ಬೆಂಗಳೂರಿನಲ್ಲಿ ಅಕ್ರಮ ಸಿಮ್ ಬಾಕ್ಸ್ ಜಾಲ ಪತ್ತೆ: ನಾಲ್ವರು ಅರೆಸ್ಟ್; ನೂರಾರು ಕೋಟಿ ರೂ ವಂಚನೆ ಶಂಕೆ
ಬೆಂಗಳೂರಿನ ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರದಲ್ಲಿ ನಡೆಯುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ಜಾಲವನ್ನು ಸೈಬರ್ ಕಮಾಂಡ್ ಪೊಲೀಸರು ಭೇದಿಸಿದ್ದಾರೆ. ಆ ಮೂಲಕ ಮುಂದೆ ನಡೆಯಬಹುದಿದ್ದ ಭಾರೀ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮುಖ್ಯಾಂಶಗಳು
- ಸೈಬರ್ ಕಮಾಂಡ್ ಪೊಲೀಸರಿಂದ ಅಕ್ರಮ ಸಿಮ್ ಬಾಕ್ಸ್ ಜಾಲ ಪತ್ತೆ
- ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಾಲ್ವರು ಅರೆಸ್ಟ್
- ನೂರಾರು ಕೋಟಿ ರೂ ಹಣಕಾಸು ವಂಚನೆ ನಡೆದಿರುವ ಸಾಧ್ಯತೆ
ಬೆಂಗಳೂರು, ಅಕ್ಟೋಬರ್ 22: ಕರ್ನಾಟಕ ಸೈಬರ್ ಕಮಾಂಡ್ ಪೊಲೀಸರು ಮತ್ತು ದೂರಸಂಪರ್ಕ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಏರ್‌ಟೆಲ್ ಕಂಪನಿಯ ಸಿಮ್ ಕಾರ್ಡ್‌ಗಳನ್ನು ಅಕ್ರಮವಾಗಿ ಬಳಸಿಕೊಂಡು ನಡೆಸಿದ್ದ ಸಿಮ್ ಬಾಕ್ಸ್ ದಂಧೆ ಜಾಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
10 ಸಿಮ್ ಬಾಕ್ಸ್ ಪತ್ತೆ
ಬೆಂಗಳೂರಿನ ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರದ ಪ್ರದೇಶಗಳಲ್ಲಿ ಈ ಅಕ್ರಮ ಸಿಮ್ ಬಾಕ್ಸ್ ಜಾಲ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಕಾಡುಗೋಡಿಯ ಅಪಾರ್ಟ್‌ಮೆಂಟ್‌ನಲ್ಲಿ 192 ಸಿಮ್‌ಗಳ ಸಾಮರ್ಥ್ಯದ ಆರು ಸಿಮ್ ಬಾಕ್ಸ್‌ಗಳು ಪತ್ತೆಯಾಗಿವೆ. ಇನ್ನು ಪಟ್ಟಂದೂರು ಅಗ್ರಹಾರದಲ್ಲಿ ನಾಲ್ಕು ಸಿಮ್ ಬಾಕ್ಸ್‌ಗಳು ಹಾಗೂ 128 ಸಿಮ್‌ಗಳ ಸಾಮರ್ಥ್ಯದ ವ್ಯವಸ್ಥೆ ಪತ್ತೆಯಾಗಿದೆ.
ಇದನ್ನೂ ಓದಿ: ಪುಲಿಕೇಶಿನಗರ ಸ್ಫೋಟ: ಐಇಡಿ ಬಳಕೆ ಶಂಕೆ ಬೆನ್ನಲ್ಲೇ ತನಿಖೆಗೆ ಎನ್‌ಐಎ ಎಂಟ್ರಿ ಸಾಧ್ಯತೆ
ಎರಡೂ ಸ್ಥಳಗಳಲ್ಲಿ ಒಟ್ಟು 10 ಸಿಮ್ ಬಾಕ್ಸ್‌ಗಳನ್ನು ಪತ್ತೆಯಾಗಿದ್ದು, ಈ ಜಾಲದ ಕಾರ್ಯಾಚರಣೆಗೆ ಏರ್‌ಟೆಲ್ ಕಂಪನಿಯ ಸಿಮ್ ಕಾರ್ಡ್‌ಗಳನ್ನು ಅನಧಿಕೃತವಾಗಿ ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಅಕ್ರಮ ಸಿಮ್ ಬಾಕ್ಸ್ ಜಾಲ ಎಂದರೇನು?
ಅಂತಾರಾಷ್ಟ್ರೀಯ ಕರೆಗಳನ್ನು ಇಂಟರ್ನೆಟ್ ಮೂಲಕ ಸ್ವೀಕರಿಸಿಕೊಂಡು, ಬಳಿಕ ಅವುಗಳನ್ನ ಭಾರತದ ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡುವ ಕಾನೂನುಬಾಹಿರ ಟೆಲಿಕಾಂ ಜಾಲವಾಗಿದೆ.
ಡಿಜಿಟಲ್ ಅರೆಸ್ಟ್ ವಂಚನೆ; ಸೆಕ್ಸ್ಟಾರ್ಷನ್ಗೆ ಸಂಪರ್ಕ ಇರುವ ಶಂಕೆ
ಇನ್ನು ಈ ಸಿಮ್ ಬಾಕ್ಸ್ ಜಾಲಕ್ಕೆ ಡಿಜಿಟಲ್ ಅರೆಸ್ಟ್ ವಂಚನೆ, ಸೆಕ್ಸ್‌ಟಾರ್ಷನ್ ಹಾಗೂ ದೇಶಾದ್ಯಂತ ನಡೆಯುತ್ತಿದ್ದ ಸೈಬರ್ ಹಣಕಾಸು ವಂಚನೆಗಳ ಸಂಪರ್ಕ ಇರುವ ಶಂಕೆ ವ್ಯಕ್ತವಾಗಿದೆ. ಈ ಜಾಲದ ಮೂಲಕ ನೂರಾರು ಕೋಟಿ ರೂ ಮೌಲ್ಯದ ಹಣಕಾಸು ವಂಚನೆ ನಡೆದಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಮಹಾರಾಷ್ಟ್ರದಿಂದ ಸಿಮ್ ಕಾರ್ಡ್‌ಗಳ ಪೂರೈಕೆ
ತನಿಖೆಯ ವೇಳೆ ಮಹಾರಾಷ್ಟ್ರದ ತಿರೋಡಾದಲ್ಲಿ ಸಿಮ್ ಕಾರ್ಡ್‌ಗಳನ್ನು ಖರೀದಿಸಿ, ಅವುಗಳನ್ನು ಇ-ಸಿಮ್‌ಗಳಾಗಿ ಪರಿವರ್ತಿಸಿ ಪೂರೈಕೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಾಲ್ವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಜಾಲದಲ್ಲಿ ಇನ್ನೂ ಯಾರಿದ್ದಾರೆ ಎಂಬ ಬಗ್ಗೆ ತನಿಖೆ
ಇನ್ನು ಈ ಅಕ್ರಮ ಸಿಮ್ ಬಾಕ್ಸ್ ಜಾಲದಲ್ಲಿ ಇನ್ನೂ ಯಾರೆಲ್ಲಾ ಭಾಗಿಯಾಗಿದ್ದಾರೆ, ವಂಚನೆಗಳ ಪ್ರಮಾಣ ಎಷ್ಟು ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
