಡಿದ್ದು, ದೀಪಾಲಂಕಾರ ಮಾಡುವ ಸಿಬ್ಬಂದಿ ಅಕ್ರಮವಾಗಿ ವಿದ್ಯುತ್ ಪಡೆದಿದ್ದಾರೆ. ಕುಮಾರಸ್ವಾಮಿಯವರ ನಿವಾಸಕ್ಕೆ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಭೇಟಿ ನೀಡುತ್ತಾರೆ. ಬಳಿಕ ಪರಿಶೀಲನೆ ನಡೆಸಿ ದಂಡ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಜಾಗೃತ ದಳದ ಅಧಿಕಾರಿಗಳು ಭೇಟಿ ನೀಡಿ ಎಷ್ಟು ವಿದ್ಯುತ್ ಕಳ್ಳತನವಾಗಿದೆ? ಎಷ್ಟು ಕಿಲೋ ವ್ಯಾಟ್ ಅಕ್ರಮವಾಗಿ ಪಡೆದಿದ್ದಾರೆಂದು ಪರಿಶೀಲಿಸಿ ದಂಡ ಹಾಕುತ್ತಾರೆ. ನಾವು ನಿನ್ನೆ(ನವೆಂಬರ್ 13) ರಾತ್ರಿಯೇ ಕುಮಾರಸ್ವಾಮಿಯವರ ನಿವಾಸಕ್ಕೆ ಭೇಟಿ ಕೊಟ್ಟಿದ್ದೆವು. ನಾವು ಭೇಟಿ ಕೊಡುವ ಮುನ್ನವೇ ಮೀಟರ್ ಬೋರ್ಡ್‌ನಿಂದ ವಿದ್ಯುತ್ ಸಂಪರ್ಕ ಪಡೆದಿದ್ದರು ಎಂದು ಹೇಳಿದರು.
ಕುಮಾರಸ್ವಾಮಿ ಹೇಳಿದ್ದೇನು?
ಇನ್ನು ಇದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ನಿನ್ನೆಯೇ ವಿದ್ಯುತ್ ಸಂಪರ್ಕ ಕಡಿತ ಮಾಡಲು ಸೂಚನೆ ನೀಡಿದ್ದೇನೆ. ಅಚಾತುರ್ಯ ನಡೆದಿದೆ, ಅದರ ಹೊಣೆ ನಾನೇ ಹೊರುತ್ತೇನೆ. ವಿದ್ಯುತ್ ಕಳ್ಳತನ ಮಾಡಿ ಎಂದು ನಾವು ಹೇಳಿದ್ದೀವಾ? ನನ್ನ ಮನೆ ಮೀಟರ್ಗೆ ಕನೆಕ್ಷನ್ ಕೊಡಿ ಎಂದು ಸೂಚನೆ ನೀಡಿದ್ದೇನೆ. ಕಾಂಗ್ರೆಸ್ನವರಿಗೆ ಬೇರೆ ಕೆಲಸ ಇಲ್ಲ, ಅದಕ್ಕೆ ಟೀಕೆ ಮಾಡುತ್ತಾರೆ. ವಿದ್ಯುತ್ ಬಳಕೆ ಮಾಡಿರುವುದಕ್ಕೆ ದಂಡ ಹಾಕುತ್ತಾರೆ, ಕಟ್ಟುತ್ತೇನೆ. ನೋಟಿಸ್ ಕೊಡಿ ದಂಡ ಕಟ್ಟುತ್ತೇನೆ ಎಂದು ನಾನೇ ಹೇಳಿದ್ದೇನೆ ಎಂದು ತಿಳಿಸಿದರು.
