ಡಿ.ಕೆ. ಶಿವಕುಮಾರ್ ಪ್ರಮಾಣ ವಚನಕ್ಕೆ ಬರುವ ಅತಿಥಿಗಳ ಮೆಗಾ ಲಿಸ್ಟ್ ಇಲ್ಲಿದೆ! ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರು ಯಾರು ಗೊತ್ತಾ?
ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭಕ್ಕೆ ಸಕಲ ಸಿದ್ಧತೆ ನಡೆದಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ದೇಶದ ಗಮನವಿದ್ದು, ವಿವಿಐಪಿಗಳಿಂದ ಹಿಡಿದು ಸಾಮಾನ್ಯ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ರೈತರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಸರ್ವಧರ್ಮ ಗುರುಗಳು, ರಾಜಕೀಯ ನಾಯಕರು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಜನಸಾಮಾನ್ಯರ ಅಪೂರ್ವ ಸಂಗಮಕ್ಕೆ ಈ ಸಮಾರಂಭ ಸಾಕ್ಷಿಯಾಗಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪದಗ್ರಹಣವು ಜನಪರ ಕಾರ್ಯಕ್ರಮವಾಗಿ ಮೂಡಿಬರಲಿದೆ.

ಬೆಂಗಳೂರು, ಜೂ.2: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಐತಿಹಾಸಿಕ ಸಮಾರಂಭಕ್ಕೆ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದ್ದು, ಇಡೀ ದೇಶದ ಗಮನ ಸೆಳೆಯುವಂತಹ ವಿವಿಐಪಿ (VVIP) ಹಾಗೂ ಜನಸಾಮಾನ್ಯರನ್ನೊಳಗೊಂಡ ಆಹ್ವಾನಿತರ ಭವ್ಯ ಪಟ್ಟಿ ಸಿದ್ಧವಾಗಿದೆ. ರಾಜಕೀಯ ದೈತ್ಯರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಸಮಾರಂಭದಲ್ಲಿ ಭಾಗವಹಿಸಲು ವಿಶೇಷ ಆಹ್ವಾನ ನೀಡಿರುವುದು ಈ ಕಾರ್ಯಕ್ರಮದ ವಿಶೇಷವಾಗಿದೆ.
ಈ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರು ಸಾಕ್ಷಿಯಾಗಲಿದ್ದಾರೆ. ಇವರೊಂದಿಗೆ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು (PCC Presidents) ಮತ್ತು ಪ್ರಮುಖ ಸಂಸದರು ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ ಮಂಗಳಕರ ಚಾಲನೆ ನೀಡಲು ಸರ್ವಧರ್ಮ ಗುರುಗಳನ್ನು ಆಹ್ವಾನಿಸಲಾಗಿದೆ.
ಮುಖ್ಯಾಂಶಗಳು
- ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ
- ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿ
- ಮಾಧ್ಯಮ ಕ್ಷೇತ್ರ, ಚಿತ್ರರಂಗ, ನ್ಯಾಯಾಂಗ, ಕ್ರೀಡಾಕ್ಷೇತ್ರ, ನಾಟಕ ರಂಗದ ದಿಗ್ಗಜರಿಗೂ ಆಹ್ವಾನ
ಈ ಆಹ್ವಾನಿತರ ಪಟ್ಟಿಯಲ್ಲಿ ಅತ್ಯಂತ ವಿಶೇಷ ಅಂಶವೆಂದರೆ, ಡಿ.ಕೆ. ಶಿವಕುಮಾರ್ ಅವರ ತವರೂರಾದ ಕನಕಪುರದ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಅವರೊಂದಿಗೆ ಸಮಾಜದ ಬೆನ್ನೆಲುಬಾಗಿರುವ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ರೈತ ಮುಖಂಡರು, ದಲಿತ ಸಂಘಟನೆಗಳ ನಾಯಕರು, ಹಿಂದುಳಿದ ವರ್ಗಗಳ ಮುಖಂಡರು, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳು ಹಾಗೂ ಮಹಿಳಾ ಮುಖಂಡರನ್ನು ಅತ್ಯಂತ ಗೌರವದಿಂದ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಸರ್ವ ಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆಶಿ
ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗದೆ ಮಾಧ್ಯಮ ಕ್ಷೇತ್ರ, ಚಿತ್ರರಂಗ, ನ್ಯಾಯಾಂಗ, ಕ್ರೀಡಾಕ್ಷೇತ್ರ, ನಾಟಕ ರಂಗದ ದಿಗ್ಗಜರು, ಪ್ರಮುಖ ಸಾಹಿತಿಗಳು ಹಾಗೂ ಕಲಾವಿದರು ಈ ಸಮಾರಂಭಕ್ಕೆ ಬರಲಿದ್ದಾರೆ. ಆರ್ಥಿಕ ವಲಯದಿಂದ ಪ್ರಮುಖ ಕೈಗರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಹೋಟೆಲ್ ಉದ್ಯಮಿಗಳು ಹಾಗೂ ದೇಶದ ಭವಿಷ್ಯವಾಗಿರುವ ಯುವ ಮುಖಂಡರಿಗೆ ಸಾಕ್ಷಿಯಾಗಲು ವೇದಿಕೆ ಸಜ್ಜಾಗಿದೆ. ಒಟ್ಟಾರೆಯಾಗಿ ರಾಜಕೀಯ ಗಣ್ಯರು ಮತ್ತು ಜನಸಾಮಾನ್ಯರ ಅಪೂರ್ವ ಸಂಗಮಕ್ಕೆ ಈ ಪ್ರಮಾಣ ವಚನ ಕಾರ್ಯಕ್ರಮ ಸಾಕ್ಷಿಯಾಗಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




