ಸ್ವಂತ ಜಿಲ್ಲೆ ಉಸ್ತುವಾರಿ ನೀಡದ್ದಕ್ಕೆ ಎಂಟಿಬಿ ನಾಗರಾಜ್ ಬೇಸರ; ಸಿಎಂ ಬೊಮ್ಮಾಯಿ ವಿರುದ್ಧ ಬೆಂಬಲಿಗರ ಆಕ್ರೋಶ
ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಬೇಡ ಅನ್ನುತ್ತಿರುವ ಎಂಟಿಬಿ ನಾಗರಾಜ್, ಇಂದು ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ. ಸ್ವಂತ ಜಿಲ್ಲೆಯೇ ಉಸ್ತುವಾರಿ ನೀಡುವಂತೆ ಪಟ್ಟು ಬಿದ್ದಿದ್ದಾರೆ. ನಿನ್ನೆ ರಾತ್ರಿ ದೂರವಾಣಿಯ ಮೂಲಕ ಕರೆಮಾಡಿ ಸಿಎಂ ಜೊತೆ ಮಾತನಾಡಿದ್ದಾರೆ.
ದೇವನಹಳ್ಳಿ: ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೊವಿಡ್, ಜಿಲ್ಲಾ ಉಸ್ತುವಾರಿ (District Incharge) ಸಚಿವರನ್ನು ನೇಮಿಸಿ ಸರ್ಕಾರ ನಿನ್ನೆ (ಜನವರಿ 24) ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಸ್ವಂತ ಜಿಲ್ಲೆ ಉಸ್ತುವಾರಿ ನೀಡದ್ದಕ್ಕೆ ಎಂಟಿಬಿ ನಾಗರಾಜ್ (MTB Nagaraj) ಬೇಸರಗೊಂಡಿದ್ದಾರೆ. ಈ ಹಿನ್ನೆಲೆ ಇಂದು (ಜ.25) ಹಮ್ಮಿಕೊಂಡಿದ್ದ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳನ್ನ ರದ್ದುಗೊಳಿಸಿದ್ದಾರೆ. ಬೆಳಗಿನಿಂದ ಯಾರ ಸಂಪರ್ಕಕ್ಕೂ ಸಿಗದೆ ಸಚಿವರು ಮೌನಕ್ಕೆ ಶರಣಾಗಿದ್ದಾರೆ. ಸದ್ಯ ಕಲ್ಲುಕುಂಟೆ ಅಗ್ರಹಾರದಲ್ಲಿನ ಅಭಿವೃದ್ಧಿ ಕಾರ್ಯಕ್ರಮ ರದ್ದುಗೊಳಿಸಿದ ಎಂಟಿಬಿ, ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಭೇಟಿಗೆ ತೆರಳಿದರು.
ಈ ಹಿಂದೆಯೂ ಕೋಲಾರ ಉಸ್ತುವಾರಿ ನೀಡಿದ್ದಕ್ಕೆ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದರು. ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೀಡದೆ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಸ್ವಂತ ಜಿಲ್ಲೆ ಉಸ್ತುವಾರಿ ನೀಡುವಂತೆ ಎಂಟಿಬಿ ಪರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ನೀಡದಿದ್ದಲ್ಲಿ ಮುಂದೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಪೋಸ್ಟ್ ಮಾಡಿರುವ ಅಭಿಮಾನಿಗಳು, ಸಿಎಂ ಬೊಮ್ಮಾಯಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಬೇಡ ಅನ್ನುತ್ತಿರುವ ಎಂಟಿಬಿ ನಾಗರಾಜ್, ಇಂದು ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ. ಸ್ವಂತ ಜಿಲ್ಲೆಯೇ ಉಸ್ತುವಾರಿ ನೀಡುವಂತೆ ಪಟ್ಟು ಬಿದ್ದಿದ್ದಾರೆ. ನಿನ್ನೆ ರಾತ್ರಿ ದೂರವಾಣಿಯ ಮೂಲಕ ಕರೆಮಾಡಿ ಸಿಎಂ ಜೊತೆ ಮಾತನಾಡಿದ್ದಾರೆ. ಇವತ್ತು ನೇರವಾಗಿ ಬಂದು ಸಿಎಂ ಭೇಟಿ ಮಾಡಿದ್ದಾರೆ. ನಿನ್ನೆ ಸಚಿವ ಸುಧಾಕರ್ ಜೊತೆಯೂ ಈ ಬಗ್ಗೆ ಮಾತನಾಡಿದ್ದರು. ನನಗೂ ಬೇಸರವಿದೆ ಚಿಕ್ಕಬಳ್ಳಾಪುರ ನನಗೆ ಬೇಕು ಅಂತ ಸಚಿವ ಸುಧಕಾರ್ ಹೇಳಿದ್ದಾರೆ. ಹೀಗಾಗಿ ಉಸ್ತುವಾರಿ ಸಚಿವ ಸ್ಥಾನ ಬದಲಾವಣೆಗೆ ಎಂಟಿಬಿ ಒತ್ತಾಯಿಸಿದ್ದಾರೆ. ಹಿಂದಿನ ರೀತಿಯಲ್ಲಿ ಮುಂದುವರಿಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
ಮಾಧುಸ್ವಾಮಿ ಅಸಮಾಧಾನ ತುಮಕೂರು ಜಿಲ್ಲಾ ಉಸ್ತುವಾರಿ ನೀಡದಿದ್ದಕ್ಕೆ ನೋವಿದೆ ಅಂತ ಸಚಿವ ಜೆಸಿ ಮಾಧುಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷ ನಿರ್ಧರಿಸಿದ ಮೇಲೆ ಯಾರನ್ನೂ ದೂರಲು ಆಗಲ್ಲ. ಉಸ್ತುವಾರಿ ನೀಡದ್ದಕ್ಕೆ ನನಗೆ ನೋವಿಲ್ಲ ಎನ್ನಲು ಆಗಲ್ಲ. ನನಗೆ ಯಾವುದೇ ನೋವಿಲ್ಲ ಎಂದರೆ ನಾಟಕೀಯವಾಗುತ್ತೆ. ನನಗೆ, ಅಶೋಕ್‌ಗೆ ಜಿಲ್ಲಾ ಉಸ್ತುವಾರಿ ಕೊಡಲ್ಲ ಅನ್ನಲ್ಲ. ನಮಗೆ ಉಸ್ತುವಾರಿ ಕೊಡದ ಸ್ಥಿತಿಯಲ್ಲಿ ಸಿಎಂ ಇಲ್ಲ. ಆದರೆ ನಾವು ಬೇರೆ ಜಿಲ್ಲಾ ಉಸ್ತುವಾರಿ ಬೇಡ ಎಂದಿದ್ದೆವು ಅಂತ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ
ಕೊವಿಡ್, ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್; 28 ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿದ ರಾಜ್ಯ ಸರ್ಕಾರ
Published On - 11:02 am, Tue, 25 January 22