ಪ್ರಹ್ಲಾದ್ ಜೋಶಿ ಮಾತು
ಹೆಚ್ಡಿಕೆ ನಿವಾಸದ ದೀಪಾಲಂಕಾರಕ್ಕೆ ವಿದ್ಯುತ್ ಕಳ್ಳತನ ಆರೋಪದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಹೆಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಒಂದು ವೇಳೆ ಹೆಚ್ಡಿಕೆ ವಿದ್ಯುತ್ ತೆಗೆದುಕೊಂಡಿದ್ದರೆ ತಪ್ಪಾಗುತ್ತೆ. ಆದರೆ ಕುಮಾರಸ್ವಾಮಿ ಹಾಗೆ ಮಾಡಿರಲಿಕ್ಕಿಲ್ಲ. ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಆರೋಪಿಸುತ್ತಿರಬೇಕು ಎಂದರು.
ಇದನ್ನೂ ಓದಿ: ಮನೆ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಸಂಪರ್ಕ: ಸತ್ಯ ಒಪ್ಪಿಕೊಂಡ ಕುಮಾರಸ್ವಾಮಿ ಹೇಳಿದ್ದಿಷ್ಟು!
ಡಿಕೆ ಶಿವಕುಮಾರ್ ಮಾತು
ಮೀಡಿಯಾದಲ್ಲಿ ಅವರ ಮನಗೆ ಏನೋ ಹಾಕಿಕೊಡಿದ್ದಾರೆ ಎಂದು ಯಾರು ತೋರಿಸುತ್ತಿದ್ದರು. ನಮ್ಮ ಪಕ್ಷ ಅದನ್ನ ನೋಡಬಿಟ್ಟು ಟ್ವೀಟ್ ಮಾಡಿದೆ. ಈ ಬಗ್ಗೆ ಕೆಇಬಿ ಇಲಾಖೆ ಅವರು ಕ್ರಮ ತೆಗೆದುಕೊಳ್ತಾರೆ. ನನಗೆ ಗೊತ್ತಿಲ್ಲ. ನನಗೂ ಯಾರು ಪೋನ್ ಮಾಡಿದ್ದರು. ಆ ನಂತರ ನಾನು ಟಿವಿಯಲ್ಲಿ ನೋಡಿದೆ. ಅಷ್ಟೊತ್ತಿಗೆ ವಿಡಿಯೋ ಕಳುಹಿಸಿದ್ದರು. ವಿದ್ಯುತ್ ಕಳ್ಳತನ ಮಾಡಬಾರದು ಎಂದು ಹೇಳಿದರು.
ಬೆಸ್ಕಾಂ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ಮಾಡುತ್ತಾರೆ. ವಿದ್ಯುತ್ ಕಳ್ಳತನ ಮಾಡಬಾರದು. ನಮ್ಮಂತಹವರು ಜವಾಬ್ದಾರಿ ಸ್ಥಾನದಲ್ಲಿದ್ದವರು ಮಾಡಿದ್ರೆ ತಪ್ಪು ಅಲ್ವಾ. ಈ ಬಗ್ಗೆ ಏನು ಮಾಡುತ್ತಾರೆ ಎಂದು ಇಂಧನ ಸಚಿವ ಜಾರ್ಜ್ಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.
ಬೆಸ್ಕಾಂ ಸಿಬ್ಬಂದಿ ಪರಿಶೀಲನೆ
ಒಟ್ಟಿನಲ್ಲಿ ಕುಮಾರಸ್ವಾಮಿ ಅವರ ಮನೆಯ ಅಕ್ರಮ ವಿದ್ಯುತ್ ರಾಜ್ಯ ರಾಜಕಾರನದಲ್ಲಿ ಧಗಧಗಿಸುತ್ತಿದ್ದು, ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇವೆಲ್ಲದ ಮಧ್ಯೆ ಕುಮಾರಸ್ವಾಮಿ ನಿವಾಸಕ್ಕೆ ಬೆಸ್ಕಾಂ ಸಿಬ್ಬಂದಿ ಭೇಟಿ ಪರಿಶೀನೆ ನಡೆಸಿದ್ದು, ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಅಕ್ರಮವಾಗಿ ಬಳಿಸಿಕೊಂಡಿದ್ದಾರೆ ಎಂದು ಪತ್ತೆ ಮಾಡಿ ಅದಕ್ಕೆ ದಂಡ ಹಾಕಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Tue, 14 November 23