ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿಗೆ ದೂರವಾಣಿ ಕರೆ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮದಿನದ ಶುಭಾಶಯ ಕೋರಿದ್ದಾರೆ. ಅಲ್ಲದೆ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ 6 ತಿಂಗಳು ತುಂಬಿದ್ದಕ್ಕೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಹುಟ್ಟು ಹಬ್ಬ ಹಾಗೂ ತಮ್ಮ ನೇತೃತ್ವದ ಸರ್ಕಾರ 6 ತಿಂಗಳು ಪೂರೈಸಿದ ಸಂತಸದಲ್ಲಿರುವ ಸಿಎಂ ಬೊಮ್ಮಾಯಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಿಎಂಗೆ ಶುಭಕೋರಲು ಸಚಿವರು ಹಾಗೂ ಶಾಸಕರು ಆರ್ಟಿ ನಗರದ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ರಾಮದಾಸ್ ಸೇರಿದಂತೆ ಹಲವು ನಾಯಕರು ದಂಡು ಆಗಮಿಸಿದೆ.
ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದ್ರೂ ರಾಜ್ಯಾದ್ಯಂತ ಶುಭಾಶಯಗಳು ಬರುತ್ತಿವೆ. ನಮ್ಮ ಸಚಿವರು ಶಾಸಕರು ನಮ್ಮ ಕ್ಷೇತ್ರದ ಜನ ಶುಭಾಶಯ ಕೋರುತ್ತಿದ್ದಾರೆ. ನನ್ನ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿ ನಿನ್ನೆಯೇ ಶುಭ ಕೋರಿದ್ದರು. ಇಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಅಮಿತ್ ಶಾ ದೂರವಾಣಿ ಕರೆ ಮಾಡಿ ಶುಭ ಕೋರಿದರು. ಎಲ್ಲರಿಗೂ ತುಂಬ ಹೃದಯದ ಧನ್ಯವಾದಗಳು. ಇವರ ಶುಭಾಶಯ ಮತ್ತಷ್ಟು ಸ್ಪೂರ್ತಿ ನೀಡಿದೆ. ರಾಜ್ಯದ ಅಭಿವೃದ್ಧಿಯತ್ತ ಕೆಲಸ ಮಾಡುತ್ತೇನೆ ಎಂದರು. ಇನ್ನು ಇದೇ ವೇಳೆ ಕೋವಿಡ್ 50:50 ರೂಲ್ಸ್ ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಕೇಳಿದಾಗ ಸಿಎಂ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮ
ಇಂದು ಸಿಎಂ ಬಸವರಾಜ ಬೊಮ್ಮಾಯಿಗೆ ಡಬಲ್ ಸಂಭ್ರಮದಲ್ಲಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಇಂದಿಗೆ 6 ತಿಂಗಳು ತುಂಬಿದ ದಿನವೇ ಸಿಎಂ ಬೊಮ್ಮಾಯಿ ಜನ್ಮದಿನ. ಇಂದು 62ನೇ ವಸಂತಕ್ಕೆ ಸಿಎಂ ಬೊಮ್ಮಾಯಿ ಕಾಲಿಟ್ಟಿದ್ದಾರೆ. ಸದ್ಯ ತಮ್ಮ ಆಡಳಿತಾವಧಿ ಆರು ತಿಂಗಳ ಪೂರೈಕೆ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಸ್ವಂತ ಜಿಲ್ಲೆ ಉಸ್ತುವಾರಿ ನೀಡದ್ದಕ್ಕೆ ಎಂಟಿಬಿ ನಾಗರಾಜ್ ಬೇಸರ; ಸಿಎಂ ಬೊಮ್ಮಾಯಿ ವಿರುದ್ಧ ಬೆಂಬಲಿಗರ ಆಕ್ರೋಶ
Published On - 9:39 am, Fri, 28 January 22